ADVERTISEMENT

ಧರಣಿ ಕೈಬಿಟ್ಟ ನಿವೇಶನ ರಹಿತರು

ಅನಿರ್ದಿಷ್ಟ ಕಾಲ ಅಹೋರಾತ್ರಿ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 15:26 IST
Last Updated 11 ಡಿಸೆಂಬರ್ 2019, 15:26 IST
ಮಧುಗಿರಿ ತಾಲ್ಲೂಕು ಬ್ಯಾಲ್ಯ ಗ್ರಾಮದ ಬಡ ಜನರಿಗೆ ನಿವೇಶನ ನೀಡಲು ಜಿಲ್ಲಾಡಳಿತ ಸ್ಪಂದಿಸಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ ಮತ್ತಿತರೆ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಜತೆ ಮಾತನಾಡಿದರು.
ಮಧುಗಿರಿ ತಾಲ್ಲೂಕು ಬ್ಯಾಲ್ಯ ಗ್ರಾಮದ ಬಡ ಜನರಿಗೆ ನಿವೇಶನ ನೀಡಲು ಜಿಲ್ಲಾಡಳಿತ ಸ್ಪಂದಿಸಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ ಮತ್ತಿತರೆ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರ ಜತೆ ಮಾತನಾಡಿದರು.   

ತುಮಕೂರು: ಜಿಲ್ಲಾಡಳಿತವು ಮಧುಗಿರಿ ತಾಲ್ಲೂಕು ಬ್ಯಾಲ್ಯ ಗ್ರಾಮದ ಬಡ ಜನರಿಗೆ ನಿವೇಶನ ನೀಡಲು ಸ್ಪಂದಿಸಿದ ಹಿನ್ನೆಲೆಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸದಸ್ಯರುಅನಿರ್ದಿಷ್ಟ ಕಾಲ ಅಹೋರಾತ್ರಿ ಪ್ರತಿಭಟನೆ ಕೈಬಿಟ್ಟಿದ್ದಾರೆ.

ನಿವೇಶನ ನೀಡುವಂತೆ ಒತ್ತಾಯಿಸಿ ಸಂತ್ರಸ್ತರು ಕಳೆದ 14 ದಿನಗಳಿಂದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ತುಮಕೂರು ಜಿಲ್ಲಾ ಘಟಕದ ನೇತೃತ್ವದಲ್ಲಿ ಅನಿರ್ದಿಷ್ಟ ಕಾಲ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು.

ಈ ನಡುವೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಲು ದೊಡ್ಡಹೊಸಹಳ್ಳಿ ಗ್ರಾಮದ ಸರ್ವೆ ನಂ.127 ರಲ್ಲಿ 1 ಎಕರೆ 31 ಗುಂಟೆ ಹಾಗೂ ಸರ್ವೆ ನಂ.129 ರಲ್ಲಿ 2 ಎಕರೆ 31 ಗುಂಟೆ ಜಮೀನು ಮಂಜೂರು ಮಾಡಿ ಆದೇಶಿಸಿದ್ದರು. ಆದರೆ, ಈ ಜಾಗದಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿದ್ದಲ್ಲದೆ, ತುಂಬಾ ತಗ್ಗಾದ ಪ್ರದೇಶವಾಗಿದೆ ಎಂದು ಸಂತ್ರಸ್ತರು ಒಪ್ಪಲು ನಿರಾಕರಿಸಿದ್ದರು.

ADVERTISEMENT

ಅಲ್ಲದೆ, ಈ ಜಾಗದಲ್ಲಿ ಚಿರತೆ, ಕರಡಿಗಳ ಕಾಟವಿದೆ. ಮುಖ್ಯವಾಗಿ ಈ ಸರ್ವೆ ನಂ ಪಕ್ಕದಲ್ಲಿ ಈ ಹಿಂದೆ ಇದೇ ಗ್ರಾಮದ ಜನರಿಗೆ ನಿವೇಶನ ನೀಡಿದ್ದು, ಜನರು ಯೋಗ್ಯವಾದ ಸ್ಥಳವಲ್ಲವಾದ್ದರಿಂದ ಈ ಸ್ಥಳಕ್ಕೆ ಹೋಗಿಲ್ಲ ಹಾಗೂ ಈ ಸ್ಥಳ ಬ್ಯಾಲ್ಯ ಗ್ರಾಮದಿಂದ 3 ಕಿ.ಮೀ ದೂರವಿದೆ. ಹಾಗಾಗಿ ಬಡವರಾದ ನಾವು ಹೋಗುವುದಿಲ್ಲ ಎಂದು ಪಟ್ಟು ಹಿಡಿದು, ಪ್ರತಿಭಟನೆ ಮುಂದುವರೆಸಿದ್ದರು.

ಇದೀಗ ಜಿಲ್ಲಾಡಳಿತ ಸ್ಪಂದಿಸಿ ನಿವೇಶನ ವಂಚಿತರು ಒತ್ತಾಯಿಸಿದ ಬ್ಯಾಲ್ಯ ಗ್ರಾಮದ ಗ್ರಾಮಠಾಣ ಜಾಗದಲ್ಲೇ 30 ಕುಂಟೆ ಜಾಗ ಗುರುತಿಸಿ ಒತ್ತುವರಿ ಜಾಗ ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸಿದೆ. ಈ ಸಂಬಂಧ ಪತ್ರ ಮುಖೇನ ಜಿಲ್ಲಾ ಪಂಚಾಯಿತಿ ಸಿಇಒಗೆ ಸೂಚಿಸಿರುವುದು ಹಾಗೂ ಇದರ ಪ್ರತಿಯನ್ನು ಪ್ರತಿಭಟನಾಕಾರರಿಗೆ ನೀಡಿದ ಹಿನ್ನೆಲೆಯಲ್ಲಿ ಬುಧವಾರ ಸಂಜೆ 6.30 ಕ್ಕೆ ಪ್ರತಿಭಟನೆ ಕೈ ಬಿಡಲಾಗಿದೆ.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಚನ್ನಬಸಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಮಧುಗಿರಿ, ತಹಸಿಲ್ದಾರ್ ನಂದೀಶ್, ಭೂಮಿ ಹೋರಾಟಗಾರ ಹಂದ್ರಾಳ್ ನಾಗಭೂಷಣ್, ಜೆಸಿಬಿ ವೆಂಕಟೇಶ್, ಟಿ.ಸಿ.ರಾಮಯ್ಯ, ಪ್ರಮುಖರಾದ ಭರತ್ ಕುಮಾರ್, ಮೋಹನ್ ಕುಮಾರ್, ಯೋಗೀಶ್ ಮೆಳೆಕಲ್ಲಹಳ್ಳಿ, ರಾಮಮೂರ್ತಿ, ಶಿವರಾಜು, ಮಲ್ಲಿಕಾರ್ಜುನ್, ತಿಮ್ಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.