ADVERTISEMENT

ಪಂಜಿನ ಕವಾಯತು, ದ್ರೋನ್ ಪ್ರದರ್ಶನ

ಫಲಪುಷ್ಪ ಪ್ರದರ್ಶನಕ್ಕೂ ಸಿದ್ಧತೆ; ದಸರಾಗೆ 5 ಆನೆ ಬರಲಿವೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 6:02 IST
Last Updated 17 ಆಗಸ್ಟ್ 2025, 6:02 IST
ದಸರಾ ಆನೆ
ದಸರಾ ಆನೆ   

ತುಮಕೂರು: ಜಿಲ್ಲಾ ಆಡಳಿತದಿಂದ ಅದ್ದೂರಿಯಾಗಿ ದಸರಾ ಆಚರಣೆಗೆ ಸಿದ್ಧತೆಗಳನ್ನು ಆರಂಭಿಸಲಾಗಿದ್ದು, ಪಂಜಿನ ಕವಾಯತು, ದ್ರೋನ್ ಪ್ರದರ್ಶನ, ಫಲಪುಷ್ಪ ಪ್ರದರ್ಶನ ಈ ಬಾರಿ ಗಮನ ಸೆಳೆಯಲಿವೆ.

ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಪಂಜಿನ ಕವಾಯತು, ದ್ರೋನ್ ಪ್ರದರ್ಶನ ನಡೆಯಲಿದೆ. ಗಾಜಿನ ಮನೆಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ನೇತೃತ್ವದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ದಸರಾ ಆಚರಣೆ ಬಗ್ಗೆ ಚರ್ಚಿಸಲಾಯಿತು.

ADVERTISEMENT

ಸಭೆ ನಂತರ ಮಾಹಿತಿ ನೀಡಿದ ಸಚಿವರು, ‘ಕಳೆದ ಬಾರಿ ದಸರಾ ಮೆರವಣಿಗೆಗೆ ಎರಡು ಆನೆಗಳನ್ನು ತರಿಸಿದ್ದು, ಈ ಬಾರಿ ಐದು ಆನೆಗಳನ್ನು ಕರೆತರಲಾಗುತ್ತಿದೆ. ಇಸ್ರೋ, ಎಚ್‌ಎಎಲ್ ವತಿಯಿಂದ ವೈಜ್ಞಾನಿಕ ಮತ್ತು ತಾಂತ್ರಿಕ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ಯುವ ದಸರಾ, ಮಹಿಳಾ ಮತ್ತು ಮಕ್ಕಳ ದಸರಾ, ಕವಿಗೋಷ್ಠಿ ಸಹ ಆಯೋಜಿಸಲಾಗುತ್ತದೆ. ಸಿನಿಮಾ ನಟರು, ಸಂಗೀತ ನಿರ್ದೇಶಕರು ಸೇರಿದಂತೆ ಪ್ರಮುಖ ಕಲಾವಿದರನ್ನು ಆಹ್ವಾನಿಸಲಾಗುತ್ತದೆ’ ಎಂದರು.

ಈ ಬಾರಿ ಪಂಚಾಂಗದ ಪ್ರಕಾರ ನವರಾತ್ರಿ 11 ದಿನ ನಡೆಯಲಿದ್ದು, ಸೆ. 8ರಂದು ದಸರಾ ಉತ್ಸವದ ಲಾಂಛನ ಬಿಡುಗಡೆ ಮಾಡಲಾಗುತ್ತದೆ. ಸೆ. 22ರಂದು ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಇದೇ ಸಮಯದಲ್ಲಿ ನಗರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತದೆ ಎಂದು ಹೇಳಿದರು.

ದಸರಾ ಆಚರಣೆಯ ಕೊನೆಯ ದಿನವಾದ ಅ. 2ರಂದು ಮೈಸೂರು ದಸರಾ ಮಾದರಿಯಲ್ಲಿ ಜಂಬೂ ಸವಾರಿ ಮೆರವಣಿಗೆ ನಡೆಯಲಿದೆ. ಜನಪದ ಕಲಾ ತಂಡಗಳು, ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.