ADVERTISEMENT

ತುರುವೇಕೆರೆ | ದಸರಾ ಉದ್ಘಾಟನೆ: ಜಾತಿ, ಧರ್ಮದ ಲೇಪನ ಸಲ್ಲ: ಎಂ.ಟಿ.ಕೃಷ್ಣಪ್ಪ

ಶಾಸಕ ಎಂ.ಟಿ.ಕೃಷ್ಣಪ್ಪ ಅಭಿ‍ಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2025, 5:09 IST
Last Updated 6 ಸೆಪ್ಟೆಂಬರ್ 2025, 5:09 IST
ತುರುವೇಕೆರೆ ಜಿಜೆಸಿ ಕುವೆಂಪು ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು
ತುರುವೇಕೆರೆ ಜಿಜೆಸಿ ಕುವೆಂಪು ಸಭಾಂಗಣದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು   

ತುರುವೇಕೆರೆ: ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಸಾಹಿತ್ಯ ಸಾಧನೆ ಪರಿಗಣಿಸಿ ರಾಜ್ಯ ಸರ್ಕಾರ ಮೈಸೂರು ದಸರಾ ಉದ್ಘಾಟನೆಗೆ ಆಹ್ವಾನಿಸಿದೆ. ಇದಕ್ಕೆ ಧರ್ಮದ ಲೇಪನ ಮಾಡಿ ವಿರೋಧಿಸುವುದು ಸರಿಯಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಪ್ರತಿಪಾದಿಸಿದರು.

ಪಟ್ಟಣದ ಜಿಜೆಸಿ ಕುವೆಂಪು ಸಭಾಂಗಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ ಹಾಗೂ ಸಮನ್ವಯಾಧಿಕಾರಿ ಕಚೇರಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿದರು.

‘ಬಾನು ಮುಷ್ತಾಕ್ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿ, ಬೂಕರ್ ಪ್ರಶಸ್ತಿ ಪಡೆಯುವುದೆಂದರೆ ಸಾಮಾನ್ಯವೇನಲ್ಲ. ಈ ಪ್ರಶಸ್ತಿ ಗಳಿಸುವುದೆಂದರೆ ದೇಶವನ್ನು ಪ್ರತಿನಿಧಿಸಿದಂತೆ. ಇವರ ಒಂದಿಷ್ಟು ಲೇಖನಗಳನ್ನು ಸಹ ಓದಿದ್ದೇನೆ ಮತ್ತೆ ಮತ್ತೆ ಓದಬೇಕಿನಿಸುವ ಬರವಣಿಗೆ ಅವರದು. ಈ ಹಿಂದೆ ಕೂಡ ಕನ್ನಡದ ಖ್ಯಾತ ಸಾಹಿತಿ ಕೆ.ಎಸ್.ನಿಸ್ಸಾರ್ ಅಹಮದ್ ಅವರು ಕೂಡ ದಸರಾ ಉದ್ಘಾಟನೆ ಮಾಡಿದ್ದಾರು. ಹಿಂದೆ ಇಲ್ಲದ ಈ ವಿವಾದ ಈಗ ಏಕೆ ಮುನ್ನೆಲೆಗೆ ಬಂದಿದೆ ಎಂದು ವಿಷಾದಿಸಿದರು.

ಶಿಕ್ಷಕರ ನೇಮಕಾತಿ ಇಲ್ಲದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಆಗುತ್ತಿಲ್ಲ. ಈ ಬಗ್ಗೆ ಸದನದಲ್ಲಿಯೂ ಚರ್ಚಿಸಿದ್ದೇನೆ. ಆಂದ್ರ ಪ್ರದೇಶದ ಮಾದರಿಯಲ್ಲಿ ಅತಿಥಿ ಶಿಕ್ಷಕರಿಗೆ ಹೆಚ್ಚಿನ ಗೌರವಧನ ನೀಡಬೇಕು ಇಲ್ಲವೇ ಖಾಯಂಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ನಿವೃತ್ತ ಶಿಕ್ಷಕರು ಮತ್ತು ಉತ್ತಮ ಶಿಕ್ಷಕರನ್ನು ಸತ್ಕರಿಸಲಾಯಿತು. 

ಬಿಇಒ ಕಚೇರಿಯಿಂದ ರಾಧಾಕೃಷ್ಣನ್ ಭಾವಚಿತ್ರವನ್ನು ತೆರೆದ ವಾಹನದಲ್ಲಿ ವಾದ್ಯಗೋಷ್ಠಿ ಹಾಗೂ ಸೋಮನ ಕುಣಿತದೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

ಬಿಇಒ ಎನ್.ಸೋಮಶೇಖರ್, ಇ.ಒ.ಶಿವರಾಜಯ್ಯ, ಗ್ರೇಡ್‌-2 ತಹಶೀಲ್ದಾರ್ ಬಿ.ಸಿ.ಸುಮತಿ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಚಿದಾನಂದ್, ಸುರೇಶ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಅಕ್ಷರದಾಸೋಹದ ನಿರ್ದೇಶಕಿ ಎಚ್.ಕೆ.ಸವಿತಾ, ವ್ಯವಸ್ಥಾಪಕ ಕೃಷ್ಣಪ್ರಸಾದ್, ಕಸಾಪ ಅಧ್ಯಕ್ಷ ಡಿ.ಪಿರಾಜು, ಸಾವಿತ್ರಿಬಾಯಿ ಫುಲೆ ಸಂಘದ ಭವ್ಯಾ ಸಂಪತ್, ಇಸಿಒ ಸಿದ್ದಪ್ಪ, ವಕೀಲ ಧನಪಾಲ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.