ADVERTISEMENT

ದಸೂಡಿ: ಕಾಲೇಜಿಗೆ ಬೇಡಿಕೆ

ಸೌಲಭ್ಯಗಳ ಕೊರತೆ: ಗಗನ ಕುಸುಮವಾದ ಕಾಲೇಜು ಶಿಕ್ಷಣ

ಆರ್.ಸಿ.ಮಹೇಶ್
Published 19 ಮೇ 2025, 6:41 IST
Last Updated 19 ಮೇ 2025, 6:41 IST
ಹುಳಿಯಾರು ಹೋಬಳಿ ದಸೂಡಿ ಸರ್ಕಾರಿ ಪ್ರೌಢಶಾಲೆ
ಹುಳಿಯಾರು ಹೋಬಳಿ ದಸೂಡಿ ಸರ್ಕಾರಿ ಪ್ರೌಢಶಾಲೆ   

ಹುಳಿಯಾರು: ಹೋಬಳಿ ವ್ಯಾಪ್ತಿಯ ದಸೂಡಿ ಭಾಗ ಜಿಲ್ಲೆಯ ಗಡಿ ಭಾಗವಾಗಿದ್ದು, ಮೂಲ ಸೌಕರ್ಯಗಳ ಕೊರತೆ ನಡುವೆ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ. ಪದವಿ ಪೂರ್ವ ಶಿಕ್ಷಣ ಪಡೆಯಲು ಉತ್ತಮ ವ್ಯವಸ್ಥೆಯಿಲ್ಲದೆ ಉನ್ನತ ಶಿಕ್ಷಣದ ಕನಸು ವಿದ್ಯಾರ್ಥಿಗಳ ಪಾಲಿಗೆ ಗಗನ ಕುಸುಮವಾಗಿದೆ.

ದಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಅತ್ಯಂತ ಹಿಂದುಳಿದ ಪ್ರದೇಶ. 12ಕ್ಕೂ ಹೆಚ್ಚು ಗೊಲ್ಲರಹಟ್ಟಿ, 9ಕ್ಕೂ ಹೆಚ್ಚು ಲಂಬಾಣಿ ತಾಂಡಾ ಹಾಗೂ 6 ಪರಿಶಿಷ್ಟ ಜಾತಿ ಹಾಗೂ ವರ್ಗದ ಜನರಿರುವ ಪ್ರದೇಶವಾಗಿದೆ. ಕೂಲಿ ಕಾರ್ಮಿಕರು, ಕುರಿಗಾಹಿಗಳು, ರೈತರೇ ಹೆಚ್ಚಿರುವ ಈ ಪ್ರದೇಶ ಆರ್ಥಿಕವಾಗಿಯೂ ಹಿಂದುಳಿದಿದೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೇಂದ್ರದಿಂದ 50 ಕಿ.ಮೀ ದೂರದಲ್ಲಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕು ಕೇಂದ್ರಕ್ಕೆ 35 ಕಿ.ಮೀ ಅಂತರದಲ್ಲಿದೆ. ವಿದ್ಯಾರ್ಥಿಗಳೂ ವಿದ್ಯಾಭ್ಯಾಸಕ್ಕೆ ಆರೇಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಮಧ್ಯೆ ದಸೂಡಿಯಲ್ಲಿರುವ ಸರ್ಕಾರಿ ಪ್ರೌಢಶಾಲೆಯೇ ಬಹುದೊಡ್ಡ ಶಿಕ್ಷಣ ಕೇಂದ್ರವಾಗಿದೆ. ಈ ಭಾಗದಲ್ಲಿ ಹೆಚ್ಚು ಕೂಲಿ ಕಾರ್ಮಿಕರು ಇರುವ ಕಾರಣ ಶಾಲೆ ಬಿಟ್ಟ ಮಕ್ಕಳು ಹೆಚ್ಚಿದ್ದಾರೆ. ‍‍ಕಾಲೇಜು ಶಿಕ್ಷಣಕ್ಕೆ ಇನ್ನೂ ಕಷ್ಟವಾಗಿದೆ.

ADVERTISEMENT

ಕಾಡುಗೊಲ್ಲರ ಹಟ್ಟಿಗಳಿದ್ದು ಹೆಚ್ಚಿನವರು ಕುರಿ ಸಾಕಾಣಿಕೆದಾರರು. ಸಾಮಾನ್ಯವಾಗಿ ಕುರಿಗಾಹಿಗಳು ವರ್ಷದಲ್ಲಿ 6 ತಿಂಗಳು ವಲಸೆ ಹೋಗುತ್ತಾರೆ. ಉತ್ತಮ ಶಿಕ್ಷಣ ಲಭ್ಯವಾಗದ ಕಾರಣ ವಿದ್ಯಾಭ್ಯಾಸ ಮೊಟುಕುಗೊಳಿಸಿ ಪೋಷಕರಿಗೆ ಹೊರೆಯಾಗುತ್ತಿದ್ದಾರೆ. ಹೆಣ್ಣು ಮಕ್ಕಳ ಕಾಲೇಜು ಶಿಕ್ಷಣ ಸಾಧ್ಯವಾಗದೆ ಬಾಲ್ಯವಿವಾಹವೂ ಹೆಚ್ಚುತ್ತಿವೆ. ಯಾದವ ಸಮುದಾಯದವರು ದೂರದ ಪಟ್ಟಣಗಳಿಗೆ ಕಾಲೇಜು ಶಿಕ್ಷಣಕ್ಕೆ ಹೆಣ್ಣು ಮಕ್ಕಳನ್ನು ಕಳುಹಿಸಲು  ಹಿಂದೇಟು ಹಾಕುತ್ತಾರೆ. ದಸೂಡಿ ಸರ್ಕಾರಿ ಪ್ರೌಢಶಾಲೆಯ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ. ಪ್ರೌಢಶಾಲೆ ಜತೆ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ತೆರೆದರೆ ಬಹುತೇಕ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿದೆ ಎನ್ನುವುದು ಈ ಬಾಗದ ಸಾರ್ವಜನಿಕರ ಅಭಿಲಾಷೆ.

ಆರ್ಥಿಕ ಸವಾಲು ದಸೂಡಿ ಭಾಗದಲ್ಲಿ ಹೆಚ್ಚು ಗೊಲ್ಲರಹಟ್ಟಿಗಳಿದ್ದು ಶೈಕ್ಷಣಿಕವಾಗಿ ಹಿಂದುಳಿದಿದೆ. ಆರ್ಥಿಕ ಸಮಸ್ಯೆ ಕಾಲೇಜು ಶಿಕ್ಷಣಕ್ಕೆ ದೊಡ್ಡ ಹೊಡೆತ ನೀಡಿದೆ. ಹಣದ ಕೊರತೆ ದೂರದ ಕಾಲೇಜುಗಳಿಂದಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

-ಚಿತ್ತಯ್ಯ ಬಲ್ಲಪ್ಪನಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯ

ಪದವಿ ಪೂರ್ವ ಕಾಲೇಜು ಅವಶ್ಯಕ 10ನೇ ತರಗತಿ ಮುಗಿದ ಬಳಿಕ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣ ಮುಂದುವರೆಸಲು ಹಣದ ಸಮಸ್ಯೆಯಿಂದ ಬೇರೆ ವೃತ್ತಿಯತ್ತ ವಾಲುತ್ತಾರೆ. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಜನರು ಆರ್ಥಿಕವಾಗಿ ಸಬಲರಾಗಿಲ್ಲದ ಕಾರಣ ಕಾಲೇಜು ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಪದವಿ ಪೂರ್ವ ಕಾಲೇಜು ನೀಡಿದರೆ ಅನುಕೂಲ.

-ಕೆ.ಮರಿಯಪ್ಪ ದಸೂಡಿ ಗ್ರಾ.ಪಂ.ಸದಸ್ಯ

ಜಿಲ್ಲಾ ಮಂತ್ರಿಗಳಿಗೆ ಮನವಿ ದಸೂಡಿ ಭಾಗಕ್ಕೆ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿಸುವಂತೆ ಶಾಸಕರಿಗೆ ಒತ್ತಾಯ ಮಾಡಲಾಗಿದೆ. ಜಿಲ್ಲಾ ಮಂತ್ರಿಗಳಿಗೂ ಮನವಿ ಸಲ್ಲಿಸಲಾಗಿದೆ. ಪ್ರಸಕ್ತ ಸಾಲಿನಿಂದ ಪದವಿ ಪೂರ್ವ ಕಾಲೇಜು ಆರಂಭವಾದರೆ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ.

-ಪ್ರಸನ್ನಕುಮಾರ್‌ ತಾಲ್ಲೂಕು ಪಾಂಚಾಯಿತಿ ಮಾಜಿ ಸದಸ್ಯ

ಬಾಲ್ಯ ವಿವಾಹ ಹೆಚ್ಚಳ ಗೊಲ್ಲರಹಟ್ಟಿಗಳಲ್ಲಿ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿ ತೀರಾ ಕುಂಠಿತವಾಗಿದೆ. ತುಮಕೂರು ಜಿಲ್ಲೆಗಳ ಗಡಿಭಾಗವಾಗಿದ್ದು ಅಲೆಮಾರಿ/ ಅರೆ ಅಲೆಮಾರಿಗಳು ಮತ್ತು ಪಶುಪಾಲಕ ಸಮುದಾಯದ ಹಟ್ಟಿಗಳಿವೆ. ಪರಿಶಿಷ್ಟ ಜಾತಿ ಮತ್ತು ವರ್ಗಗಳಲ್ಲಿಯೂ ಅಲೆಮಾರಿಗಳಿದ್ದು ಕೂಲಿ ಕಸುಬು ಅವಲಂಬಿಸಿದ್ದಾರೆ. ಹೆಣ್ಣುಮಕ್ಕಳು ಪ್ರೌಢಶಾಲಾ ಶಿಕ್ಷಣ ಮುಗಿಯುವ ಮೊದಲೇ ಬಾಲ್ಯವಿವಾಹಕ್ಕೂ ಒಳಗಾಗುತಿದ್ದಾರೆ.

–ಉಜ್ಜಜ್ಜಿ ರಾಜಣ್ಣ ಅಲೆಮಾರಿ ಬುಡಕಟ್ಟು ಮಹಾಸಭಾದ ಉಪಾಧ್ಯಕ್ಷ

ಹಸನಾಗದ ಭವಿಷ್ಯ ಸಮೀಪದಲ್ಲಿ ಕಾಲೇಜು ಶಿಕ್ಷಣ ದೊರೆಯದೆ ಕಾರಣ ವಿದ್ಯಾರ್ಥಿಗಳ ಭವಿಷ್ಯ ಹಸನಾಗುತ್ತಿಲ್ಲ. ಹಲವು ವರ್ಷಗಳಿಂದ ದಸೂಡಿ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ತೆರೆಯಬೇಕು ಎಂಬ ಜನರ ಬಯಕೆಯನ್ನು ಸರ್ಕಾರ ಈಡೇರಿಸಬೇಕು.‌ ದಸೂಡಿ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ತೆರೆದರೆ ಗಾಣಧಾಳು ಗ್ರಾಮ ಪಂಚಾಯಿತಿ ವ್ಯಾಪ್ತಿ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ.

–ಪ್ರಸನ್ನ ದಸೂಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.