ADVERTISEMENT

ತುಮಕೂರು | ವರ್ಷಗಳು ಉರುಳಿದರೂ ಮುಗಿಯದ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 5:25 IST
Last Updated 8 ಡಿಸೆಂಬರ್ 2025, 5:25 IST
ತುಮಕೂರು ತಾಲ್ಲೂಕಿನ ವಡ್ಡರಹಳ್ಳಿಯಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿರುವುದು
ತುಮಕೂರು ತಾಲ್ಲೂಕಿನ ವಡ್ಡರಹಳ್ಳಿಯಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿರುವುದು   

ತುಮಕೂರು: ನಗರಕ್ಕೆ ಹೊಂದಿಕೊಂಡಂತೆ ಇರುವ ವಡ್ಡರಹಳ್ಳಿಯಲ್ಲಿ ಅಂಗನವಾಡಿ ಕೇಂದ್ರ ನಾಮಕಾವಸ್ತೆ ಎಂಬಂತೆ ನಡೆಯುತ್ತಿದೆ. ಒಂದು ಕಿರಿದಾದ ಮನೆಯಲ್ಲಿ ಮಕ್ಕಳ ಅರೆಬರೆ ಕಲಿಕೆ ಮುಂದುವರಿದಿದೆ. 2016–17ರಲ್ಲಿ ಮಂಜೂರಾದ ಅಂಗನವಾಡಿ ಕಟ್ಟಡ ಹಲವು ವರ್ಷ ಉರುಳಿದರೂ ಪೂರ್ಣಗೊಂಡಿಲ್ಲ.

ಕೊರಟಗೆರೆ ತಾಲ್ಲೂಕಿನ ಹುಲುವಂಗಲ, ಶಿರಾ ತಾಲ್ಲೂಕಿನ ತಿಮ್ಮನಹಳ್ಳಿ, ತುಮಕೂರಿನ ಸಿದ್ದಪ್ಪನಪಾಳ್ಯದ ಅಂಗನವಾಡಿಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಹೊಸ ಕಟ್ಟಡ ನಿರ್ಮಾಣ ಕಾರ್ಯ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ದಶಕ ಕಳೆಯುತ್ತಾ ಬಂದರೂ ಕಾಮಗಾರಿಗೆ ವೇಗ ನೀಡಿಲ್ಲ. ಪ್ಲಾಸ್ಟಿಂಗ್‌ ಹಂತದಲ್ಲಿಯೇ ಎಲ್ಲ ಕೆಲಸ ಸ್ಥಗಿತಗೊಂಡಿದೆ. ಮಕ್ಕಳು ಬಾಡಿಗೆ ಕಟ್ಟಡದಲ್ಲಿಯೇ ದಿನ ದೂಡುತ್ತಿದ್ದಾರೆ.

102 ಕಟ್ಟಡಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇದರಲ್ಲಿ ಬಹುತೇಕ ಕಟ್ಟಡಗಳು 2016–17 ಮತ್ತು 2021–22ರಲ್ಲಿ ಮಂಜೂರಾಗಿವೆ. ವಡ್ಡರಹಳ್ಳಿಯ ಸರ್ಕಾರಿ ಶಾಲೆ ಆವರಣದಲ್ಲಿಯೇ ಅಂಗನವಾಡಿ ಕಟ್ಟಡ ತಲೆ ಎತ್ತಿದೆ. ಆದರೆ ಇನ್ನೂ ಘಟಕಕ್ಕೆ ಉದ್ಘಾಟನಾ ಭಾಗ್ಯ ಕೂಡಿ ಬಂದಿಲ್ಲ. ಇದರಿಂದ ಮಕ್ಕಳಿಗೆ ಮನೆಯೊಂದರಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಲಾಗುತ್ತಿದೆ. ಅವರ ಆಟೋಟಕ್ಕೆ ಬೇಕಾದ ಜಾಗವೇ ಇಲ್ಲ. ಆಟ, ಪಾಠ, ಊಟ ಎಲ್ಲವೂ ಕಿರಿದಾದ ಕೊಠಡಿಯಲ್ಲಿಯೇ.

ADVERTISEMENT

‘ಸರ್ಕಾರ ಅಂಗನವಾಡಿಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಲು ಹೊರಟಿದೆ. ಈಗಿರುವ ಕೇಂದ್ರಗಳನ್ನು ಮೊದಲು ಸರಿ ದಾರಿಗೆ ತರಬೇಕು. ಇಲ್ಲಿನ ಅಂಗನವಾಡಿ ಕೇಂದ್ರ ಸರಿಯಾಗಿ ನಡೆಯುತ್ತಿಲ್ಲ. ಸುಮಾರು 10 ಮಕ್ಕಳು ಕೇಂದ್ರಕ್ಕೆ ಬರುತ್ತಾರೆ. ಪ್ರತಿ ದಿನ ಬಾಗಿಲು ತೆಗೆಯುವುದಿಲ್ಲ. ಕೇಂದ್ರ ಇದ್ದೂ ಇಲ್ಲದಂತಾಗಿದೆ’ ಎಂದು ವಡ್ಡರಹಳ್ಳಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ), ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಂಟಿಯಾಗಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಬಹುತೇಕ ಕಡೆ ನರೇಗಾ ಹಣ ಬಿಡುಗಡೆಯಾಗದೆ ಕಾಮಗಾರಿ ನಿಧಾನವಾಗುತ್ತಿದೆ.

ಈ ಮೊದಲು ನರೇಗಾದಡಿ ₹5 ಲಕ್ಷ, ಇಲಾಖೆಯಿಂದ ₹5 ಲಕ್ಷ ಸೇರಿ ₹10 ಲಕ್ಷದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿತ್ತು. ಪ್ರಸ್ತುತ ನರೇಗಾದ ₹8 ಲಕ್ಷ, ಇಲಾಖೆಯ ₹5 ಲಕ್ಷ ವೆಚ್ಚ ಮಾಡಲಾಗುತ್ತಿದೆ. ನಗರ ಭಾಗಕ್ಕೆ ಇಲಾಖೆಯಿಂದಲೇ ₹20 ಲಕ್ಷ ಅನುದಾನ ನೀಡಲಾಗುತ್ತಿದೆ. ನಗರ ಪ್ರದೇಶದಲ್ಲಿ ಇಂದಿಗೂ 95 ಕೇಂದ್ರಗಳು ಬಾಡಿಗೆ ಕಟ್ಟಡಗಳನ್ನು ಆಶ್ರಯಿಸಿವೆ. ಅನುದಾನ ಕೊರತೆ, ಗುತ್ತಿಗೆದಾರರ ನಿರ್ಲಕ್ಷ್ಯ, ಆಡಳಿತ ವರ್ಗದ ತಾತ್ಸಾರದಿಂದ ಹಲವು ಕಾಮಗಾರಿಗಳು ಆಮೆ ವೇಗದಲ್ಲಿ ನಡೆಯುತ್ತಿವೆ.

ವಡ್ಡರಹಳ್ಳಿಯಲ್ಲಿ ಈಗಿರುವ ಅಂಗನವಾಡಿ ಕೇಂದ್ರ

ಜಿಲ್ಲೆಯಲ್ಲಿ 4,199 ಅಂಗನವಾಡಿ ಕೇಂದ್ರ ಹಲವು ಕಡೆ ಕಟ್ಟಡದ ಕೊರತೆ ಬೇಕಿದೆ ಅಗತ್ಯ ಸೌಲಭ್ಯ

729 ಕೇಂದ್ರಕ್ಕಿಲ್ಲ ಸ್ವಂತ ಸೂರು ಜಿಲ್ಲೆಯಲ್ಲಿ ಒಟ್ಟು 4199 ಅಂಗನವಾಡಿ ಕೇಂದ್ರಗಳಿದ್ದು 729 ಕೇಂದ್ರಕ್ಕೆ ಸ್ವಂತ ಕಟ್ಟಡವಿಲ್ಲ. 663 ಅಂಗನವಾಡಿಗಳಿಗೆ ಪ್ರತಿ ತಿಂಗಳು ಬಾಡಿಗೆ ಪಾವತಿಸಲಾಗುತ್ತಿದೆ. ಉಳಿದ 66 ಕಟ್ಟಡಗಳನ್ನು ಉಚಿತವಾಗಿ ಬಳಸಿಕೊಳ್ಳಲಾಗುತ್ತಿದೆ. ಶಿರಾ ತಾಲ್ಲೂಕಿನ 105 ಕೇಂದ್ರಗಳು ಬಾಡಿಗೆ ಕಟ್ಟಡವನ್ನೇ ಅವಲಂಬಿಸಿವೆ. ಸಮುದಾಯ ಭವನ ಇತರೆ ಸರ್ಕಾರಿ ಕಚೇರಿಗಳಲ್ಲಿ ಮಕ್ಕಳು ಕಲಿಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.