
ಕುಣಿಗಲ್: ತಾಲ್ಲೂಕಿನ ವಾಣಿಗೆರೆ ದಯಾಭವನ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಆರು ವರ್ಷಗಳ ಹಿಂದೆ ಪ್ರಾರಂಭವಾದ ದಯಾಕಿರಣ ದತ್ತು ಕೇಂದ್ರ ಅತಿ ಹೆಚ್ಚು ಅನಾಥ, ಪರಿತ್ಯಕ್ತ ಮತ್ತು ವಶಕ್ಕೊಪಿಸಿದ ಮಕ್ಕಳ ಸಂರಕ್ಷಣೆ, ಪೋಷಣೆ ಮತ್ತು ದತ್ತು ನೀಡಿಕೆಯಲ್ಲೂ ದಾಖಲೆ ಮಾಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ.
ದಯಾಕಿರಣ ದತ್ತು ಕೇಂದ್ರ ರಾಜ್ಯದಲ್ಲೇ ಅತಿ ಹೆಚ್ಚು ಅನಾಥ ಮಕ್ಕಳ ಸಂರಕ್ಷಣೆ ಮಾಡುವುದರ ಜತೆಗೆ ಅತಿ ಹೆಚ್ಚು ಮಕ್ಕಳನ್ನು ರಾಜ್ಯ ಸೇರಿದಂತೆ ಇನ್ನಿತರ ರಾಜ್ಯಗಳ ಅರ್ಹ ದಂಪತಿಗಳಿಗೆ ದತ್ತು ನೀಡಿದೆ. ಅಂಗವಿಕಲ ಮಕ್ಕಳನ್ನು ವಿದೇಶಿ ದಂಪತಿಗಳಿಗೆ ದತ್ತು ನೀಡಿದೆ.
ಕೇರಳ ಮೂಲದ ದಯಾಭವನ ಸಂಸ್ಥೆ 2003ರಲ್ಲಿ ತಾಲ್ಲೂಕಿನ ಕೊತ್ತಗೆರೆ ಹೋಬಳಿ ವಾಣಿಗೆರೆಯಲ್ಲಿ ಕಾರ್ಯಾರಂಭಮಾಡಿದ್ದು, ಏಡ್ಸ್ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ದಾಖಲೆಮಾಡಿ ರಾಜ್ಯದ ಗಮನಸೆಳೆದಿತ್ತು. 2019ರಲ್ಲಿ ಜಿಲ್ಲೆಯ ಪ್ರಥಮ ದತ್ತುಕೇಂದ್ರವಾಗಿ ಕಾರ್ಯಾರಂಭ ಮಾಡಿತು. ಸಂಸ್ಥೆಯು ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಜಿಲ್ಲೆಯ ನಾನಾ ಭಾಗಗಳಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಅನಾಥವಾಗಿ ದೊರೆತ, ಅಶಕ್ತ ಪೋಷಕರಿಂದ ವಶಕ್ಕೊಪ್ಪಸಿದ 0-6 ವರ್ಷದ ಮಕ್ಕಳನ್ನು ಸಂರಕ್ಷಣೆ ಮತ್ತು ಪೋಷಣೆ ಮಾಡುತ್ತಿದೆ. ಇದುವರೆಗೂ 215 ಮಕ್ಕಳನ್ನು ಪೋಷಿಸಿದ್ದು, 125 ಮಕ್ಕಳನ್ನು ಅರ್ಹ ದಂಪತಿಗಳಿಗೆ ದತ್ತು ನೀಡಿದೆ.
ಕರ್ನಾಟಕ– 71, ಕೇರಳ–5, ತೆಲಂಗಾಣ– 11, ಆಂಧ್ರಪ್ರದೇಶ– 13, ತಮಿಳುನಾಡು– 8, ಪಶ್ಚಿಮ ಬಂಗಾಳ–1, ಮಹಾರಾಷ್ಟ್ರ–1, ಪುದುಚೆರಿ– 1 ಮಕ್ಕಳನ್ನು ದತ್ತು ನೀಡಿದೆ. 14 ಮಕ್ಕಳನ್ನು ವಿದೇಶಿ ದಂಪತಿಗಳಿಗೆ ದತ್ತು ನೀಡಿರುವುದು ವಿಶೇಷ. ಎಲ್ಲ ಮಕ್ಕಳು ಅಂಗವಿಕಲರಾಗಿದ್ದು ದೈಹಿಕ ನೂನ್ಯತೆ ಮತ್ತು ಬೆಳವಣಿಗೆಯಲ್ಲಿ ಕುಂಠಿತವಾಗಿರುವ ಮಕ್ಕಳನ್ನು ವಿದೇಶಿ ದಂಪತಿಗಳು ಬಯಸಿ ದತ್ತು ಪಡೆದಿದ್ದಾರೆ.
ತೊಟ್ಟಿಗೆ ಬೇಡ ತೊಟ್ಟಿಲಿಗೆ: ನಾನಾ ಕಾರಣಗಳಿಂದ ಹೆತ್ತವರಿಗೆ ಮಗು ಬೇಡವಾಗುತ್ತದೆ. ಅಂತಹ ಮಕ್ಕಳನ್ನು ನಿರ್ದಾಕ್ಷಿಣ್ಯವಾಗಿ ಚರಂಡಿ, ಬೇಲಿ ಮಗ್ಗುಲು, ಕಸದ ತೊಟ್ಟಿ, ಪಾಳುಬಿದ್ದ ಬಾವಿ, ಮಂಟಪಗಳಲ್ಲಿ ಹಾಕಿ ಹೋಗುವ ಪ್ರಸಂಗಗಳು ಹೆಚ್ಚಾಗುತ್ತಿದ್ದು. ಸಂಸ್ಥೆಯವರು ಬೇಡವಾದ ಮಕ್ಕಳನ್ನು ‘ತೊಟ್ಟಿಗೆ ಬೇಡ ತೊಟ್ಟಿಲಿಗೆ ಹಾಕಿ’ ಎಂಬ ಜಾಗೃತಿ ಕಾರ್ಯಕ್ರಮ ಮಾಡಿ ಸಂಸ್ಥೆ ಕಚೇರಿ ಸೇರಿದಂತೆ ಜಿಲ್ಲಾಸ್ಪತ್ರೆಯಲ್ಲಿ ‘ಮಮತೆಯ ತೊಟ್ಟಲು’ ಇಟ್ಟಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಒಂದು ಮತ್ತು ದಯಾಕಿರಣ ದತ್ತು ಕೇಂದ್ರದ ತೊಟ್ಟಿಲಿಗೆ 6 ಮಕ್ಕಳನ್ನು ತಂದು ಹಾಕಿದ್ದಾರೆ.
ದತ್ತು ನೀಡುವಿಕೆಯಲ್ಲಿ ಸಮಸ್ಯೆಗಳಿಗೆ ಗೊಂದಲಗಳಿಗೆ ಅವಕಾಶ ನೀಡದೆ ಕಾರ್ಯನಿರ್ವಹಿಸುತ್ತಿರುವ ದಯಾಕಿರಣ ದತ್ತು ಕೇಂದ್ರ ರಾಜ್ಯದಲ್ಲೇ ಅತಿ ಹೆಚ್ಚು ಮಕ್ಕಳನ್ನು ದತ್ತು ನೀಡಿದ ಸಂಸ್ಥೆ.ಪವಿತ್ರಾ ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ
ಎರಡು ವರ್ಷ ಪೋಷಕರೊಂದಿಗೆ ಸಂಪರ್ಕ ಸಂಸ್ಥೆ ದತ್ತು ನೀಡಿ ಕೈತೊಳೆದುಕೊಳ್ಳುವುದಿಲ್ಲ. ದತ್ತು ನೀಡಿದ ಬಳಿಕ ಎರಡು ವರ್ಷ ಪೋಷಕರ ಸಂಪರ್ಕದಲ್ಲಿದ್ದು ಮಗುವಿನ ಅನುಪಾಲನಾ ವರದಿ ದಾಖಲಿಸಲಾಗುತ್ತದೆ. ಎಚ್ಚರಿಕೆಯಿಂದ ಗಮನಿಸಿಲಾಗುತ್ತದೆ. ಪ್ರತಿವರ್ಷ ದತ್ತು ಪಡೆದ ಪೋಷಕರ ಮತ್ತು ಸಂಭವನೀಯ ಪೋಷಕರ ಸಭೆ ನಡೆಸಿ ಸರಿ-ತಪ್ಪುಗಳ ವಿಮರ್ಶೆ ಮಾಡಿ ಆತ್ಮಾವಲೋಕನ ಮಾಡಲಾಗುತ್ತದೆ. ಜೀನೇಶ್ ಕೆ. ವರ್ಕಿ ದಯಾಕಿರಣ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.