ADVERTISEMENT

ಅಸಮರ್ಪಕ ಕೆಲಸ; ಕಪ್ಪುಪಟ್ಟಿಗೆ ಸೇರಿಸಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 16:09 IST
Last Updated 1 ಆಗಸ್ಟ್ 2020, 16:09 IST

ತುಮಕೂರು: ಸರಿಯಾಗಿ ಕೆಲಸ ನಿರ್ವಹಿಸದ ಸಲಹಾ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಿ ಎಂದು ಸಂಸದ ಜಿ.ಎಸ್.ಬಸವರಾಜ್ ತಿಳಿಸಿದರು.

ತುಮಕೂರು ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿ, ‘ಕೆಲವು ಸಂಸ್ಥೆಗಳು ಡ್ರೋನ್ ಸರ್ವೆ ಮಾಡುತ್ತೇವೆ ಎಂದು ಹಣ ಕಬಳಿಸಿವೆ. ಆದರೆ ಯಾವುದೇ ಕರಾರುವಕ್ಕಾದ ಮಾಹಿತಿ ನೀಡಿಲ್ಲ. ಇಂತಹ ಸಲಹಾ ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸಿ. ಮಾಹಿತಿ ಪರಿಶೀಲಿಸದೆ ಬಿಲ್ ನೀಡಿರುವ ಅಧಿಕಾರಿಗಳ ವಿರುದ್ಧವೂ ಕ್ರಮಕೈಗೊಳ್ಳಿ’ ಎಂದು ಹೇಳಿದರು.

‘ಅಮಾನಿಕೆರೆ ರಾಜಕಾಲುವೆಗಳನ್ನು ಎರಡು ಬಾರಿ ಹೂಳುತೆಗೆದಿದ್ದೇವೆ ಎಂದು ಬಿಲ್ ಮಾಡಿದ್ದೀರಿ. ರಾಜಕಾಲುವೆ ಅಗಲ, ಉದ್ದ ಎಷ್ಟಿದೆ ಎಂಬ ನಿಖರ ಮಾಹಿತಿ ನಿಮ್ಮ ಬಳಿ ಇಲ್ಲ. ಸರ್ವೆಯರ್ ಸಮೀಕ್ಷೆ ಮಾಡಿದ್ದಾರೆ. ಗ್ರಾಮಗಳ ನಕ್ಷೆಯ ಮಾಹಿತಿ ಇದೆ. ಜತೆಗೆ ಡ್ರೋನ್ ಸರ್ವೆ ಮಾಡಿಸಿದ್ದೀರಿ. ಆದರೂ ನಿಖರವಾದ ಮಾಹಿತಿ ಸಂಗ್ರಹಿಸದೆ ಹೇಗೆ ಕೆಲಸ ಮಾಡುತ್ತೀರಿ’ ಎಂದು ಶಾಸಕ ಬಿ.ಜಿ.ಜ್ಯೋತಿ ಗಣೇಶ್ ಪ್ರಶ್ನಿಸಿದರು.

ADVERTISEMENT

ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್, ‘ಜಿಲ್ಲೆಯ ರಸ್ತೆಗಳ ನಕ್ಷೆಯನ್ನು ಪಿಎಂಜಿಎಸ್‍ವೈ ಇಲಾಖೆಯವರು ಮಾಡಿದ್ದಾರೆ. ಅದರಲ್ಲಿ ಜಿಲ್ಲೆಯಲ್ಲಿ ಎಷ್ಟು ಕಿ.ಮೀ ರಸ್ತೆ ಇದೆ. ಡಾಂಬರ್ ರಸ್ತೆ ಎಷ್ಟು, ಸಿಮೆಂಟ್ ರಸ್ತೆ ಎಷ್ಟು, ಜಲ್ಲಿ ರಸ್ತೆ ಎಷ್ಟು, ಮಣ್ಣಿನ ರಸ್ತೆ ಎಷ್ಟು ಎಂಬ ಜಿಐಎಸ್ ಆಧಾರಿತ ಮಾಹಿತಿ ಇದೆ’ ಎಂದರು.

ಮಹಾನಗರಪಾಲಿಕೆ ಆಯುಕ್ತೆ ರೇಣುಕಾ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ, ಟೂಡಾ ಆಯುಕ್ತ ಯೋಗಾನಂದ್‍, ಸ್ಮಾರ್ಟ್ ಸಿಟಿ ಮುಖ್ಯ ಎಂಜಿನಿಯರ್ ಸಿದ್ಧಗಂಗಯ್ಯ, ಸ್ಮಾರ್ಟ್ ಸಿಟಿ ಸಲಹಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.