ಗುಬ್ಬಿ: ತಾಲ್ಲೂಕಿನ ಸಿಎಸ್ ಪುರ ಮಾರ್ಗವಾಗಿ ಹಾದು ಹೋಗಿರುವ ರಾಜ್ಯ ಹೆದ್ದಾರಿ 84ರ ಜಿ. ಹೊಸಹಳ್ಳಿಯ ಬಳಿ ಹೆದ್ದಾರಿ ಪ್ರಾಧಿಕಾರದವರು ಅವೈಜ್ಞಾನಿಕವಾಗಿ ಟೋಲ್ ನಿರ್ಮಿಸಿ ಶುಲ್ಕ ವಸೂಲಾತಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ರೈತ ಸಂಘ ಹಾಗೂ ಸ್ಥಳೀಯರು ಶನಿವಾರ ಪಟ್ಟಣದಲ್ಲಿ ಸಭೆ ನಡೆಸಿದರು. ಟೋಲ್ ಸಂಗ್ರಹ ನಿಲ್ಲಿಸದಿದ್ದರೆ ಅಕ್ಟೋಬರ್ 27ರಂದು ಪ್ರತಿಭಟನೆ ನಡೆಸಲು ತೀರ್ಮಾನಿಸಿದರು.
ರೈತ ಸಂಘದ ಜಿಲ್ಲಾ ಘಟಕದ ಆಧ್ಯಕ್ಷ ಎ. ಗೋವಿಂದರಾಜು ಮಾತನಾಡಿ, ಹೆಚ್ಚು ವಾಹನಗಳು ಸಂಚರಿಸಿದ ಈ ರಸ್ತೆಯಲ್ಲಿ ಟೋಲ್ ಸಂಗ್ರಹ ಕೇಂದ್ರ ನಿರ್ಮಿಸಲು ಮುಂದಾಗಿರುವುದು ಖಂಡನೀಯ. ರೈತರು ಹಾಗೂ ಸ್ಥಳೀಯರಿಗೆ ತೊಂದರೆ ಕೊಡುವ ಉದ್ದೇಶದಿಂದಲೇ ಟೋಲ್ ಸಂಗ್ರಹಕ್ಕೆ ಮುಂದಾಗಿದ್ದಾರೆ. ಯಾವುದೋ ಕಾರ್ಪೊರೇಟ್ ಸಂಸ್ಥೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸ್ಥಳೀಯರಿಗೆ ತೊಂದರೆ ಕೊಡುತ್ತಿದ್ದಾರೆ. ಸಂಬಂಧಿಸಿದವರು ತಕ್ಷಣ ಎಚ್ಚೆತ್ತು ಸಂಗ್ರಹ ನಿಲ್ಲಿಸದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಟೋಲ್ ನಿರ್ಮಾಣದಿಂದಾಗಿ ಸ್ಥಳೀಯರಿಗೆ ಸಾಕಷ್ಟು ತೊಂದರೆಯಾಗುವುದು ಎನ್ನುವುದನ್ನು ಶಾಸಕರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಈಗಾಗಲೇ ಟೋಲ್ ಸಂಗ್ರಹಕ್ಕೆ ದರ ನಿಗದಿಪಡಿಸಲಾಗಿದೆ ಎಂಬ ಮಾಹಿತಿ ಇದ್ದು, ಶಾಸಕರು ತಕ್ಷಣ ಸ್ಥಳೀಯರ ಪರವಾಗಿ ಧ್ವನಿ ಎತ್ತಬೇಕಿದೆ ಎಂದು ಹೇಳಿದರು.
ಮುಖಂಡ ಹೊನ್ನಗಿರಿಗೌಡ ಮಾತನಾಡಿ, ಸ್ಥಳೀಯರ ಹಿತದೃಷ್ಟಿಯಿಂದ ಪಕ್ಷಾತೀತವಾಗಿ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ. ಖಾಸಗಿ ಕಂಪನಿ ಹಿತಕ್ಕಾಗಿ ಟೋಲ್ ನಿರ್ಮಾಣವಾಗುತ್ತಿದ್ದು, ಯಾವುದೇ ಕಾರಣಕ್ಕೂ ಸ್ಥಳೀಯರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಹೆದ್ದಾರಿ ಸುತ್ತಲಿನ ಗ್ರಾಮಸ್ಥರ ಸೇರಿಸಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.
ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ಟೋಲ್ ನಿರ್ಮಾಣದಿಂದಾಗಿ ರೈತರು, ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ. ಅಧಿಕಾರಿಗಳು ಹಾಗೂ ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡು ನಿರ್ಮಾಣ ನಿಲ್ಲಿಸದಿರುವುದರಿಂದ ಪ್ರತಿಭಟನೆ ಅನಿವಾರ್ಯವಾಗುತ್ತಿದೆ ಎಂದು ಹೇಳಿದರು.
ಸಭೆಯಲ್ಲಿ ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಲೋಕೇಶ್ ಹಾಗೂ ಜಯದೇವ ಕುಮಾರ್, ಶಿವಕುಮಾರ್, ರೇಣುಕಾ ಪ್ರಸಾದ್, ನರೇಶ್, ಮಂಜುನಾಥ್, ಮಹಾದೇವಯ್ಯ, ಸಿ.ಕೆ. ಪ್ರಕಾಶ್, ಕುಮಾರ್, ಬಸವರಾಜು ಹಾಗೂ ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.