ADVERTISEMENT

’ಮಧುಗಿರಿ’ ಜಿಲ್ಲೆ ಘೋಷಣೆ ಮಾಡಿ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಶಾಸಕ ಡಾ.ಜಿ.ಪರಮೇಶ್ವರ ಪತ್ರ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 16:19 IST
Last Updated 30 ಸೆಪ್ಟೆಂಬರ್ 2019, 16:19 IST
ಡಾ.ಪರಮೇಶ್ವರ
ಡಾ.ಪರಮೇಶ್ವರ   

ತುಮಕೂರು: ತುಮಕೂರು ಜಿಲ್ಲೆಯ ಮಧುಗಿರಿಯು ಎಲ್ಲ ಹಂತದಲ್ಲಿಯೂ ಜಿಲ್ಲೆಯಾಗಿ ಪರಿವರ್ತನೆ ಹೊಂದಲು ಅರ್ಹತೆ ಹೊಂದಿದ್ದು, ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಶಾಸಕ ಡಾ.ಜಿ.ಪರಮೇಶ್ವರ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸೋಮವಾರ ಪತ್ರ ಬರೆದಿದ್ದಾರೆ.

ಮಧುಗಿರಿ, ಪಾವಗಡ, ಕೊರಟಗೆರೆ ಮತ್ತು ಶಿರಾ ಕಂದಾಯ ತಾಲ್ಲೂಕುಗಳನ್ನು ಒಟ್ಟುಗೂಡಿಸಿ ಪ್ರತ್ಯೇಕವಾಗಿ ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ಮಧುಗಿರಿ ತಾಲ್ಲೂಕು ಭೌಗೋಳಿಕವಾಗಿ ಹೆಚ್ಚಿನ ವಿಸ್ತಾರವನ್ನು ಹೊಂದಿದೆ. ಮಧುಗಿರಿ ಕೇಂದ್ರ ಸ್ಥಾನದಲ್ಲಿ ಲೋಕೋಪಯೊಗಿ, ಜಿಲ್ಲಾ ಪಂಚಾಯಿತಿ, ಬೆಸ್ಕಾಂ, ಡಿವೈಎಸ್ಪಿ, ಎತ್ತಿನಹೊಳೆ ಯೋಜನೆ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳ ಉಪವಿಭಾಗಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.

ADVERTISEMENT

ಹೆಚ್ಚುವರಿ ಜಿಲ್ಲಾ ನ್ಯಾಯಾಲಯವೂ ಮಧುಗಿರಿಯಲ್ಲಿದೆ. ಪ್ರತ್ಯೇಕ ಶೈಕ್ಷಣಿಕ ಜಿಲ್ಲೆಯಾಗಿರುವ ಮಧುಗಿರಿಯು ನೆರೆಯ ತಾಲ್ಲೂಕುಗಳಾದ ಪಾವಗಡ, ಕೊರಟಗೆರೆ ಮತ್ತು ಶಿರಾ ತಾಲ್ಲೂಕುಗಳಿಗೆ ಕೃಷಿ ಉತ್ಪನ್ನ, ವಾಣಿಜ್ಯ ಉತ್ಪನ್ನಗಳ ಮಾರುಕಟ್ಟೆಗೆ ಕೇಂದ್ರ ಸ್ಥಾನವಾಗಿದೆ ಎಂದು ಪತ್ರದಲ್ಲಿ ಡಾ.ಪರಮೇಶ್ವರ ವಿವರಿಸಿದ್ದಾರೆ.

ಎಲ್ಲ ಹಂತದಲ್ಲಿಯೂ ಜಿಲ್ಲೆಯಾಗಿ ಪರಿವರ್ತನೆ ಹೊಂದಲು ಅರ್ಹತೆ ಹೊಂದಿದೆ. ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂಬುದು ಆ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದೆ.ಹಾಗಾಗಿ ಪ್ರತ್ಯೇಕವಾಗಿ ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.