ADVERTISEMENT

ತುಮಕೂರು: ಹೂವು ಕೇಳುವವರೇ ಇಲ್ಲ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 3:39 IST
Last Updated 30 ಏಪ್ರಿಲ್ 2021, 3:39 IST
ಹೂವು ಮಾರಾಟ (ಸಾಂದರ್ಭಿಕ ಚಿತ್ರ)
ಹೂವು ಮಾರಾಟ (ಸಾಂದರ್ಭಿಕ ಚಿತ್ರ)   

ತುಮಕೂರು: ಕೋವಿಡ್–19 ಮಹಾಮಾರಿ ಪರಿಣಾಮ ಹೆಚ್ಚಿದಂತೆಲ್ಲ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅದೇ ರೀತಿ ಹೂವು ಬೆಳೆಗಾರರು ಹಾಗೂ ಮಾರಾಟಗಾರರ ಬದುಕು ಬೀದಿಗೆ ಬಂದಿದೆ.

ವಾರಾಂತ್ಯದ ಕರ್ಫ್ಯೂ ಮುಗಿದ ಎರಡೇ ದಿನಕ್ಕೆ ಲಾಕ್‌ಡೌನ್ ಜಾರಿಗೆ ಬಂದಿದೆ. ರಾತ್ರಿ ಕರ್ಫ್ಯೂ ಜಾರಿಮಾಡಿ, ಎಲ್ಲಾ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿದ ಸಮಯದಲ್ಲೇ ಹೂವಿನ ಬೆಲೆ ಕುಸಿದಿತ್ತು. ಈಗ ಲಾಕ್‌ಡೌನ್ ಜಾರಿಯಾದ ಎರಡೇ ದಿನಕ್ಕೆ ಹೂವಿನ ಬೆಲೆ ತೀವ್ರವಾಗಿ ಕುಸಿತ ಕಂಡಿದೆ. ಕಡಿಮೆ ಬೆಲೆಗೆ ಕೊಡುತ್ತೇವೆ ತೆಗೆದುಕೊಂಡು ಹೋಗಿ, ಎಷ್ಟಾಗುತ್ತದೆ ಅಷ್ಟು ಹಣ ಕೊಡಿ ಎಂದು ಹೂವು ಬೆಳೆಗಾರರು, ಮಾರಾಟಗಾರರು ಕೇಳಿಕೊಂಡರೂ ಕೊಂಡುಕೊಳ್ಳಲು ಯಾರೂ ಮುಂದಾಗುತ್ತಿಲ್ಲ. ಜನರಿಗೂ ಹೂವಿನ ಅಗತ್ಯ ಕಾಣುತ್ತಿಲ್ಲ.

ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಗುರುವಾರ ಹೂವಿನ ಬೆಲೆ ದಿಢೀರ್ ಕುಸಿತ ಕಂಡಿತ್ತು. ಮಾರು ₹5ರಿಂದ ₹15ರ ವರೆಗೆ ಮಾರಾಟವಾಯಿತು. ಕೆಲವು ಹೂಗಳನ್ನು ಮಾರಿಗೆ ₹5 ಕೊಟ್ಟು ತೆಗೆದುಕೊಳ್ಳಿ ಎಂದರೂ ಜನರು ಕೊಂಡುಕೊಳ್ಳುವ ಮನಸ್ಸು ಮಾಡಲಿಲ್ಲ. ಸೇವಂತಿಗೆ ಮಾರು ₹10, ಕನಕಾಂಬರ ₹10– ₹15,ಮಲ್ಲೆ ಹೂ ₹10ಕ್ಕೆ ಮಾರಾಟವಾಯಿತು.

ADVERTISEMENT

ಎರಡು ವಾರದ ಹಿಂದೆ, ಯುಗಾದಿ ಹಬ್ಬದ ಸಮಯದಲ್ಲಿ ಸೇವಂತಿಗೆ ಮಾರು ₹80ರಿಂದ ₹100ರ ವರೆಗೂ ಮಾರಾಟವಾಗಿತ್ತು. ಗುಲಾಬಿ ಹೂವು ಕೆ.ಜಿ ₹80ರಿಂದ ₹100ರ ವರೆಗೆ ಏರಿಕೆಯಾಗಿತ್ತು. ಏಪ್ರಿಲ್, ಮೇ ತಿಂಗಳಲ್ಲಿ ಹಬ್ಬ, ಉತ್ಸವ, ಜಾತ್ರೆ, ರಥೋತ್ಸವ, ಶುಭ ಕಾರ್ಯಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಹೂವಿಗೆ ಇನ್ನಿಲ್ಲದ ಬೇಡಿಕೆ. ಉತ್ತಮ ಬೆಲೆಯೂ ಸಿಗುತ್ತದೆ.

ಇಂತಹ ಮುಂದಾಲೋಚನೆಯಿಂದ ರೈತರು ಸಾಕಷ್ಟು ಪ್ರಮಾಣದಲ್ಲಿ ಹೂವು ಬೆಳೆಯುತ್ತಾರೆ. ಮಾರುಕಟ್ಟೆಗೆ ತರುತ್ತಿದ್ದಂತೆ ತಕ್ಷಣ ಮಾರಾಟವಾಗುತ್ತವೆ. ಹೂವು ಕಟ್ಟಿ ಮಾರಾಟ ಮಾಡುವವರಿಗೂ ಕೈತುಂಬ ಕೆಲಸ. ರಾತ್ರಿ, ಹಗಲು ಹೂವು ಕಟ್ಟಿ ಬೆಳಿಗ್ಗೆ ಮಾರಾಟ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ತುರ್ತು ಇದ್ದವರು ಮುಂಗಡವಾಗಿ ಕಾಯ್ದಿರಿಸಿ, ಮೊದಲೇ ಹಣಕೊಟ್ಟು ಹೂವು ಕಟ್ಟಿಸಿಕೊಂಡು ಹೋಗುತ್ತಾರೆ.

ಕೋವಿಡ್ ನಿಯಂತ್ರಣದ ಸಲುವಾಗಿ ಲಾಕ್‌ಡೌನ್ ಘೋಷಣೆ ಆಗುತ್ತಿದ್ದಂತೆ ಜಾತ್ರೆ, ಉತ್ಸವ, ಶುಭ ಕಾರ್ಯಗಳು ಸ್ಥಗಿತಗೊಂಡಿವೆ. ಮದುವೆಗಳು ನಡೆದರೂ ಕೆಲವು ವಿಚಾರಗಳಿಗೆ ಸೀಮಿತಗೊಂಡಿರುತ್ತವೆ. ಕಲ್ಯಾಣ ಮಂಟಪದ ಅಲಂಕಾರ ಸೇರಿದಂತೆ ವಿಜೃಂಭಣೆ ಕಂಡುಬರುವುದಿಲ್ಲ. ಏನಿದ್ದರೂ ಗಂಡು– ಹೆಣ್ಣಿಗೆ ಹಾರ, ಶಾಸ್ತ್ರ ಕಾರ್ಯಗಳಿಗೆ ಅತ್ಯಲ್ಪ ಪ್ರಮಾಣದಲ್ಲಿ ಹೂವು ಬಳಕೆಯಾಗುತ್ತವೆ. ಇನ್ನೂ ದೇವಸ್ಥಾನಗಳ ಬಾಗಿಲು ಬಂದ್ ಮಾಡಿದ್ದು, ದೇವರಿಗೆ ಹೂವಿನಿಂದ ಅಲಂಕಾರ ಮಾಡುವುದು ಕಡಿಮೆಯಾಗಿದೆ.

ಒಟ್ಟಾರೆಯಾಗಿ ಹೂವಿನ ಬಳಕೆ ಕಡಿಮೆಯಾಗಿದ್ದು, ಬೆಲೆ ಕುಸಿದಿದೆ. ಇನ್ನೂ 12 ದಿನಗಳ ಕಾಲ ಲಾಕ್‌ಡೌನ್ ಮುಂದುವರಿಯಲಿದೆ. ಪರಿಸ್ಥಿತಿ ಸುಧಾರಿಸದಿದ್ದರೆ ಇನ್ನಷ್ಟು ಸಮಯ ಲಾಕ್‌ಡೌನ್ ಜಾರಿಮಾಡುವ ಸಾಧ್ಯತೆಗಳು ಇವೆ. ಇದೇ ಪರಿಸ್ಥಿತಿ
ಇದ್ದರೆ ಮುಂದಿನ ದಿನಗಳಲ್ಲಿ ಹೂವಿನ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆ
ಇದೆ.

‘ಎಷ್ಟಾದರೂ ಕೊಟ್ಟು ತೆಗೆದುಕೊಂಡು ಹೋಗಿ ಎಂದರೂ ಯಾರೂ ಕೊಂಡುಕೊಳ್ಳುತ್ತಿಲ್ಲ. ರೈತರಿಗೂ ಏನೂ ಸಿಗುತ್ತಿಲ್ಲ.
ನಮಗೂ ನಾಲ್ಕು ಕಾಸು ಗಿಟ್ಟಲಿಲ್ಲ’ ಎಂದು ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಹೂವು ಮಾರಾಟ ಮಾಡುತ್ತಿದ್ದ ರಮೇಶ್
ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.