ADVERTISEMENT

ಗೌರವ ಧನ ಹೆಚ್ಚಿಸಿ: ಆಶಾ ಕಾರ್ಯಕರ್ತೆಯರ ಆಗ್ರಹ

ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 13:48 IST
Last Updated 16 ನವೆಂಬರ್ 2018, 13:48 IST
ಜಿಲ್ಲಾ ಪಂಚಾಯತಿ ಮುಂದೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡಿದರು
ಜಿಲ್ಲಾ ಪಂಚಾಯತಿ ಮುಂದೆ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಮಾಡಿದರು   

ತುಮಕೂರು: ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹಾಗೂ ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ (ಎಐಯುಟಿಯುಸಿ) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಟೌನ್‌ಹಾಲ್‌ ವೃತ್ತದಲ್ಲಿ ನೂರಾರು ಕಾರ್ಯಕರ್ತೆಯರು ಸಮಾವೇಶಗೊಂಡು ಬಿ.ಎಚ್‌.ರಸ್ತೆ ಮೂಲಕ ಜಿಲ್ಲಾ ಪಂಚಾಯಿತಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸುಮಾರು 40 ಸಾವಿರ ಮಂದಿ ಆಶಾ ಕಾರ್ಯಕರ್ತರು ಆರೋಗ್ಯ ಇಲಾಖೆಯಡಿ ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೂ ಸಹ ಕೇಂದ್ರ ಪ್ರೋತ್ಸಾಹ ಧನ ಮತ್ತು ರಾಜ್ಯದ ಗೌರವಧನ ವೇತನ ಮಾದರಿಯನ್ನು ಪದೇ ಪದೇ ಬದಲಾಯಿಸುತ್ತಿರುವ ಕಾರಣ ವರ್ಷಕ್ಕೆ ಮೂರ್ನಾಲ್ಕು ಬಾರಿ ಮಾತ್ರ ವೇತನ ಪಡೆಯುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ತಮ್ಮ ದುಡಿಮೆಯಿಂದಲೇ ಕುಟುಂಬಗಳನ್ನು ನಿರ್ವಹಿಸಬೇಕಾಗಿದೆ. ಆದರೆ ಇವರ ವೇತನವನ್ನು ತಾಯಿ ಮತ್ತು ಮಕ್ಕಳ ಟ್ರ್ಯಾಕಿಂಗ್ ವ್ಯವಸ್ಥೆ (ಎಂಸಿಟಿಎಸ್‌) ಅಥವಾ ಸಂತಾನೋತ್ಪತ್ತಿ ಮಕ್ಕಳ ಆರೋಗ್ಯ (ಆರ್‌ಸಿಎಚ್‌) ಪೋರ್ಟಲ್‌ಗೆ ಹೊಂದಿಸಿರುವುದರಿಂದ ತಿಂಗಳು ಪೂರ್ತಿ ಮಾಡಿದ ಕೆಲಸಕ್ಕೆ ಅರೆಬರೆ ವೇತನ ಪಡೆಯುವಂತಾಗಿದೆ. ಹಾಗಾಗಿ ಕೆಲಸ ಮಾಡಿದಷ್ಟು ವೇತನವನ್ನು ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಕನಿಷ್ಠ 6 ಸಾವಿರ ವೇತನ ನಿಗದಿಪಡಿಸಿ, ಪ್ರತಿ ತಿಂಗಳು ವೇತನ ನೀಡಬೇಕು. ಆರ್‌ಸಿಎಚ್ ಪೋರ್ಟಲ್‌ಗೆ ಆಶಾ ವೇತನ ಲಿಂಕ್ ಮಾಡಿರುವುದನ್ನು ರದ್ದು ಮಾಡಿ ಆಶಾ ಕಾರ್ಯಕರ್ತೆಯರು ದುಡಿದಷ್ಟು ವೇತನವನ್ನು ಪ್ರತಿ ತಿಂಗಳು ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸಂಘದ ಮುಖಂ‌ಡರಾದ ಡಿ.ನಾಗಲಕ್ಷ್ಮಿ, ಎಸ್.ಎನ್.ಸ್ವಾಮಿ, ಲತಾ ಹಾಗೂ ಅಶ್ವಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.