ADVERTISEMENT

ತುಮಕೂರು | ಕಲ್ಲಡ್ಕ ಪ್ರಭಾಕರ್‌ ಭಟ್‌ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 8:10 IST
Last Updated 26 ಡಿಸೆಂಬರ್ 2023, 8:10 IST

ತುಮಕೂರು: ಕೋಮು ಪ್ರಚೋದನೆ ಹೇಳಿಕೆ ನೀಡಿ, ಸಾರ್ವಜನಿಕರ ನಡುವೆ ದ್ವೇಷ ಬಿತ್ತುವ ಯತ್ನ ನಡೆಸಿದ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಎಪಿಸಿಆರ್‌ ಒತ್ತಾಯಿಸಿದೆ.

ಹಿಜಾಬ್‌ ವಿಚಾರದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಕಾರುವ ಹೇಳಿಕೆ ನೀಡಿದ್ದಾರೆ. ಕೋಮು ದ್ವೇಷದ ಭಾಷಣ ಮಾಡಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿಂದೆಯೂ ಇದೇ ರೀತಿ ಮಾತನಾಡಿದ್ದರು. ಮಹಿಳೆಯರ ಕುರಿತು ದ್ವೇಷ ಕಾರುವ, ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಹೇಳಿಕೆ ನೀಡಿದ್ದು, ಸೂಕ್ತ ಕ್ರಮ ಜರುಗಿಸಬೇಕು ಎಂದು ಎಪಿಸಿಆರ್‌ ಜಿಲ್ಲಾ ಘಟಕದ ಅಧ್ಯಕ್ಷ ತಾಜುದ್ದೀನ್‌ ಷರೀಫ್‌, ಕಾರ್ಯದರ್ಶಿ ಗೌಸ್‌ಪಾಷಾ ಆಗ್ರಹಿಸಿದ್ದಾರೆ.

ಮುಸ್ಲಿಮರು ತಮ್ಮ ಮನೆ ಹಾಗೂ ಮಸೀದಿಯಲ್ಲಿ ‘ಅಲ್ಲಾಹು ಅಕ್ಬರ್‌’ ಎಂದು ಘೋಷಣೆ ಕೂಗಲಿ. ಈ ದೇಶದಲ್ಲಿ ಹೇಳಬೇಕಿರುವುದು ಕೇವಲ ‘ರಾಮ’ ನಾಮ ಮಾತ್ರ. ‘ಅಲ್ಲಾಹು ಅಕ್ಬರ್‌’ ಎನ್ನಬೇಕಾದರೆ ನೀವು ಮುಸಲ್ಮಾನ್‌ ದೇಶಕ್ಕೆ ಹೋಗಿ’ ಎಂದು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ADVERTISEMENT

‘ದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗುತ್ತಿದೆ. ಹಿಂದೂಗಳಿಂದ ಮಾತ್ರ ರಾಷ್ಟ್ರ ಉಳಿಸಿಕೊಳ್ಳಲು ಸಾಧ್ಯ. ಮುಸ್ಲಿಮರಿಗೆ ಹಲವು ದೇಶಗಳಿವೆ. ಆದರೆ ಹಿಂದೂಗಳಿಗೆ ಬೇರೆ ಕಡೆ ಜಾಗ ಇಲ್ಲ. ಅದಕ್ಕಾಗಿ ನಾವು ಹೋರಾಟ ಮಾಡಬೇಕು. ನಮ್ಮ ದೇಶ ಉಳಿಸಬೇಕು’ ಎಂದು ಹೇಳಿ ಸಾರ್ವಜನಿಕರ ನಡುವೆ ಧಾರ್ಮಿಕ ಸಂಘರ್ಷ ಹುಟ್ಟು ಹಾಕಲು ಯತ್ನ ನಡೆಸಿದ್ದಾರೆ. ಅವರ ವಿರುದ್ಧ ಕೂಡಲೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.