ADVERTISEMENT

ಬಸ್‌ ಸೌಲಭ್ಯಕ್ಕೆ ಒತ್ತಾಯ

ಕುಣಿಗಲ್‌ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 6:03 IST
Last Updated 27 ಡಿಸೆಂಬರ್ 2022, 6:03 IST
ಕುಣಿಗಲ್‌ನಲ್ಲಿ ಸೋಮವಾರ ಸೂಕ್ತ ಸಮಯಕ್ಕೆ ಬಸ್‌ ಬಿಡುವಂತೆ ಆಗ್ರಹಿಸಿ ಶಾಲಾ– ಕಾಲೇಜು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು
ಕುಣಿಗಲ್‌ನಲ್ಲಿ ಸೋಮವಾರ ಸೂಕ್ತ ಸಮಯಕ್ಕೆ ಬಸ್‌ ಬಿಡುವಂತೆ ಆಗ್ರಹಿಸಿ ಶಾಲಾ– ಕಾಲೇಜು ವಿದ್ಯಾರ್ಥಿಗಳು ಎಬಿವಿಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು   

ಕುಣಿಗಲ್‌: ಸೂಕ್ತ ಸಮಯಕ್ಕೆ ಬಸ್‌ ಬಿಡುವಂತೆ ಆಗ್ರಹಿಸಿ ಶಾಲಾ–ಕಾಲೇಜಿನ ನೂರಾರು ವಿದ್ಯಾರ್ಥಿಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಗ್ರಾಮಾಂತರ ಭಾಗದಿಂದ ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಪಟ್ಟಣಕ್ಕೆ ತೆರಳುತ್ತಾರೆ. ಆದರೆ, ಸರಿಯಾದ ಸಮಯಕ್ಕೆ ಬಸ್‌ ಸೌಲಭ್ಯವಿಲ್ಲದೆ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್‌ ವ್ಯವಸ್ಥೆ ಕಲ್ಪಿಸಬೇಕು. ಕುಣಿಗಲ್‌ ನಿಂದ ತುಮಕೂರಿಗೆ ಸಂಚರಿಸುವ ಬಸ್‌ಗಳನ್ನು ಎಲ್ಲ ಹಳ್ಳಿಗಳಲ್ಲಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಚಾಲಕರು ಹಾಗೂ ನಿರ್ವಾಹಕರು ವಿದ್ಯಾರ್ಥಿಗಳ ಜತೆ ಸರಿಯಾದ ರೀತಿಯಲ್ಲಿ ವರ್ತಿಸುವುದಿಲ್ಲ. ತುಮಕೂರು– ಮೈಸೂರು ನಡುವೆ ಸಂಚರಿಸುವ ಬಸ್‌ಗಳಲ್ಲಿ ಸಂಚರಿಸಲು ಅವಕಾಶ ನೀಡುತ್ತಿಲ್ಲ. ಬೆಳಿಗ್ಗೆ 7ರಿಂದ 9.30 ಗಂಟೆವರೆಗೆ ಹೊಸದಾಗಿ ಕನಿಷ್ಠ 5 ಬಸ್‌ಗಳನ್ನು ಬಿಟ್ಟರೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

ADVERTISEMENT

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪರಮೇಶ್ವರ್‌ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಸಮಸ್ಯೆಯ ಕುರಿತು ಅಧಿಕಾರಿಗಳ ಗಮನಕ್ಕೆ ತಂದು, ಬಸ್‌ ಬಿಡಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಕೈ ಬಿಡಲಾಯಿತು.

ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ, ಕಾರ್ಯಕರ್ತರಾದ ರವೀಶ, ಹರ್ಷಿತಾ, ವಿಕಾಸ್‌, ಗಗನ್, ಚೇತನ್, ವಿನಯ, ಕುಶಾಲ್, ಶಶಿ, ಜೀವಿತಾ, ರಕ್ಷಿತಾ, ಯೋಗಿನಿ, ಚಂದನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.