ತುಮಕೂರು ಮಹಾನಗರ ಪಾಲಿಕೆ ಬಳಿ ಸೋಮವಾರ ಎನ್.ಆರ್.ಕಾಲೊನಿ ಅಭಿವೃದ್ಧಿ ಸಂಘದಿಂದ ದುರ್ಗಮ್ಮ ದೇವಸ್ಥಾನದ ಭೂಮಿ ರಕ್ಷಣೆಗೆ ಜಂಟಿ ಸಮೀಕ್ಷೆ ನಡೆಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಅವರಿಗೆ ಮನವಿ ಸಲ್ಲಿಸಲಾಯಿತು.
ತುಮಕೂರು: ನಗರದ ಕೋಡಿ ಬಸವೇಶ್ವರ ದೇವಸ್ಥಾನ ಸಮೀಪದ ದುರ್ಗಮ್ಮ ದೇವಸ್ಥಾನದ ಭೂಮಿ ರಕ್ಷಣೆಗೆ ಜಂಟಿ ಸಮೀಕ್ಷೆ ನಡೆಸುವಂತೆ ಆಗ್ರಹಿಸಿ ಎನ್.ಆರ್.ಕಾಲೊನಿ ಅಭಿವೃದ್ಧಿ ಸಂಘದಿಂದ ಮಹಾನಗರ ಪಾಲಿಕೆ ಮುಂಭಾಗ ಸೋಮವಾರ ಪ್ರತಿಭಟನೆ ನಡೆಯಿತು.
‘ಮೂಲ ದೇವಸ್ಥಾನ ಜಾಗದ ಸರ್ವೆ 170ರಲ್ಲಿ 2 ಎಕರೆ 16 ಗುಂಟೆ ಸರ್ಕಾರಿ ಪಡಾ ಜಮೀನಾಗಿದೆ. 1966ರಲ್ಲಿ ಉಪವಿಭಾಗಾಧಿಕಾರಿ ಭೂ ಮಂಜೂರಾತಿ ನಿಯಮ ಉಲ್ಲಂಘಿಸಿ, ಅಂದಿನ ಜಿಲ್ಲಾಧಿಕಾರಿ ಅನುಪಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಸದರಿ ಜಮೀನನ್ನು ಕೈಗಾರಿಕಾ ಉದ್ದೇಶಕ್ಕೆ ಎಂದು ಮಲ್ಲಾಚಾರ್, ಚೆಲುವಯ್ಯ, ಟಿ.ವಿ.ಶೇಷಪ್ಪ, ಮಹ್ಮದ್ ದಸ್ತಗೀರ್, ನರಸಿಂಹಯ್ಯ ಅವರಿಗೆ ಕಾನೂನು ಬಾಹಿರವಾಗಿ ಮಂಜೂರು ಮಾಡಿದ್ದರು’ ಎಂದು ಸಂಘದ ಅಧ್ಯಕ್ಷ ಕೆ.ದೊರೈರಾಜ್ ತಿಳಿಸಿದರು.
‘ಸದರಿ ಮಂಜೂರಾತಿ ವಿರುದ್ಧ ಎನ್.ಆರ್.ಕಾಲೊನಿಯ ಸಿ.ಎನ್.ವೆಂಕಟನರಸಯ್ಯ ಮತ್ತು ಇತರರು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಆಕ್ಷೇಪಣೆ ಸಲ್ಲಿಸಿದ್ದರು. 1978ರ ಏ. 25ರಂದು ಜಿಲ್ಲಾಧಿಕಾರಿ ನ್ಯಾಯಾಲಯವು ಸದರಿ ಜಮೀನನ್ನು ವಾಪಸ್ ಪಡೆದುಕೊಳ್ಳಬೇಕು. ದುರ್ಗಮ್ಮ ದೇವಿಯ ದೇವಾಲಯ ಮತ್ತು ಮಾದಿಗ ಜನಾಂಗದ ಶೈಕ್ಷಣಿಕ, ಧಾರ್ಮಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಮೀಸಲಿಡಬೇಕು ಎಂದು ಆದೇಶಿಸಿತ್ತು’ ಎಂದು ವಿವರಿಸಿದರು.
‘ಆದೇಶದ ವಿರುದ್ಧ ಸರ್ಕಾರಕ್ಕೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲಾಗಿತ್ತು. ಅಂದಿನ ಜಿಲ್ಲಾಧಿಕಾರಿ ಗೋಪಾಲಕೃಷ್ಣೇಗೌಡ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. 1990ರ ಮಾ.17ರಂದು ಭೂಮಿಯನ್ನು ಎನ್.ಆರ್.ಕಾಲೊನಿ ಜನರ ಬಳಕೆಗೆ ಮೀಸಲಿಡಲು ಪ್ರಸ್ತಾವನೆ ಸಲ್ಲಿಸುವಂತೆ ತಹಶೀಲ್ದಾರ್‌ಗೆ ಆದೇಶಿಸಿದ್ದರು’ ಎಂದು ಸ್ಪಷ್ಟಪಡಿಸಿದರು.
ಸ್ಲಂ ಸಮಿತಿಯ ಅಧ್ಯಕ್ಷ ಎ.ನರಸಿಂಹಮೂರ್ತಿ, ‘1966ರಲ್ಲಿ ಅಕ್ರಮವಾಗಿ ಮಂಜೂರಾತಿ ಮಾಡಿಸಿಕೊಂಡು ಪುರಸಭೆಯಲ್ಲಿ ಖಾತೆ ಪಡೆದವರ ಪೈಕಿ ಟಿ.ವಿ.ಶೇಷಪ್ಪ ಅವರ ಮಗ ಸುರೇಶ್ ಪೌತಿವಾರಸು ಮೇಲೆ ಖಾತೆ ಬದಲಾವಣೆಗೆ ಈಗ ಅರ್ಜಿ ಸಲ್ಲಿಸಿದ್ದಾರೆ’ ಎಂದರು.
ಈ ಹಿಂದೆಯೇ ಇಂತಹ ಪ್ರಯತ್ನ ಮಾಡಿದ್ದರು. ಆಗ ಎನ್.ಆರ್.ಕಾಲೊನಿ ಅಭಿವೃದ್ಧಿ ಸಂಘದಿಂದ ಸಲ್ಲಿಸಿದ್ದ ತಕರಾರು ಅರ್ಜಿ ಆಧಾರದ ಮೇಲೆ ಪಿಐಡಿ ವಜಾಗೊಳಿಸಿದ್ದರು. ಈ ಎಲ್ಲ ಬೆಳವಣಿಗೆ ಮುಚ್ಚಿಟ್ಟು, ಮತ್ತೊಮ್ಮೆ ಖಾತೆ ಬದಲಾವಣೆ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ಸದರಿ ಜಾಗವನ್ನು ಎನ್.ಆರ್.ಕಾಲೊನಿ ಜನರ ಅಭಿವೃದ್ಧಿಗೆ ಬಳಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ವಾಲೇಚಂದ್ರಯ್ಯ, ಶಾಂತಕುಮಾರ್, ಕೆ.ನರಸಿಂಹಮೂರ್ತಿ, ಬಿ.ಪಿ.ಅಂಜನಮೂರ್ತಿ, ರಾಜಣ್ಣ, ಟಿ.ಸಿ.ರಾಮಯ್ಯ, ಕೆಂಪರಾಜು, ಕಿಶೋರ್, ಸುನೀಲ್, ಟಿ.ಎನ್.ರಾಮು ಇತರರು ಹಾಜರಿದ್ದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.