ADVERTISEMENT

ಪಾವಗಡ ಜಿಲ್ಲಾ ಕೇಂದ್ರಕ್ಕೆ ಆಗ್ರಹ

ಗಡಿ ಪ್ರದೇಶಗಳಿಗೆ ಶಕ್ತಿ ತುಂಬಿ: ಸಾಹಿತಿ ಕುಂ. ವೀರಭದ್ರಪ್ಪ ಮನವಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 8:12 IST
Last Updated 19 ಮಾರ್ಚ್ 2023, 8:12 IST
ಪಾವಗಡದಲ್ಲಿ ಶನಿವಾರ ನಡೆದ ಏಳನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳಾಧ್ಯಕ್ಷರ ಮೆರವಣಿಗೆ ನಡೆಯಿತು(ಎಡಚಿತ್ರ). ವೇದಿಕೆ ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಸಮ್ಮೇಳನಾಧ್ಯಕ್ಷ ಹ. ರಾಮಚಂದ್ರ, ಶಾಸಕ ವೆಂಕಟರಮಣಪ್ಪ, ಸ್ವಾಮಿ ಜಪಾನಂದ ಜಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ ಹಾಗೂ ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು
ಪಾವಗಡದಲ್ಲಿ ಶನಿವಾರ ನಡೆದ ಏಳನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳಾಧ್ಯಕ್ಷರ ಮೆರವಣಿಗೆ ನಡೆಯಿತು(ಎಡಚಿತ್ರ). ವೇದಿಕೆ ಕಾರ್ಯಕ್ರಮದಲ್ಲಿ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಸಮ್ಮೇಳನಾಧ್ಯಕ್ಷ ಹ. ರಾಮಚಂದ್ರ, ಶಾಸಕ ವೆಂಕಟರಮಣಪ್ಪ, ಸ್ವಾಮಿ ಜಪಾನಂದ ಜಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ ಹಾಗೂ ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು   

ಪಾವಗಡ: ಪಟ್ಟಣದಲ್ಲಿ ಶನಿವಾರ ಏಳನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ರೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ವೆಂಕಟೇಶ್ ಮೆರವಣಿಗೆಗೆ ಚಾಲನೆ ನೀಡಿದರು. ವೀರಗಾಸೆ, ಚಕ್ಕೆ ಭಜನೆ, ಗಾರುಡಿ ಗೊಂಬೆ, ಡೋಲು, ತಮಟೆ ಮುಂತಾದ ಕಲಾ ತಂಡಗಳು ಭಾಗವಹಿಸಿದ್ದವು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾಹಿತಿ ಕುಂ. ವೀರಭದ್ರಪ್ಪ ಮಾತನಾಡಿ, ‘ಗಡಿ ಪ್ರದೇಶಗಳಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಸರ್ಕಾರ ಘೋಷಿಸಬೇಕು. ಕನ್ನಡ ಕಣ್ಣಾಗಬೇಕೆ ಹೊರತು ಕನ್ನಡಕವಾಗಬಾರದು’ ಎಂದು ತಿಳಿಸಿದರು.

ಅಂಕಲ್, ಆಂಟಿ ಸಂಸ್ಕೃತಿ ಕಲಿಸದೆ ಮಕ್ಕಳಿಗೆ ಅಪ್ಪ, ಅಮ್ಮನ ಭಾಷೆ ಕಲಿಸಬೇಕು. ಇಂಗ್ಲಿಷ್ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ವೃದ್ಧಾಶ್ರಮ ಸೇರಬೇಕಾಗುತ್ತದೆ. ಆಂಗ್ಲ ಮಾದ್ಯಮದಲ್ಲಿ ಕಲಿತ ಮಕ್ಕಳು ವಿದೇಶದಲ್ಲಿ ಕೆಲಸ ಮಾಡಲು ಹೋಗುತ್ತಾರೆ. ಶ್ರೀಮಂತರು, ಪ್ರಭಾವಿಗಳಾದರೂ ವೃದ್ಧಾಶ್ರಮ ಸೇರಬೇಕಾಗುತ್ತದೆ. ಆದ್ದರಿಂದ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಕೊಡಿಸಿ ಎಂದು ಸಲಹೆ ನೀಡಿದರು.

ADVERTISEMENT

ಆಂಧ್ರದ ಗಡಿಯಲ್ಲಿರುವ ಕನ್ನಡ ಶಾಲೆಗಳಲ್ಲಿ ಶಿಕ್ಷಕರು, ಪಠ್ಯಪುಸ್ತಕಗಳ ಸಮಸ್ಯೆ ಇದೆ. ಗಡಿ ಪ್ರದೇಶದ ಕನ್ನಡಿಗರಿಗೆ ಪ್ರಶಸ್ತಿ, ಪುರಸ್ಕಾರ, ಪ್ರಾಧಿಕಾರಗಳಲ್ಲಿ ಸದಸ್ಯತ್ವಕ್ಕೆ ಆದ್ಯತೆ ನೀಡಬೇಕು. ಗಡಿ ಭಾಷೆ ಬಗ್ಗೆ ನಿಘಂಟು ತಯಾರಿಸಬೇಕು ಎಂದರು.

ಶಾಸಕ ವೆಂಕಟರಮಣಪ್ಪ ಮಾತನಾಡಿ, ಇಲ್ಲಿನ ಬಹುತೇಕ ಜನತೆ ಕನ್ನಡ ಬರೆದು ಓದುತ್ತಾರೆ. ಮನೆಗಳಲ್ಲಿ ತೆಲುಗು ಮಾತನಾಡುತ್ತಾರೆ. ಅದೇ ರೀತಿ ಆಂಧ್ರ ಭಾಗದಲ್ಲಿ ಕನ್ನಡವನ್ನು ಸ್ವಚ್ಛವಾಗಿ ಮಾತನಾಡುತ್ತಾರೆ. ಸರ್ಕಾರ ಕಡ್ಡಾಯವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವಂತೆ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.

ಕನ್ನಡ ಭವನ ನಿರ್ಮಿಸಲು ಈಗಾಗಲೇ ನಿವೇಶನ ಮಂಜೂರು ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದರು.

ಸಮ್ಮೇಳನಾಧ್ಯಕ್ಷ ಹ. ರಾಮಚಂದ್ರ ಮಾತನಾಡಿ, ತಾಲ್ಲೂಕು ವಿಶಿಷ್ಟ ಭೌಗೋಳಿಕತೆ ಹೊಂದಿದೆ. ಇಲ್ಲಿನ ನೆಲದಲ್ಲಿ ಐತಿಹಾಸಿಕ ಸ್ಮಾರಕಗಳು, ಸಾಹಿತಿಗಳು, ಕವಿಗಳು, ಹೋರಾಟಗಾರರು ಇದ್ದಾರೆ ಎಂದು ಹೇಳಿದರು.

ಸ್ವಾಮಿ ಜಪಾನಂದ ಜಿ, ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ, ಇತಿಹಾಸ ಲೇಖಕ ವಿ.ಆರ್. ಚೆಲುವರಾಜನ್, ನೇ.ಭ. ರಾಮಲಿಂಗಶೆಟ್ಟಿ, ರೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ವೆಂಕಟೇಶ್, ಉಪ ನಿರ್ದೇಶಕ ಕೆ.ಜಿ. ರಂಗಯ್ಯ, ನಿವೃತ್ತ ಉಪ ಕಾರ್ಯದರ್ಶಿ ಎಚ್.ವಿ. ರಾಮಚಂದ್ರರಾವ್, ಎಂ.ಎಸ್. ವಿಶ್ವನಾಥ್, ಡಾ.ಕೆ.ಎಂ. ಪ್ರಭಾಕರ್, ಐ.ಎ. ನಾರಾಯಣಪ್ಪ, ಜಿ.ಪಿ. ಪ್ರಮೋದ್ ಕುಮಾರ್, ರಂಗಪ್ಪ ಮಾತನಾಡಿದರು. ಎಸ್‌ಎಸ್‌ಕೆ ಸಂಘದ ಅಧ್ಯಕ್ಷ ಕೆ.ವಿ. ಶ್ರೀನಿವಾಸ್, ಪುರಸಭೆ ಅಧ್ಯಕ್ಷೆ ಧನಲಕ್ಷ್ಮಿ, ಪ್ರಾಂಶುಪಾಲ ಕೆ.ಒ. ಮಾರಪ್ಪ, ಕಂಟಲಕೆರೆ ಸಣ್ಣಹೊನ್ನಯ್ಯ, ನಾಗರಾಜು, ಸಣ್ಣರಾಮರೆಡ್ಡಿ ಉಪಸ್ಥಿತರಿದ್ದರು.

ಕೃಷಿ ಮತ್ತು ಸಾಹಿತ್ಯ ಗೋಷ್ಠಿ: ಯುವಜನತೆ ಕನ್ನಡ ಭಾಷೆಯ ಅಧ್ಯಯನ ಮಾಡಬೇಕು ಎಂದು ಸಹ ಪ್ರಾಧ್ಯಾಪಕ ಡಾ.ಗೋವಿಂದರಾಜು ತಿಳಿಸಿದರು.

ಕೃಷಿ ಮತ್ತು ಸಾಹಿತ್ಯ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಹಾಯಕ ಪ್ರಾಧ್ಯಾಪಕ ಕುಮಾರ್ ಇಂದ್ರಬೆಟ್ಟ, ತಾಲ್ಲೂಕು ಉತ್ತಮ ಸಾಹಿತ್ಯಿಕ ಪರಂಪರೆ ಹೊಂದಿದೆ ಎಂದರು.

ಆಂಧ್ರದ ಅನಂತಪುರ ಕನ್ನಡ ಶಿಕ್ಷಕರ ಸಂಘದ ಅಧ್ಯಕ್ಷ ಗಿರಿಜಾಪತಿ, ‘ಆಂಧ್ರದಲ್ಲಿ 118 ಕನ್ನಡ ಶಾಲೆಗಳಿದ್ದು, 20 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿದ್ದಾರೆ. ಆಂಧ್ರದ ಕನ್ನಡ ಶಾಲೆಗಳಿಗೆ ಮೌಲ ಸೌಕರ್ಯ ಕಲ್ಪಿಸುವುದರೊಂದಿಗೆ ಕನ್ನಡ ಭವನ ಕಟ್ಟಿಸುವ ಕೆಲಸವಾಗಬೇಕು’ ಎಂದರು.

ಜನಪದ ಸಾಹಿತಿ ಸಣ್ಣನಾಗಪ್ಪ, ಎಫ್‌ಕೆಸಿಸಿಐ ನಿರ್ದೇಶಕ ಎಸ್. ನಂಜುಂಡಪ್ರಸಾದ್, ನಿಡಗಲ್ ಹೋಬಳಿಯ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್. ಮಂಜುನಾಥ್, ಬಿಇಒ ಅಶ್ವಥನಾರಾಯಣ, ಎನ್. ರಾಮಾಂಜಿನರೆಡ್ಡಿ, ರಾಮಚಂದ್ರಪ್ಪ, ಶಿವಣ್ಣ, ರಂಗಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.