ADVERTISEMENT

ಗುಬ್ಬಿ | ಅಕ್ರಮ ಮದ್ಯ ಮಾರಾಟ ತಡೆಯಲು ಆಗ್ರಹ

ಗೊಲ್ಲಹಳ್ಳಿ: ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 8:14 IST
Last Updated 19 ಮಾರ್ಚ್ 2023, 8:14 IST
ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪ ವಿಭಾಗಾಧಿಕಾರಿ ಹೋಟೆಲ್ ಶಿವಪ್ಪ. ತಹಶೀಲ್ದಾರ್ ಬಿ. ಆರತಿ ಹಾಜರಿದ್ದರು
ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಪ ವಿಭಾಗಾಧಿಕಾರಿ ಹೋಟೆಲ್ ಶಿವಪ್ಪ. ತಹಶೀಲ್ದಾರ್ ಬಿ. ಆರತಿ ಹಾಜರಿದ್ದರು   

ಗುಬ್ಬಿ: ಕಸಬಾ ಹೋಬಳಿಯ ಗೊಲ್ಲಹಳ್ಳಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಶನಿವಾರ ನಡೆಯಿತು. ಕಂದಾಯ, ಬೆಸ್ಕಾಂ, ಅಬಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರು ದೂರಿನ ಸುರಿಮಳೆಗೈದರು.

ಬೇಸಿಗೆಯಾಗಿರುವುದರಿಂದ ರೈತರಿಗೆ ಸಮರ್ಪಕವಾಗಿ ವಿದ್ಯುತ್‌ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು. ಗ್ರಾಮಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ತಡೆಗಟ್ಟಲು ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತುಮಕೂರು ಉಪ ವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ಅಧಿಕಾರಿಗಳು ಗ್ರಾಮಗಳಿಗೆ ಬರುತ್ತಿರುವುದರಿಂದ ರೈತರ ಕೆಲಸಗಳು ತುರ್ತಾಗಿ ಆಗಲು ಸಾಧ್ಯವಾಗುತ್ತಿದೆ. ಯಾವುದೇ ಸಮಸ್ಯೆಗಳು ಇದ್ದಲ್ಲಿ ರೈತರು ಮಧ್ಯವರ್ತಿಗಳ ಬಳಿ ಹೋಗಬಾರದು. ನೇರವಾಗಿ ಸಂಬಂಧಿಸಿದ ಇಲಾಖೆಯ ಮುಖ್ಯಸ್ಥರನ್ನು ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ADVERTISEMENT

ಎಲ್ಲಾ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು. ಜಟಿಲ ವಿಷಯಗಳನ್ನು ಸಂಬಂಧಿಸಿದ ಇಲಾಖೆ ಮೂಲಕ ಅಥವಾ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.

ತಹಶೀಲ್ದಾರ್ ಬಿ. ಆರತಿ ಮಾತನಾಡಿ, ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸ್ಥಳೀಯವಾಗಿ ಲಭ್ಯರಿರುತ್ತಾರೆ. ಇದರಿಂದ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗುತ್ತದೆ. ರೈತರ ಹಣ ಮತ್ತು ಸಮಯ ಉಳಿತಾಯವಾಗುವ ಜೊತೆಗೆ ಸಾಮಾಜಿಕ ಸಂಬಂಧಗಳು ವೃದ್ಧಿಸುತ್ತವೆ ಎಂದು ತಿಳಿಸಿದರು.

ಜನರು ಸಲ್ಲಿಸಿದ ಒಟ್ಟು 36 ಅರ್ಜಿಗಳ ಪೈಕಿ 23 ಕಂದಾಯ ಇಲಾಖೆಗೆ ಸಂಬಂಧಿಸಿದ್ದವು. ಸ್ಥಳದಲ್ಲಿಯೇ ಫಲಾನುಭವಿಗಳಿಗೆ ಪಿಂಚಣಿ ಪ್ರಮಾಣ ಪತ್ರ ವಿತರಿಸಲಾಯಿತು. ಜಮೀನುಗಳಿಗೆ ಹೋಗಲು ರಸ್ತೆಗೆ ಸಂಬಂಧಿಸಿದಂತೆ ಅನೇಕ ತಕರಾರು ಬಂದಿದ್ದರಿಂದ ಕೆಲವೆಡೆ ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.