ADVERTISEMENT

ತಿಪಟೂರು | 40 ಮಂದಿಗೆ ಡೆಂಗಿ ದೃಢ: ಆರೋಗ್ಯಾಧಿಕಾರಿ ಡಾ.ರಾಧಿಕಾ

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 13:41 IST
Last Updated 28 ಜುಲೈ 2024, 13:41 IST
ಡೆಂಗಿ ಹರಡುವ ಈಡಿಸ್ ಸೊಳ್ಳೆ (ಸಾಂದರ್ಭಿಕ ಚಿತ್ರ)
ಡೆಂಗಿ ಹರಡುವ ಈಡಿಸ್ ಸೊಳ್ಳೆ (ಸಾಂದರ್ಭಿಕ ಚಿತ್ರ)   

ತಿಪಟೂರು: ತಾಲ್ಲೂಕಿನಲ್ಲಿ ಈವರೆಗೆ 40 ಡೆಂಗಿ ಪ್ರಕರಣ ದೃಢಪಟ್ಟಿವೆ. ಡೆಂಗಿ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಧಿಕಾ ತಿಳಿಸಿದರು.

ನಗರ ಪ್ರದೇಶದಲ್ಲಿ 12 ಹಾಗೂ ಗ್ರಾಮೀಣ ಪ್ರದೇಶದಲ್ಲಿ 28 ಸೇರಿ ತಾಲ್ಲೂಕಿನಾದ್ಯಂತ ಒಟ್ಟು 40 ಡೆಂಗಿ ಪ್ರಕರಣ ಪತ್ತೆಯಾಗಿವೆ. ಇವರಲ್ಲಿ 17 ಮಂದಿ ವಯಸ್ಕರು ಹಾಗೂ 23 ಮಂದಿ ಮಕ್ಕಳಲ್ಲಿ ಡೆಂಗಿ ಜ್ವರ ಕಂಡು ಬಂದಿದೆ. ಇವರೆಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ತಾಲ್ಲೂಕಿನಲ್ಲಿ ಡೆಂಗಿ ನಿಯಂತ್ರಣಕ್ಕಾಗಿ ಮುನ್ನೆಚರಿಕೆ ಕ್ರಮವಾಗಿ ತಾಲ್ಲೂಕು ಆರೋಗ್ಯ ಇಲಾಖೆ ಹಳ್ಳಿಹಳ್ಳಿಗಳಲ್ಲೂ ಲಾರ್ವ ಸರ್ವೆ ನಡೆಸುತ್ತಿದ್ದು, ಜ್ವರ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ತೀವ್ರತರ ಜ್ವರ ಇರುವ ಊರುಗಳಲ್ಲಿ ಗ್ರಾ.ಪಂ. ಸಹಯೋಗದೊಂದಿಗೆ ಫಾಗಿಂಗ್ ಮಾಡಲಾಗುತ್ತಿದೆ ಎಂದರು.

ADVERTISEMENT

ತಾಲ್ಲೂಕು ಆಸ್ಪತ್ರೆಯಲ್ಲಿ ಡೆಂಗಿ ಪರೀಕ್ಷೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ತಾಲ್ಲೂಕಿನ 172 ಆಶಾ ಕಾರ್ಯಕರ್ತೆಯರು ಮತ್ತು ಕ್ಷೇತ್ರ ಸಿಬ್ಬಂದಿ ಪ್ರತಿ ಶುಕ್ರವಾರ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಅನಾರೋಗ್ಯಕ್ಕೆ ತುತ್ತಾಗಿರುವವರನ್ನು ಜ್ವರ ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ಈವರೆಗೆ 266 ಜನಕ್ಕೆ ಡೆಂಗಿ ಪರೀಕ್ಷೆ ಮಾಡಲಾಗಿದೆ. 40 ಜನರಿಗೆ ದೃಢಪಟ್ಟಿದೆ. 14 ದಿನ ಅವರ ಮೇಲೆ ನಿಗಾ ಇಡಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.