
ತುಮಕೂರು: ಪರಿಸರ ಸೂಕ್ಷ್ಮ ಪ್ರದೇಶವಾದ ತಾಲ್ಲೂಕಿನ ದೇವರಾಯನದುರ್ಗದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರವಾಸಿಗರನ್ನು ಆಕರ್ಷಿಸಿ ಹಣ ಸಂಪಾದನೆ ಮಾಡಲು ರೋಪ್‌ವೇ ನಿರ್ಮಾಣ ಮಾಡಿದರೆ ಈ ಭಾಗದಲ್ಲಿ ನೆಲೆಸಿರುವ ಪಕ್ಷಿಗಳಾದ ಹಳದಿ ಗಂಟಲಿನ ಬುಲ್ ಬುಲ್, ಜುಟ್ಟಿನ ಮರ ಸ್ವಿಪ್ಟ್ ಹಕ್ಕಿಗಳು ನಾಶ ಹೊಂದಲಿವೆ ಎಂದು ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ ಅಧ್ಯಕ್ಷ ಬಿ.ವಿ.ಗುಂಡಪ್ಪ ಎಚ್ಚರಿಸಿದ್ದಾರೆ.
ಈ ಪಕ್ಷಿಗಳು ವಿಶ್ವದಲ್ಲಿ ಎಲ್ಲೂ ಕಂಡು ಬರುವುದಿಲ್ಲ. ದೇವರಾಯನದುರ್ಗದಲ್ಲಿ ಮಾತ್ರ ಕಂಡು ಬರುವ, ಅಳಿವಿನ ಅಂಚಿನಲ್ಲಿರುವ ಪಕ್ಷಿಗಳಾಗಿವೆ. ಯೋಗನರಸಿಂಹ ಸ್ವಾಮಿ ಬೆಟ್ಟ, ಪ್ರವಾಸಿ ಕೇಂದ್ರದಿಂದ ಉರ್ಡಿಗೆರೆ ರಸ್ತೆಯ ಕಣಿವೆ ಪ್ರದೇಶ, ಈಶನಾಯಕನ ಬೆಟ್ಟದಿಂದ ನಾಮದ ಚಿಲುಮೆಯವರೆಗೆ ಇರುವ ಇಳಿಜಾರು ಪ್ರದೇಶದ ಕಲ್ಲು ಬಂಡೆಗಳಿಂದ ಕೂಡಿದ ಒಣ ಎಲೆ ಉದುರುವ ಕುರುಚಲು ಕಾಡು ಈ ಹಕ್ಕಿಗಳ ಆವಾಸಸ್ಥಾನವಾಗಿದೆ. ಈ ಪ್ರದೇಶದಲ್ಲಿ ಹಿಮಾಲಯ, ಯುರೋಪ್ ಭಾಗದಿಂದ ವಲಸೆ ಬರುವ ಇಂಡಿಯನ್ ಪಿಟ್ಟ, ಬ್ಲೂ ರಾಕ್ ಥ್ರಶ್, ಬ್ಲೂ ಹೆಡೆಡ್ ರಾಕ್ ಥ್ರಶ್, ಇತರೆ ಪಕ್ಷಿಗಳು ಚಳಿಗಾಲದಲ್ಲಿ ಕಂಡು ಬರುತ್ತವೆ ಎಂದು ಹೇಳಿದ್ದಾರೆ.
ದೇವರಾಯನದುರ್ಗದ ಇಳಿಜಾರು ಪ್ರದೇಶದಲ್ಲಿ ರೋಪ್‌ವೇ ನಿರ್ಮಿಸಿದರೆ ಕಪ್ಪು ಈಗಲ್, ಗರುಡ, ಹದ್ದು, ಗಿಡುಗದಂತಹ ಪಕ್ಷಿಗಳ ಹಾರಾಟಕ್ಕೆ ಅಡಚಣೆಯಾಗುತ್ತದೆ. ಬೋಗನರಸಿಂಹ ಸ್ವಾಮಿ ರಥೋತ್ಸವದ ಪ್ರಾರಂಭೋತ್ಸವಕ್ಕೆ ಗರುಡ, ಹದ್ದುಗಳ ಹಾರಾಟವಿಲ್ಲದೆ ಧಾರ್ಮಿಕ ಕಾರ್ಯಗಳಿಗೆ ಅಡಚಣೆಯಾಗುತ್ತದೆ. ಈಗಾಗಲೇ ಯೋಗನರಸಿಂಹ ಸ್ವಾಮಿ ಬೆಟ್ಟದ ಸುತ್ತಮುತ್ತಲಿನ ಅಭಿವೃದ್ಧಿ ಕಾರ್ಯಗಳಿಂದ ಬೆಟ್ಟದ ಇಳಿಜಾರಿನಲ್ಲಿದ್ದ ಅಳಿವಿನಂಚಿನಲ್ಲಿದ್ದ ಮೂರು ಜಾತಿಯ ರಣ ಹದ್ದುಗಳನ್ನು ಕಳೆದುಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಅಪರೂಪದ ಹಕ್ಕಿಗಳೂ ಕಣ್ಮರೆಯಾಗುತ್ತವೆ ಎಂದು ಎಚ್ಚರಿಸಿದ್ದಾರೆ.
ದುರ್ಗದ ಅರಣ್ಯದಲ್ಲಿ ಪ್ರಪಂಚದಲ್ಲಿ ಎಲ್ಲೂ ಕಾಣದ ಬ್ರಾಕಿಸ್ಟೆಲ್ಮ ತುಮಕೂರೆನ್ಸ್ ಸಸ್ಯ, ಟೆಂಕಣ ಜಯಮಂಗಲಿ, ಸ್ಪಾರ್ಟಿಯಸ್ ಕರಿಗಿರಿಯಂತಹ ಜೇಡಗಳು, ಅಪರೂಪದ ಹಾವುಗಳು, ಕಪ್ಪೆಗಳು, ಮಾಂಸಹಾರಿ ಸಸ್ಯಗಳು, ನೆಲ ಆರ್ಕಿಡ್‌ಗಳಂತಹ ಶ್ರೀಮಂತ ಜೀವವೈವಿಧ್ಯದ ಸಮಾಧಿಯ ಮೇಲೆ ಪ್ರವಾಸಿಗರಿಗೆ ಮೋಜು, ಮಸ್ತಿ ಮಾಡಲು ಅವಕಾಶ ಮಾಡಿಕೊಡುವುದು ಸರಿಯಲ್ಲ ಎಂದಿದ್ದಾರೆ.
ಮನರಂಜನೆಯ ಹೆಸರಿನಲ್ಲಿ ಶಾಸಕರು, ಅರಣ್ಯಾಧಿಕಾರಿಗಳು ಹಣ ಮಾಡಲು ಹೊರಟಿದ್ದಾರೆ. ರಜಾ ದಿನಗಳಲ್ಲಿ ಭೇಟಿ ನೀಡುವ ಪ್ರವಾಸಿಗರ ಪ್ರವಾಹದಿಂದ ಸೂಕ್ಷ್ಮ ಅರಣ್ಯ ಪರಿಸರದ ಮೇಲೆ ಒತ್ತದ ಹೆಚ್ಚಾಗುತ್ತದೆ. ದೇವರಾಯನದುರ್ಗದ ಎಂಟು ದಿಕ್ಕುಗಳಲ್ಲೂ ಕಳೆದ 15 ದಿನಗಳಿಂದ ಅರಣ್ಯಕ್ಕೆ ಬೆಂಕಿ ಹಚ್ಚಿದ್ದು, ನೂರಾರು ಎಕರೆ ಅರಣ್ಯ ಸುಟ್ಟು ಭಸ್ಮವಾಗಿದೆ. ಸುತ್ತಮುತ್ತಲಿನ ಗ್ರಾಮದ ಜನರಲ್ಲಿ ಜಾಗೃತಿ ಮೂಡಿಸಿ, ಜೀವವೈವಿಧ್ಯ ಸಂರಕ್ಷಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.