ADVERTISEMENT

ಚಕ್ರವ್ಯೂಹದಲ್ಲಿ ಶಕುನಿಗಳ ಆಟಕ್ಕೆ ಸೋತೆ: ಎಚ್.ಡಿ.ದೇವೇಗೌಡ

ಅರೇಹಳ್ಳಿಯ ಧಾರ್ಮಿಕ ಸಮಾರಂಭ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 14:09 IST
Last Updated 8 ನವೆಂಬರ್ 2019, 14:09 IST
ಕಾರ್ಯಕ್ರಮದಲ್ಲಿ ದೇವೇಗೌಡರು ಮಾತನಾಡಿದರು
ಕಾರ್ಯಕ್ರಮದಲ್ಲಿ ದೇವೇಗೌಡರು ಮಾತನಾಡಿದರು   

ತುಮಕೂರು: ‘ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಚುನಾವಣೆಗೂ ಮುನ್ನವೇ ನಿರ್ಧರಿಸಿದ್ದೆ. ಆದರೆ ಒತ್ತಾಯಕ್ಕೆ ಮಣಿದು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದೆ. ಈ ಚಕ್ರವ್ಯೂಹಕ್ಕೆ ಸಿಲುಕಿ ಶಕುನಿಗಳ ಆಟಕ್ಕೆ ಸೋತೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹೇಳಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಅರೇಹಳ್ಳಿಯಲ್ಲಿ ಶುಕ್ರವಾರ ನಡೆದ ದೊಡ್ಡಮ್ಮ ದೇವಿ ಮತ್ತು ಚಿಕ್ಕಮ್ಮ ದೇವಿ ನೂತನ ದೇವಾಲಯ ಉದ್ಘಾಟನೆ ಹಾಗೂ ಶಿಲಾ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸೋಲು–ಗೆಲುವನ್ನು ನಾನು ಸಮಾನವಾಗಿ ಸ್ವೀಕರಿಸಿದವನು. ಎಲ್ಲಿ ಅವಮಾನಕ್ಕೆ ಒಳಗಾಗಿದ್ದೇನೋ ಅಲ್ಲಿಯೇ ಗೆಲ್ಲಬೇಕು ಎಂದು ನಿರ್ಧಾರ ಮಾಡಿದ್ದೇನೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ 11 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸಲಾಗುವುದು. ಆ ಮೂಲಕ ನನ್ನ ಸೋಲಿಸಲು ಏನು ತಪ್ಪು ಮಾಡಿದ್ದೆ ಎಂದು ಕೇಳುವೆ’ ಎಂದು ಹೇಳಿದರು.

ADVERTISEMENT

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳುತ್ತಾರೆ. ಆದರೆ ಗ್ರಾಮಾಂತರ ಕ್ಷೇತ್ರಕ್ಕೆ ಬಂದಿದ್ದ ₹ 40 ಕೋಟಿ ಅನುದಾನವನ್ನು ವಾಪಸ್ ಪಡೆದಿದ್ದಾರೆ. ಇದು ದ್ವೇಷದ ರಾಜಕಾರಣವಲ್ಲವೆ ಎಂದು ಪ್ರಶ್ನಿಸಿದರು.

ಶಾಸಕ ಡಿ.ಸಿ.ಗೌರಿಶಂಕರ್ ಧರ್ಮದ ಹಾದಿಯಲ್ಲಿ ನಡೆಯುತ್ತಿದ್ದಾರೆ. ಅವರಿಗೆ ಆ ಭಗವಂತ ಒಳ್ಳೆಯದನ್ನು ಮಾಡುತ್ತಾನೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ‘ಗ್ರಾಮಾಂತರ ಕ್ಷೇತ್ರದಲ್ಲಿ ಗೌರಿಶಂಕರ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ’ ಎಂದು ಶುಭಕೋರಿದರು.

ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ಇತ್ತು. ದೇವೇಗೌಡರು ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. ಅವರ ಮೇಲೆ ಜೆಡಿಎಸ್ ಕಾರ್ಯಕರ್ತರು ‍ಪುಷ್ಪವೃಷ್ಟಿಗರೆದರು. ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಿದ ಅವರು ನೇರವಾಗಿ ವೇದಿಕೆಗೆ ಬಂದರು.

ಶಾಸಕ ಡಿ.ಸಿ.ಗೌರಿಶಂಕರ್, ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು, ಜಿಲ್ಲಾ ಘಟಕ ಅಧ್ಯಕ್ಷ ಆರ್‌.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ನಾಗರಾಜ್, ಗ್ರಾಮಾಂತರ ಅಧ್ಯಕ್ಷ ಹಾಲನೂರು ಅನಂತಕುಮಾರ್ ಹಾಗೂ ಮುಖಂಡರು ಇದ್ದರು.

ನೋವು ಅಷ್ಟಿಷ್ಟಲ್ಲ

2018ರ ವಿಧಾನಸಭಾ ಚುನಾವಣೆಯಲ್ಲಿ ನಮಗೆ ಸ್ಪಷ್ಟ ಬಹುಮತ ಬರಲಿಲ್ಲ. ಆಗ ಕಾಂಗ್ರೆಸ್‌ನವರೇ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿ ಎಂದರು. ನಾನು ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲಿ ಎಂದೆ. ಅವರ ಆಗ್ರಹದ ಕಾರಣಕ್ಕೆ ಕುಮಾರ ಸ್ವಾಮಿ ಮುಖ್ಯಮಂತ್ರಿ ಆದರು ಎಂದು ದೇವೇಗೌಡರು ನೆನಪಿಸಿಕೊಂಡರು.

ಆ ನಂತರ ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಆ ನೋವು ನನಗೆ ಮಾತ್ರ ಗೊತ್ತು. ನಮಗೂ ಒಳ್ಳೆಯ ಕಾಲ ಬರುತ್ತದೆ ಎಂದು ಮುಖಂಡರಿಗೆ ಹೇಳಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.