ADVERTISEMENT

ಗುಬ್ಬಿ: ಜೆಡಿಎಸ್‌ ವರಿಷ್ಠರ ವಿರುದ್ಧ ಅತೃಪ್ತಿ

ತಾಲ್ಲೂಕಿನ ರಾಜಕಾರಣಕ್ಕೆ ಸೀಮಿತ: ಶಾಸಕ ಎಸ್.ಆರ್ ಶ್ರೀನಿವಾಸ್ ಬೇಸರ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 2:41 IST
Last Updated 20 ಜನವರಿ 2021, 2:41 IST
ಗುಬ್ಬಿ ಕೆರೆಗೆ ಗಂಗಾ ಪೂಜೆ ನೆರವೇರಿಸಿದ ಶಾಸಕ ಎಸ್.ಆರ್‌. ಶ್ರೀನಿವಾಸ್
ಗುಬ್ಬಿ ಕೆರೆಗೆ ಗಂಗಾ ಪೂಜೆ ನೆರವೇರಿಸಿದ ಶಾಸಕ ಎಸ್.ಆರ್‌. ಶ್ರೀನಿವಾಸ್   

ಗುಬ್ಬಿ: ಜಿಲ್ಲೆಯಲ್ಲೇ ದೊಡ್ಡ ಕೆರೆ ಎನಿಸಿಕೊಂಡ ಕಡಬ ಕೆರೆಯನ್ನು ಪ್ರತಿ ವರ್ಷ ಶೇ 50ರಷ್ಟು ತುಂಬಿಸಲಷ್ಟೇ ಸಾಧ್ಯವಾಗುತ್ತಿತ್ತು. ಈ ಬಾರಿ ಹೇಮಾವತಿ ನೀರು ಹರಿದ ಕಾರಣ ಕಡಬ ಕೆರೆ ಭರ್ತಿಯಾಗಿದೆ. ಕೋಡಿಯ ಅಂಚಿನಲ್ಲಿ ಕೆರೆ ನೀರು ಮೈದುಂಬಿ ನಿಂತಿದೆ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ಹೇಳಿದರು.

ಪಟ್ಟಣದ ಅಮಾನಿಕೆರೆಗೆ ಬಾಗಿನ ಅರ್ಪಿಸಿ, ಗಂಗಾಪೂಜೆ ನೆರವೇರಿಸಿ ಮಾತನಾಡಿದರು.

‘ಜಿಲ್ಲೆಯ ಜೆಡಿಎಸ್ ಸಂಘಟನೆ ಜವಾಬ್ದಾರಿಗೆ ಅರ್ಹರನ್ನು ಗುರುತಿಸಿ ಆಯ್ಕೆ ಮಾಡಿರುವ ಜೆಡಿಎಸ್ ವರಿಷ್ಠರು, ನನ್ನನ್ನು ತಾಲ್ಲೂಕಿಗೆ ಸೀಮಿತಗೊಳಿಸಿದ್ದಾರೆ. ತಾಲ್ಲೂಕಿನ ಸಂಘಟನೆಗೆ ಇರುವ ಸಮಯ ಸಾಲದಾಗಿದೆ’ ಎಂದು ವ್ಯಂಗ್ಯದ ದಾಟಿಯಲ್ಲೇ ಶಾಸಕ ಎಸ್.ಆರ್.ಶ್ರೀನಿವಾಸ್ ಅಸಮಾಧಾನ ಹೊರಹಾಕಿದರು.

ADVERTISEMENT

‘ತಾಲ್ಲೂಕು ಸಂಘಟನೆಗೆ ಮಾತ್ರ ನಾನು ಸೀಮಿತ ಎಂಬ ನಿಲುವು ದೊಡ್ಡವರಲ್ಲಿದೆ. ನಾನು ಸಾಮಾನ್ಯ ಕಾರ್ಯ
ಕರ್ತನಾಗಿ ದುಡಿಯುತ್ತೇನೆ’ ಎಂದರು.

ತಾಲ್ಲೂಕಿನ ಬಹುತೇಕ ಕೆರೆಗಳು ಹೇಮೆ ಹರಿದು ಭರ್ತಿಯಾಗಿವೆ. ಲಭ್ಯ ಇರುವ ನೀರನ್ನು ರೈತರು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವಂತೆ ತಿಳಿಸಿದರು.

‘ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಅವರನ್ನು ಪದಚ್ಯುತಿಗೊಳಿಸಲು ಪ್ರಯತ್ನ ನಡೆದಿದೆ. ರವಿಕುಮಾರ್ ಅವರು ಶಿರಾ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್‌ನತ್ತ ಒಲವು ತೋರಿದ ಹಿನ್ನಲೆ ಅವಿಶ್ವಾಸ ನಿರ್ಣಯ ಮಾಡಿ ಸ್ಥಾನದಿಂದ ಕೆಳಗಿಳಿಸಲು ಪ್ರಯತ್ನಿಸಲಾಗುತ್ತಿದೆ. ಹೇಮಾವತಿ ನೀರು ಹರಿಸುವ ಯೋಜನೆಗಳ ಪೈಕಿ ಬಿಕ್ಕೇಗುಡ್ಡ ಯೋಜನೆಗೆ ಚಾಲನೆ ದೊರೆಕಿದೆ. ಈ ವರ್ಷದಲ್ಲಿ ಪೂರ್ಣಗೊಳಿಸುವ ನಿರ್ಣಯದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಸಿ.ಕೃಷ್ಣಮೂರ್ತಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಮಹಾಲಕ್ಷ್ಮಿ, ಸದಸ್ಯರಾದ ಮೋಹನ್, ಕುಮಾರ್, ಮಂಗಳಮ್ಮ, ಮಮತಾ, ಮಹಮದ್ ಸಾದಿಕ್, ಮುಖಂಡರಾದ ಜಿ.ಸಿ.ಲೋಕೇಶ್‌ಬಾಬು, ಜಿ.ಎಸ್.ಮಂಜುನಾಥ್, ಪಟೇಲ್ ಕೆಂಪೇಗೌಡ, ಚನ್ನಬಸವಯ್ಯ, ಪಾಳ್ಯ ಬಸವರಾಜು, ಕುಂಭಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.