ಕುಣಿಗಲ್: ಯುವಜನತೆ ಜಾತಿ ಮತಗಳ ಗುಲಾಮರಾಗದೇ ಎಲ್ಲರನ್ನೂ ಒಳಗೊಂಡ ವಿಶ್ವಮಾನವರಾಗಿ ಎಂದು ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ವಾರ್ಷಿಕ ಚಟುವಟಿಕೆಗಳ ಸಮಾರೋಪದಲ್ಲಿ ಮಾತನಾಡಿದರು.
‘ದೇವಸ್ಥಾನಗಳ ಜಗುಲಿಗಳಲ್ಲಿ ಶಿಕ್ಷಣ ಕಲಿತ ನಾವು ಹಳ್ಳಿಗಳಲ್ಲಿ ಆಚರಿಸಲಾಗುತ್ತಿದ್ದ ಅಸ್ಪೃಶ್ಯತೆಯನ್ನು ಕಣ್ಣಾರೆ ಕಂಡಿದ್ದೇವೆ. ಆದರೆ ಸಂವಿಧಾನ ಜಾರಿಯಾದ ನಂತರ ಶೋಷಿತ ಸಮುದಾಯಗಳಿಗೆ ಶಿಕ್ಷಣ ಮತ್ತು ಸಮಾನತೆ ಬಂದಿದೆ. ಇದಕ್ಕೆ ಅಂಬೇಡ್ಕರ್ ಅವರು ವಿಶ್ವದ ವಿವಿಧ ದೇಶಗಳ ಸಂವಿಧಾನಗಳನ್ನು ಅರಿತು, ಅಧ್ಯಯನ ಮಾಡಿ ಭಾರತಕ್ಕೆ ಸೂಕ್ತವಾದ ಸಂವಿಧಾನ ನೀಡಿದ್ದೇ ಕಾರಣ’ ಎಂದು ಹೇಳಿದರು.
ಸಂವಿಧಾನದ ಆಶಯಗಳ ರಕ್ಷಣೆ ಎಲ್ಲರ ಜವಾಬ್ದಾರಿ. ದೇಶವನ್ನು ಬ್ರಿಟಿಷರು, ಡಚ್ಚರು, ಫ್ರೆಂಚರು, ಮೊಘಲರು ಆಳಿದ್ದಾರೆ. ಆದರೂ ಇಲ್ಲಿನ ಶೋಷಿತ ಸಮುದಾಯಗಳಿಗೆ ನ್ಯಾಯ ಸಿಕ್ಕಿಲ್ಲ. ಬಸವಣ್ಣ ‘ದಯೆಯೇ ಧರ್ಮದ ಮೂಲವಯ್ಯ’ ಎಂದಿದ್ದರು. ಪಂಪನು ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಕರೆದಿದ್ದಾರೆ. ಕುವೆಂಪು ಅವರು ಮಂತ್ರ ಮಾಂಗಲ್ಯ ಮೂಲಕ ಸರಳ ಮದುವೆಗೆ ಅವಕಾಶ ಕಲ್ಪಿಸಿದರು. ಮಕ್ಕಳಿಗೆ ಹಣಕ್ಕಿಂತ ವಿದ್ಯೆ ಮುಖ್ಯ. ವಿದ್ಯಾರ್ಥಿಗಳು ಈ ಬಗ್ಗೆ ಯೋಚಿಸಬೇಕು ಎಂದು ಹೇಳಿದರು.
ಪ್ರಾಂಶುಪಾಲೆ ಮಾಯಾ ಸಾರಂಗಪಾಣಿ, ಅಧ್ಯಾಪಕರಾದ ರಾಮಾಂಜನಪ್ಪ, ಟಿ.ಎನ್.ನರಸಿಂಹಮೂರ್ತಿ, ಎನ್.ಟಿ.ಶ್ರೀನಿವಾಸ್, ಸಿ.ಆರ್.ಮನೋಜ್, ಮಂಜುಳ, ಶಿವಕುಮಾರ, ರಾಧಾ, ಈಶ್ವರಪ್ಪ, ವ್ಯವಸ್ಥಾಪಕ ಚೆಲುವಮೂರ್ತಿ, ಶ್ರೀನಿವಾಸ ಪ್ರಭು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.