ADVERTISEMENT

ಹೋಟೆಲ್‌ನಲ್ಲಿ ಊಟ ಮಾಡುವಂತಿಲ್ಲ: ತುಮಕೂರು ಪಾಲಿಕೆ ಆಯುಕ್ತ ಟಿ.ಭೂಬಾಲನ್

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 14:06 IST
Last Updated 21 ಮಾರ್ಚ್ 2020, 14:06 IST

ತುಮಕೂರು: ನಗರದ ಹೋಟೆಲ್‌ಗಳಿಗೆ ಬರುವ ಸಾರ್ವಜನಿಕರಿಗೆ ಮಾಲೀಕರು ಅಲ್ಲೇ ಕುಳಿತು ಆಹಾರ ಸೇವಿಸುವ ವ್ಯವಸ್ಥೆ ಒದಗಿಸಬಾರದು. ಗ್ರಾಹಕರಿಗೆ ಪಾರ್ಸಲ್ ನೀಡಬೇಕು ಎಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಸೂಚಿಸಿದ್ದಾರೆ.

ಹೋಟೆಲ್‌ಗಳಲ್ಲಿ ಗುಂಪು ಗುಂಪಾಗಿ ಕುಳಿತುಕೊಳ್ಳಲು ಅವಕಾಶ ಕೊಡಬಾರದು. ಹೋಟೆಲ್‌ಗಳ ಜತೆಗೆ ಮದ್ಯದ ಅಂಗಡಿಗಳು, ಮೆಸ್, ಬೇಕರಿ, ಟೀ, ಕಾಫಿ, ತಂಪು ಪಾನೀಯ ಮಾರಾಟ ಅಂಗಡಿಗಳು, ನಂದಿನಿ ಪಾರ್ಲರ್‌ಗಳಿಗೂ ಈ ಆದೇಶ ಅನ್ವಯಿಸುತ್ತದೆ. ಕಡ್ಡಾಯವಾಗಿ ಸ್ವಚ್ಛತೆ ಕಾಪಾಡಬೇಕು ಆದೇಶಿಸಿದ್ದಾರೆ.

ಪಾರ್ಸಲ್ ನೀಡುವಾಗ ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ. ಉದ್ದಿಮೆ ಒಳಾಂಗಣ, ಹೊರಾಂಗಣ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪ್ರತಿದಿನ 1 ಲೀಟರ್ ನೀರಿನಲ್ಲಿ 30 ಗ್ರಾಂ ಬ್ಲಿಚಿಂಗ್ ಪೌಡರ್ ಬೆರೆಸಿ ಸಿಂಪಡಿಸಬೇಕು. ತಟ್ಟೆ, ಲೋಟ, ಅಡುಗೆ, ಮತ್ತಿತರ ಪಾತ್ರೆಗಳನ್ನು ಬಿಸಿ ನೀರಿನಿಂದಲೇ ತೊಳೆಯಬೇಕು.

ADVERTISEMENT

ಉದ್ದಿಮೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಆರೋಗ್ಯ ಕಾರ್ಡ್‍ಗಳನ್ನು ಹೊಂದಿರಬೇಕು. ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು. ಕೈಗಳನ್ನು ತೊಳೆಯಲು ಹ್ಯಾಂಡ್‍ವಾಶ್, ಸ್ಯಾನಿಟೈಜರ್‌ಗಳನ್ನು ಉಪಯೋಗಿಸಬೇಕು. ತಲೆಗೆ ಹೇರ್‍ನೆಟ್‍ ಬಳಸಬೇಕು. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಪ್ಪಿದಲ್ಲಿ ಉದ್ದಿಮೆ ಪರವಾನಗಿ ರದ್ದುಪಡಿಸಲಾಗುವುದು ಎಂದು ಎಚ್ಚಕೆ ನೀಡಿದ್ದಾರೆ.

ನಾಳೆ ಅರಿವು ಸಭೆ

ಮಾರ್ಚ್ 23ರ ಬೆಳಿಗ್ಗೆ 10ಕ್ಕೆ ಮಹಾನಗರಪಾಲಿಕೆ ವ್ಯಾಪ್ತಿಯ ಎಲ್ಲ ಹಿಂದೂ ದೇವಸ್ಥಾನ, ಜೈನ ಹಾಗೂ ಬೌದ್ಧ ಮಂದಿರಗಳ ಮುಖ್ಯಸ್ಥರಿಗೆ ಕೊರೊನಾ ಸೋಂಕು ತಡೆ ಸಂಬಂಧ ಅರಿವು ಸಭೆ ಹಮ್ಮಿಕೊಳ್ಳಲಾಗಿದೆ.

ಪಾಲಿಕೆ ಸಭಾಂಗಣದಲ್ಲಿ ಸಭೆ ನಡೆಯಲಿದೆ. ದೇವಸ್ಥಾನ, ಮಂದಿರಗಳ ಮುಖ್ಯಸ್ಥರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.