ADVERTISEMENT

ತುಮಕೂರು| ಶಾಸಕರು ಕೊಡಿಸಿದ ಲಸಿಕೆ ಬಗ್ಗೆ ಶಂಕೆ: ಜಿಲ್ಲಾಧಿಕಾರಿಗೆ ದೂರು

ಮಾಹಿತಿ ಹಕ್ಕು ಕಾರ್ಯಕರ್ತ ಆರೋಪ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 7:18 IST
Last Updated 26 ನವೆಂಬರ್ 2021, 7:18 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ತುಮಕೂರು: ಗ್ರಾಮಾಂತರ ಕ್ಷೇತ್ರದ ಶಾಸಕ ಡಿ.ಸಿ.ಗೌರಿಶಂಕರ್ ತಮ್ಮ ನಿವಾಸದ ಬಳಿ ಕೋವಿಡ್ ನಿಯಂತ್ರಿಸುವ ಸಲುವಾಗಿ ಜನರಿಗೆ ಕೊಡಿಸಿದ ಕೋವಿಶೀಲ್ಡ್ ಲಸಿಕೆ ಅಸಲಿಯೊ ಅಥವಾ ನಕಲಿಯೊ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಕೆ.ಸಿ.ಗಿರೀಶ್ ಒತ್ತಾಯಿಸಿದರು.

ಕೋವಿಡ್ ಲಸಿಕೆ ಕೊಡಿಸಿದ್ದಾರೋ ಅಥವಾ ಇನ್ನಾವುದೋ ಲಸಿಕೆ ಕೊಡಿಸಿದ್ದಾರೋ ಎಂಬ ಅನುಮಾನ ಮೂಡಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಕೋರಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಈ ಸಂಬಂಧ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿಗೂ ದೂರು ನೀಡಲಾಗುವುದು. ಪ್ರಧಾನಿ ಕಾರ್ಯಾಲಯಕ್ಕೂ ದೂರು ಸಲ್ಲಿಸಲಾಗುವುದು. ಶಾಸಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಹಾಗೂ ಸಂಬಂಧಿಸಿದವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದು ಎಂದರು.

ADVERTISEMENT

ಹಿನ್ನೆಲೆ: ಕಳೆದ ಆಗಸ್ಟ್ 1ರಂದು ತುಮಕೂರು ತಾಲ್ಲೂಕಿನ ಬಳ್ಳಗೆರೆಯಲ್ಲಿ ಎರಡು ಸಾವಿರದಿಂದ 2,500ಜನರಿಗೆ ಕೋವಿಶೀಲ್ಡ್ ಲಸಿಕೆ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಿಂದ ಶಾಸಕ ಗೌರಿಶಂಕರ್ ಅನುಮತಿ ಪಡೆದುಕೊಂಡಿದ್ದಾರೆ. ಬೆಂಗಳೂರಿನ ‘ಸಕಾರಿಯ ಹೆಲ್ತ್ ಕೇರ್ ಅಂಡ್ ಲೈಫ್ ಸ್ಟೈಲ್ ಸರ್ವೀಸಸ್’ ಆಸ್ಪತ್ರೆಯ ಸಹಯೋಗದಲ್ಲಿ ಲಸಿಕೆ ಹಾಕಲಾಗಿದೆ. ಇದೇ ಆಸ್ಪತ್ರೆ ಮೂಲಕ ಕೋವಿಶೀಲ್ಡ್ ಲಸಿಕೆಯನ್ನು (ಬ್ಯಾಚ್ ನಂ. 4121 ಜೆಡ್‌110) ₹1.75 ಲಕ್ಷ ಹಣಪಾವತಿಸಿ ಜುಲೈ 20ರಂದು ಖರೀದಿಸಿದಂತೆ ತೋರಿಸಲಾಗಿದೆ. ಶಾಸಕರ ನಿವಾಸದಲ್ಲಿ ಲಸಿಕೆ ನೀಡಿರುವುದನ್ನು ಪೋರ್ಟಲ್‌ನಲ್ಲಿ ನಮೂದಿಸಲಾಗಿದೆ. ಆದರೆ ಈ ಬ್ಯಾಚ್ ಸಂಖ್ಯೆಯ ಲಸಿಕೆಯನ್ನೇ ಖರೀದಿಸಿಲ್ಲ ಎಂದು ಅವರು ಆರೋಪಿಸಿದರು.

ಬ್ಯಾಚ್ ನಂ. 4121 ಜೆಡ್110 ಲಸಿಕೆಯನ್ನು ಬೆಳಗಾವಿ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯವರು 6 ಸಾವಿರ, ದಕ್ಷಿಣ ಕನ್ನಡ ಫಾದರ್ ಮುಲ್ಲರ್ಸ್ ಆಸ್ಪತ್ರೆ 15 ಸಾವಿರ, ಬೆಂಗಳೂರು ಎಂವಿಜೆ ವೈದ್ಯಕೀಯ ಆಸ್ಪತ್ರೆಯವರು 6 ಸಾವಿರ ಖರೀದಿಸಿದ್ದಾರೆ. ಈ ಬ್ಯಾಚ್ ಸಂಖ್ಯೆಯಲ್ಲಿ ರಾಜ್ಯಕ್ಕೆ 27 ಸಾವಿರ ಲಸಿಕೆ ಸರಬರಾಜು ಆಗಿದ್ದು, ಅಷ್ಟನ್ನೂ ಬೇರೆಯವರು ಖರೀದಿಸಿ, ಬಳಕೆ ಮಾಡಿಕೊಂಡಿದ್ದಾರೆ. ಬೇರೆ ಯಾರಿಗಾದರೂ ವಿತರಣೆಯಾಗಿದೆಯೆ ಎಂಬ ಬಗ್ಗೆ ಪರಿಶೀಲಿಸಿದಾಗ ಅವರು ಬೇರೆ ಯಾರಿಗೂ ಕೊಟ್ಟಿಲ್ಲ. ಹಾಗಾದರೆ ಜನರಿಗೆ ಯಾವ ಲಸಿಕೆ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಬೇರೆ ಯಾರಿಗೂ ಈ ಬ್ಯಾಚ್ ಸಂಖ್ಯೆಯ ಲಸಿಕೆ ನೀಡಿಲ್ಲ ಎಂದಾದ ಮೇಲೆ ಪಾಲುದಾರರಾಗಿದ್ದ ಸಕಾರಿಯ ಆಸ್ಪತ್ರೆಯವರು ಎಲ್ಲಿಂದ 2,450 ಲಸಿಕೆ ಖರೀದಿಸಿದರು. ಈ ಲಸಿಕೆ ತಯಾರಕರು, ಸರಬರಾಜು ಮಾಡಿದವರು ಯಾರು, ಲಸಿಕೆಯನ್ನು ತುಮಕೂರಿಗೆ ತರುವ ಮುನ್ನ ಯಾವ ಶೀತಲ ಕೇಂದ್ರದಲ್ಲಿ ಶೇಖರಿಸಲಾಗಿತ್ತು ಎಂಬ ಸತ್ಯ ತನಿಖೆಯಿಂದ ಹೊರ ಬರಬೇಕಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.