ADVERTISEMENT

ಹೇಮಾವತಿ ಕಚೇರಿಯಲ್ಲಿ ನೆಲಕ್ಕುರುಳಿದ ಮರ; ನಿಲ್ಲದ ಮರಗಳ ಮಾರಣ ಹೋಮ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 16:35 IST
Last Updated 28 ಸೆಪ್ಟೆಂಬರ್ 2023, 16:35 IST
ತುಮಕೂರಿನ ಹೇಮಾವತಿ ನಾಲಾ ವಲಯ ಕಚೇರಿ ಆವರಣದಲ್ಲಿ ಮರಗಳನ್ನು ಕಡಿದಿರುವುದು
ತುಮಕೂರಿನ ಹೇಮಾವತಿ ನಾಲಾ ವಲಯ ಕಚೇರಿ ಆವರಣದಲ್ಲಿ ಮರಗಳನ್ನು ಕಡಿದಿರುವುದು   

ತುಮಕೂರು: ನಗರದಲ್ಲಿ ಮರಗಳ ಮಾರಣ ಹೋಮ ನಿಲ್ಲುತ್ತಿಲ್ಲ. ಈಗ ನಗರದ ಕುಣಿಗಲ್ ರಸ್ತೆಯಲ್ಲಿರುವ ಹೇಮಾವತಿ ನಾಲಾ ವಲಯ ಕಚೇರಿ ಆವರಣದಲ್ಲಿ ಬೆಳೆದಿದ್ದ ಮರಗಳನ್ನು ಕಡಿಯಲಾಗಿದೆ.

‘ಸುಮಾರು ₹40 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ತೇಗದ ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಅರಣ್ಯ ಅಧಿಕಾರಿಗಳು ಮಾತ್ರ ಎಚ್ಚೆತ್ತುಕೊಳ್ಳುತ್ತಿಲ್ಲ. ಕೇವಲ ಮನವಿ ಸ್ವೀಕರಿಸುವುದಷ್ಟೇ ಅವರ ಕಾಯಕವಾಗಿದೆ’ ಎಂದು ವೃಕ್ಷಮಿತ್ರ ಸಂಘದ ಅಧ್ಯಕ್ಷ ಕೆ.ಸಿದ್ದಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೇಮಾವತಿ ನಾಲಾ ವಲಯದ ಕಾರ್ಯಪಾಲಕ ಎಂಜಿನಿಯರ್ ಮುರುಳಿ ಅವರನ್ನು ಈ ಬಗ್ಗೆ ವಿಚಾರಿಸಿದ್ದು, ‘ಕಟ್ಟಡ ನಿರ್ಮಿಸುವಂತೆ ತಿಳಿಸಲಾಗಿತ್ತು. ಈ ರೀತಿ ಮರಗಳನ್ನು ಕಡಿದಿರುವುದು ಗಮನಕ್ಕೆ ಬಂದಿಲ್ಲ’ ಎಂದು ಉತ್ತರಿಸುತ್ತಾರೆ. ಮರಗಳನ್ನು ಕಡಿಯುವ ಕುರಿತು ಅರಣ್ಯ ಇಲಾಖೆ ಮೂಲಕ ಟೆಂಡರ್‌ ಕರೆಯಬೇಕಿತ್ತು. ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡದೆ ಏಕಾಏಕಿ ಕಡಿಯಲಾಗಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ನಗರದಲ್ಲಿ ಇದೇ ರೀತಿ 50ರಿಂದ 60 ಮರಗಳನ್ನು ಕಡಿಯಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಯಾವ ಆಧಾರದ ಮೇಲೆ ಇದಕ್ಕೆ ಅನುಮತಿ ನೀಡುತ್ತಿದ್ದಾರೆ. ಕಡಿದ ಮರಗಳನ್ನು ಯಾವ ರೀತಿ ಹರಾಜು ಮಾಡುತ್ತಿದ್ದಾರೆ. ಹಣ ಎಲ್ಲಿ ಜಮಾ ಮಾಡಲಾಗುತ್ತದೆ ಎಂಬುದನ್ನು ಸಾರ್ವಜನಿಕರ ಗಮನಕ್ಕೆ ತರಬೇಕಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಅರಣ್ಯ ಸಚಿವರು, ಜಿಲ್ಲಾಧಿಕಾರಿ ಕೂಡಲೇ ಇತ್ತ ಗಮನ ಹರಿಸಬೇಕು. ನಗರದಲ್ಲಿ ನಡೆಯುತ್ತಿರುವ ಮರಗಳ ಮಾರಣ ಹೋಮಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.