ADVERTISEMENT

ಸಮೂಹ ಪ್ರಜ್ಞೆ ಬೆಳೆಸುವ ನಾಟಕ

ನಗರದ ಕನ್ನಡ ಭವನದಲ್ಲಿ ನಡೆದ ‘ದೊರೆ ಅಕೂ‍ಪಾರ’ ನಾಟಕ ಕಾರ್ಯಕ್ರಮದಲ್ಲಿ ಬಾ.ಹ.ರಮಾಕುಮಾರಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 16:23 IST
Last Updated 2 ಜನವರಿ 2019, 16:23 IST
‘ದೊರೆ ಅಕೂ‍ಪಾರ’ ನಾಟಕ ಪ್ರದರ್ಶನದ ಒಂದು ದೃಶ್ಯ
‘ದೊರೆ ಅಕೂ‍ಪಾರ’ ನಾಟಕ ಪ್ರದರ್ಶನದ ಒಂದು ದೃಶ್ಯ   

ತುಮಕೂರು: ಮಾನವ ಸಂಬಂಧಗಳನ್ನು ಬೆಸೆಯುವಲ್ಲಿ ನಾಟಕಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ರಂಗಸುಗ್ಗಿ ಟ್ರಸ್ಟ್, ತುಮಕೂರಿನ ಕಲರ್ಸ್‌ ಗ್ರೂಪ್, ಕಲ್ಚರಲ್ ವ್ಯಾಲಿ ಟ್ರಸ್ಟ್ ಹಾಗೂ ನಾಟಕ ಮನೆಗಳು ಸಹಕಾರದೊಂದಿಗೆ ಆಯೋಜಿಸಿದ್ದ ‘ದೊರೆ ಅಕೂ‍ಪಾರ’ ನಾಟಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಾಟಕಗಳು ಜನರ ಭಾವನೆಗಳ ಪ್ರತೀಕವಾಗಿದೆ. ಹಾಗೇ ನಾಟಕ ಮಾಡುವವರು ಹಾಗೂ ನೋಡುವವರು ಒಟ್ಟಿಗೆ ಇದ್ದಾಗ ಹೆಚ್ಚು ಕ್ರಿಯಾಶೀಲವಾಗಿರುತ್ತದೆ. ವ್ಯಕ್ತಿಯು ವೈಯಕ್ತಿಕ ನೆಲೆಗಿಂತ ಸಮೂಹ ನೆಲೆಯಲ್ಲಿ ಬದುಕಿದಾಗ ಎಲ್ಲರ ಪ್ರೀತಿ ಸಂಪಾದಿಸಬಹುದು. ಇಂತಹ ಸಮೂಹ ಪ್ರಜ್ಞೆಯನ್ನು ನಾಟಕಗಳಿಂದ ಬೆಳೆಸಲು ಸಾಧ್ಯ ಎಂದರು.

ADVERTISEMENT

ನಾಟಕವನ್ನು ಉದ್ಘಾಟಿಸಿದ ಭೂಮಿ ಬಳಗದ ಅಧ್ಯಕ್ಷ ಜಿ.ಎಸ್‌.ಸೋಮಶೇಖರ್ ಅವರು, ಈ ನಾಟಕವು ಮೂಲ ರಾಜಸ್ಥಾನ ಕಥೆಯನ್ನು ಆಧರಿಸಿದೆ. ನಿರ್ದೇಶಕ ಟಿ.ಎಸ್.ಸೀಮಂತಿನಿ ಬೇರೆ ಭಾಷೆಯ ನಾಟಕಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅಲ್ಲಿಯ ಸಂಸ್ಕೃತಿ ಸಂಪ್ರದಾಯಗಳನ್ನು ಅಧ್ಯಯನ ಮಾಡಿ ರಂಗ ರೂಪಕ್ಕೆ ಕಟ್ಟಿಕೊಟ್ಟಿರುವ ಕೆಲಸವನ್ನು ರಂಗಸುಗ್ಗಿ ಟ್ರಸ್ಟ್ ಸಮರ್ಥವಾಗಿ ಮಾಡಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿರಂತರವಾಗಿ ಸಾಂಸ್ಕೃತಿಕ ಚಟುವಟಿಕೆಗಳು ನಡೆಯುತ್ತಿರುವುದು ಸಂತೋಷದ ವಿಷಯ. ಹಾಗೆಯೇ ನಾಟಕ ಮನೆಯ ರಂಗ ಮಂದಿರವೂ ಸಹ ಪೂರ್ಣಗೊಂಡು ಅಲ್ಲಿಯೂ ರಂಗ ಚಟುವಟಿಕೆಗಳು ನಡೆಯುವಂತಾಗಲಿ ನಾಟಕ ಮನೆಗೆ ಎಲ್ಲರೂ ನಿಂತು ಶಕ್ತಿ ತುಂಬುವಂತಾಗಲಿ ಎಂದು ಆಶಿಸಿದರು.

ಪತ್ರಕರ್ತ ಜಿ.ಇಂದ್ರಕುಮಾರ್, ಎಸ್‌.ನಾಗಣ್ಣ, ನಾಟಕ ಮನೆಯ ಮಹಾಲಿಂಗು, ರಂಗಸುಗ್ಗಿ ಟ್ರಸ್ಟ್‌ನ ರೂಪ ಶಿವಕುಮಾರ್, ನಿರ್ದೇಶಕ ಡಾ.ಟಿ.ಎಸ್.ಸೀಮಂತಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.