ADVERTISEMENT

ನೆರಿಗೇಹಳ್ಳಿ: ಕುಡಿವ ನೀರಿಗೆ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2024, 14:35 IST
Last Updated 30 ಏಪ್ರಿಲ್ 2024, 14:35 IST
ತುರುವೇಕೆರೆ ತಾಲ್ಲೂಕು ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯ್ತಿಯ ನೆರಿಗೇಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಈಡೇರಿಸುವಂತೆ ಆಗ್ರಹಿಸಿ ಗ್ರಾಮದ ಮಹಿಳೆಯರು ಕೊಡಹಿಡಿದು ಪಂಚಾಯ್ತಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
ತುರುವೇಕೆರೆ ತಾಲ್ಲೂಕು ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯ್ತಿಯ ನೆರಿಗೇಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಈಡೇರಿಸುವಂತೆ ಆಗ್ರಹಿಸಿ ಗ್ರಾಮದ ಮಹಿಳೆಯರು ಕೊಡಹಿಡಿದು ಪಂಚಾಯ್ತಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.   

ತುರುವೇಕೆರೆ: ತಾಲ್ಲೂಕಿನ ಮಾಯಸಂದ್ರ ಹೋಬಳಿಯ ನೆರಿಗೇಹಳ್ಳಿಯಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೇ ತೀವ್ರ ತೊಂದರೆಯುಂಟಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಯ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಯುವಕ ನವೀನ್ ಮಾತನಾಡಿ, ತಾಲ್ಲೂಕಿನ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನೆರಿಗೇಹಳ್ಳಿಯಲ್ಲಿ 60 ಮನೆಗಳಿದ್ದು ಸುಮಾರು 300 ಜನ ವಾಸ ಮಾಡುತ್ತಿದ್ದಾರೆ. ಕಳೆದ ಎರಡು ವಾರಗಳಿಂದ ನೀರಿನ ಸಮಸ್ಯೆ ತೀವ್ರ ಬಿಗಡಾಯಿಸಿದೆ.

ಗ್ರಾಮ ಪಂಚಾಯಿತಿ ಸಿಬ್ಬಂದಿ ಮೂರು ದಿನಕ್ಕೆ ಒಂದು ಬಾರಿ ಮಾತ್ರ ಗ್ರಾಮದ ಬೀದಿ ನಲ್ಲಿಗೆ ನೀರು ಬಿಡುತ್ತಾರೆ. ಆ ನೀರು ಸಹ ಸಂಪೂರ್ಣ ಕೆಂಪಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ಈ ನೀರು ಕುಡಿದು ಗ್ರಾಮದ ಕೆಲವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅರ್ಧ ಗಂಟೆ ಕಳೆದರೂ ಒಂದು ಕೊಡ ತುಂಬುವುದಿಲ್ಲ ಗ್ರಾಮದ ಹೆಂಗಸರೆಲ್ಲ ಬಿಸಿಲಿನಲ್ಲಿ ಬಿಂದಿಗೆ ಹಿಡಿದು ನಲ್ಲಿ ಮುಂದೆ ಕಾಯಬೇಕಿದೆ. ಜಾನುವಾರಗಳಿಗೆ ಗ್ರಾಮದ ಕಟ್ಟೆಯಲ್ಲಿ ಈ ಹಿಂದೆ ನೀರು ಕುಡಿಸುತ್ತಿದ್ದೆವು ಈಗ ಅದೂ ಸಹ ಬತ್ತಿದೆ.

ADVERTISEMENT

ಈ ಬಗ್ಗೆ ಗ್ರಾಮಪಂಚಾಯ್ತಿಯ ಪಿಡಿಓ ರವರಿಗೆ ಸಾಕಷ್ಟು ಸಾರಿ ಮನವಿ ಮಾಡಿದ್ದರೂ ಸಹ ನೀರು ಸರಬರಾಜು ಮಾಡಲು ಬೇಜವಾಬ್ದಾರಿತನ ತೋರುತ್ತಿದ್ದಾರೆ. ದೂರವಾಣಿ ಕರೆ ಮಾಡಲು ಪ್ರಯತ್ನಿಸಿದರೆ ಅವರ ಮೊಬೈಲ್ ಸ್ವಿಚ್ ಆಫ್ ಅಂತ ಬರುತ್ತದೆ. ಯಾರಿಗೆ ತಮ್ಮ ನೋವನ್ನು ಹೇಳಬೇಕೆಂದೇ ತೋಚುತ್ತಿಲ್ಲ ಎಂದು ದೂರಿದರು.

ಕೂಡಲೇ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡದಿದ್ದಲ್ಲಿ ತುರುವೇಕೆರೆ ಪಟ್ಟಣದಲ್ಲಿರುವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯ ಮುಂದೆಯೇ ಪ್ರತಿಭಟನೆ ಮಾಡುವುದಾಗಿ ಗ್ರಾಮದ ಮಹಿಳೆಯರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪಿಡಿಒಗೆ ದೂರವಾಣಿ ಕರೆ ಮಾಡಿದರ ಕರೆ ಸ್ವೀಕರಿಸಲಿಲ್ಲ.

ಪ್ರತಿಭಟನೆಯಲ್ಲಿ ಗ್ರಾಮದ ಮಹಿಳೆಯರಾದ ಕೆಂಪಮ್ಮ, ಹಳ್ಳಮ್ಮ, ಗೌರಮ್ಮ, ರೇಖಾ, ಮಂಗಳಮ್ಮ, ಜಯಮ್ಮ, ಶಿಲ್ಪ, ಶಿವಮ್ಮ ರವಿ, ಮುನೇಶ, ಧನಂಜಯ, ನಾಗೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.