ADVERTISEMENT

ತಿಪಟೂರು | ಕುಡಿಯುವ ನೀರು ಸೇರುವ ಕೊಳಚೆ

ಕೂಡಲೆ ಸರಿಪಡಿಸಿ ನಾಗರಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 3:12 IST
Last Updated 18 ಜೂನ್ 2020, 3:12 IST
ಶುದ್ಧೀಕರಣ ಯಂತ್ರಾಗಾರದ ಪಕ್ಕದಲ್ಲಿಯೇ ಹರಿಯುತ್ತಿರುವ ರಾಜಕಾಲುವೆ
ಶುದ್ಧೀಕರಣ ಯಂತ್ರಾಗಾರದ ಪಕ್ಕದಲ್ಲಿಯೇ ಹರಿಯುತ್ತಿರುವ ರಾಜಕಾಲುವೆ   

ತಿಪಟೂರು: ನಗರದಲ್ಲಿ ಸರಬರಾಜಾಗುತ್ತಿರುವ ಹೇಮಾವತಿ ಕುಡಿಯುವ ನೀರಿಗೆ ರಾಜಕಾಲುವೆಯ ಕೊಳಚೆ ನೀರು ಸೇರಿಕೊಳ್ಳುತ್ತಿದೆ. ಅದೇ ನೀರನ್ನು ನಿತ್ಯ ನಗರದ ಜನರು ಕುಡಿಯುತ್ತಿದ್ದಾರೆ.

ನಗರದ ರೈಲ್ವೆ ಗೇಟ್ ಬಳಿ ಇರುವ ನೀರು ಶುದ್ಧೀಕರಿಸುವ ಯಂತ್ರಾಗಾರಕ್ಕೆ ಈಚನೂರು ಕೆರೆಯಿಂದ ಹೇಮಾವತಿ ನೀರು ಸರಬರಾಜಾಗುತ್ತಿದೆ. ಅಲ್ಲಿ ಶುದ್ಧೀಕರಣವಾದ ನಂತರ ನಗರದ ವಿವಿಧ ಬಡಾವಣೆಗಳಿಗೆ ಸರಬರಾಜು ಮಾಡಲಾಗುತ್ತದೆ.

ಶುದ್ಧೀಕರಿಸಿದ ನೀರು ಸರಬರಾಜಾಗುವ ಮುಖ್ಯ ಪೈಪ್‍ಲೈನ್ ಒಡೆದು ಹೋಗಿದ್ದು, ಪಕ್ಕದಲ್ಲಿಯೇ ಇರುವ ರಾಜಕಾಲುವೆಯ ಕೊಳಚೆ ನೀರು ಅದಕ್ಕೆ ಸೇರಿಕೊಳ್ಳುತ್ತಿದೆ. ಬಳಕೆಗೂ ಯೋಗ್ಯವಲ್ಲದ ನೀರು ಎಲ್ಲರ ಮನೆಗಳಿಗೆ ದಿನವೂ ಪೂರೈಕೆಯಾಗುತ್ತಿದೆ.

ADVERTISEMENT

ಶುದ್ಧೀಕರಣ ಯಂತ್ರಾಗಾರಕ್ಕೂ ರಾಜಕಾಲುವೆಗೂ ಕೇವಲ 40ರಿಂದ 50 ಅಡಿ ಅಂತರವಿದ್ದು, ಮಳೆ ಬಂದರೆ ಕೊಳಚೆ ನೀರು ಸಹ ರಸ್ತೆಗೆ ಹರಿಯುವ ಜೊತೆಗೆ ಯಂತ್ರಾಗಾರದ ಆವರಣಕ್ಕೂ ಬಂದು ನಿಲ್ಲುತ್ತದೆ.

ನಗರದಲ್ಲಿ ಒಟ್ಟು 31 ವಾರ್ಡ್‍ಗಳಿದ್ದು, ಇಡೀ ನಗರಕ್ಕೆ ಪ್ರತಿದಿನವೂ 8ರಿಂದ 9 ಎಂಎಲ್‍ಡಿಯಷ್ಟು (ಮಿಲಿಯನ್ ಲೀಟರ್ ಪೆರ್ ಡೇ) ನೀರಿನ ಅಗತ್ಯವಿದೆ. ನಗರದ ಜನರು ವರ್ಷವಿಡೀ ಈಚನೂರು ಕೆರೆಯ ನೀರನ್ನೇ ಆಶ್ರಯಿಸಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಪರ್ಯಾಯ ವ್ಯವಸ್ಥೆಯನ್ನು ಕೈಗೊಳ್ಳದಿದ್ದರೆ ಕಲುಷಿತ ನೀರು ಸೇವನೆಯಿಂದ ಕಾಯಿಲೆ ಬೀಳುವವರ ಸಂಖ್ಯೆಯೂ ವೃದ್ಧಿಯಾಗಲಿದೆ. ತಕ್ಷಣ ಸರಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.