ADVERTISEMENT

ಮಧುಗಿರಿ| ಇ– ಸ್ವತ್ತು: ಪ್ರತಿದಿನ ಗ್ರಾಮ ಪಂಚಾಯಿತಿಗೆ ಅಲೆದಾಡುವ ಜನ

ಗಂಗಾಧರ್ ವಿ ರೆಡ್ಡಿಹಳ್ಳಿ
Published 13 ಜನವರಿ 2026, 4:49 IST
Last Updated 13 ಜನವರಿ 2026, 4:49 IST
ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯ
ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಯ   

ಮಧುಗಿರಿ: ನಿವೇಶನ ಹಾಗೂ ಮನೆಯ ಇ-ಸ್ವತ್ತಿಗಾಗಿ ಸಾರ್ವಜನಿಕರು ಪ್ರತಿದಿನ ಗ್ರಾಮ ಪಂಚಾಯಿತಿ ಕಾರ್ಯಾಲಯಗಳಿಗೆ ಅಲೆದಾಡುವುದರ ಜತೆಗೆ ಕಂಪ್ಯೂಟರ್ ಆಪರೇಟರ್ ಹಾಗೂ ಪಿಡಿಒಗಳನ್ನು ಸಾಫ್ಟ್‌ವೇರ್ ಸಿದ್ದವಾಯ್ತಾ ಎಂದು ಕೇಳಿ ಕೇಳಿ ಸಾಕಾಗಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಬಹುತೇಕ ಜನರು.

ರಾಜ್ಯ ಸರ್ಕಾರವು ತನ್ನ ಮಹತ್ವಾಕಾಂಕ್ಷೆಯ ಇ-ಸ್ವತ್ತು ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶದ ಆಸ್ತಿಗಳಿಗೆ ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ಇ-ಖಾತಾ ವಿತರಣೆ ಮಾಡುವುದನ್ನು ಕಡ್ಡಾಯಗೊಳಿಸಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು 2025 ಅನ್ನು ಅಧಿಕೃತವಾಗಿ ಪ್ರಕಟಿಸುವ ಮೂಲಕ ಈಚೆಗೆ ರಾಜ್ಯ ಸರ್ಕಾರ ಈ ಉಪಕ್ರಮಕ್ಕೆ ರಾಜ್ಯದಾದ್ಯಂತ ಚಾಲನೆ ನೀಡಲಾಗಿತ್ತು.

ಆದರೆ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಈ ಉಪಕ್ರಮವನ್ನು ಪ್ರಾರಂಭಿಸಲಾಗಿದ್ದು, ಗ್ರಾಮೀಣ ಪ್ರದೇಶದ ಆಸ್ತಿ ಮಾಲೀಕರು ಡಿಜಿಟಲ್ ಆಸ್ತಿ ಪ್ರಮಾಣಪತ್ರಗಳನ್ನು ಪಡೆಯಲು ಇದು ಅನುವು ಮಾಡಿಕೊಡುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ಅವರು ಘೋಷಿಸಿದ್ದರು. ಆದರೆ ಮಧುಗಿರಿ ತಾಲ್ಲೂಕಿನಲ್ಲಿ ಕೆಲ ತಿಂಗಳು ಕಳೆದರೂ ಕೂಡ ಇದುವರೆಗೂ ಕೂಡ ಮಧುಗಿರಿ ಪುರಸಭೆಯಾಗಲಿ ಹಾಗೂ ತಾಲ್ಲೂಕಿನ 39 ಗ್ರಾಮ ಪಂಚಾಯಿತಿಗಳಲ್ಲಾಗಲಿ ಎಲ್ಲೂ ಕೂಡ ಇದುವರೆಗೂ ಕಾರ್ಯಾರಂಭ ಆಗಿಲ್ಲ.

ADVERTISEMENT

ಸರ್ಕಾರವೇನೋ ಘೋಷಣೆ ಸುಮ್ಮನಾಗಿದೆ. ಆದರೆ ಜನರು ಅಂದಿನಿಂದ ಕಾರ್ಯಾಲಯಗಳಿಗೆ ತಿರುಗುತ್ತಿದ್ದಾರೆ. ಪಂಚಾಯಿತಿಗಳಲ್ಲಿರುವ ಪಿಡಿಒ, ಕಾರ್ಯದರ್ಶಿ, ಅಧ್ಯಕ್ಷರು, ಸದಸ್ಯರು ಹಾಗೂ ಕಂಪ್ಯೂಟರ್ ಆಪರೇಟರ್‌ಗಳನ್ನು ಇದರ ವಿಚಾರವಾಗಿ ಕೇಳಿದಾಗ ನಾಳೆ, ನಾಡಿದ್ದು, ಮುಂದಿನ ವಾರದಲ್ಲಿ ಸರಿಯಾಗುತ್ತಂತೆ ಎಂದು ಹೇಳುತ್ತಿರುವುದರಲ್ಲೇ ತಿಂಗಳು ಕಳೆಯುತ್ತಿವೆ. ಇದರಿಂದ ಕೆಲ ತುರ್ತು ಇರುವ ಜನರು ಪಂಚಾಯಿತಿಯಲ್ಲಿ ಕೆಲವೊಮ್ಮೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಮೇಲೆ ಗಲಾಟೆ ಕೂಡ ಮಾಡಿ ಹೋಗುತ್ತಿದ್ದಾರೆ.

ಸರ್ಕಾರ ಕೇವಲ ಜನರ ಕಣ್ಣೊರೆಸುವ ಸಲುವಾಗಿ ಯಾವುದೇ ಕಾರ್ಯಕ್ರಮ ಕಾಟಾಚಾರಕ್ಕೆ ಮಾಡಬಾರದು. ಅದು ಕಾರ್ಯರೂಪಕ್ಕೆ ಬಂದು ಜನರಿಗೆ ಉಪಯೋಗವಾಗಬೇಕು. ಬೇಕಾಬಿಟ್ಟಿ ಮಾಡುವ ಕಾರ್ಯಕ್ರಮಗಳಿಂದ ಜನರು ಕೆಲಸ ಕಾರ್ಯ ಬಿಟ್ಟು ಪ್ರತಿದಿನ ಕಚೇರಿಗಳಿಗೆ ಅಲೆಯುವುದೇ ಒಂದು ಕಾಯಕವಾಗಿದೆ. ಇದರಿಂದ ಕೂಲಿ ಕೆಲಸದ ಜತೆಗೆ ಸಮಯ ಮತ್ತು ಹಣ ಕೂಡ ನಷ್ಟ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಶೀಘ್ರ ಇ–ಸ್ವತ್ತು ಸಾಫ್ಟ್‌ವೇರ್ ಅಭಿವೃದ್ಧಿಪಡಿಸಿ ಜನರನ್ನು ಸಂಕಷ್ಟದಿಂದ ಪಾರು ಮಾಡಿ ಎಂದು ಕೊಡಿಗೇನಹಳ್ಳಿ ಹೋಬಳಿಯ ಕಸಿನಾಯಕನಹಳ್ಳಿ ಗ್ರಾಮದ ನಾಗರಾಜು ಅಳಲು ತೋಡಿಕೊಂಡರು.

ಬಿದಲೋಟಿ ರಂಗನಾಥ್ 
ಲಕ್ಷ್ಮಣ್ ಇಒ 
ಕಂಪ್ಯೂಟರ್ ಸಾಫ್ಟ್‌ವೇರ್ ಸಮಸ್ಯೆಯಿಂದ ಇ–ಸ್ವತ್ತು ತೆಗೆಯಲು ಸಾಧ್ಯವಾಗುತ್ತಿಲ್ಲ. ಈಗ 80 ಭಾಗ ಸಾಫ್ಟ್‌ವೇರ್ ಅಪ್‌ಲೋಡ್ ಆಗಿದ್ದು ಇನ್ನು ನಾಲ್ಕೈದು ದಿನಗಳಲ್ಲಿ ಸರಿಯಾಗಬಹುದು
ಲಕ್ಷ್ಮಣ್ ಮಧುಗಿರಿ ಇಒ

ಜನಸಾಮಾನ್ಯರಿಗೆ ನಷ್ಟ

ಹಳೆಯ ಮಾದರಿ ಇ–ಸ್ವತ್ತು ಮಾಡುವುದನ್ನು ಸ್ಥಗಿತಗೊಳಿಸಿ ಕರ್ನಾಟಕದಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಪಾರದರ್ಶಕತೆ ಹಾಗೂ ವಂಚನೆ ತಡೆಯುವ ಉದ್ದೇಶದಿಂದ ಇ– ಸ್ವತ್ತು 2.0 ತಂತ್ರಾಂಶಕ್ಕೆ ಚಾಲನೆ ನೀಡಿ ಹಲವು ತಿಂಗಳು ಕಳೆದರೂ ಈ ತಂತ್ರಾಂಶವು ತಾಂತ್ರಿಕತೆಯ ಕೊರತೆಯಿಂದ ಅಥವಾ ತಂತ್ರಾಂಶದ ತೊಡಕಿನಿಂದ ಜಾರಿಗೆ ಬರದಿರುವುದು ಜನಸಾಮಾನ್ಯರಿಗೆ ನಷ್ಟವುಂಟಾಗಿರುವುದು ಶೋಚನೀಯ ಸಂಗತಿಯಾಗಿದೆ ಎಂದು ವಕೀಲ ಬಿದಲೋಟಿ ರಂಗನಾಥ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.