ADVERTISEMENT

ತುಮಕೂರು | ಐಎಂಎ ಮಾದರಿಯಲ್ಲಿ ಈಜಿಮೈಂಡ್ ಕಂಪನಿ ವಂಚನೆ: ಆರೋಪ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 13:58 IST
Last Updated 14 ಜೂನ್ 2019, 13:58 IST
   

ತುಮಕೂರು: ಬೆಂಗಳೂರಿನ ಐಎಂಎ(ಐ ಮಾನಿಟರಿ ಅಡ್ವೈಸರಿ) ಕಂಪನಿ ಮಾದರಿಯಲ್ಲಿ ನಗರದ ಈಜಿಮೈಂಡ್ ಮಾರ್ಕೆಟಿಂಗ್ ಇಂಡಿಯಾ ಪ್ರೈ.ಲಿ ಹೆಸರಿನ ಕಂಪನಿಯು ಜನರಿಂದ ₹ 500 ಕೋಟಿಗೂ ಅಧಿಕ ಹಣ ಹೂಡಿಕೆ ಮಾಡಿಸಿಕೊಂಡು ವಂಚನೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಮಹಮ್ಮದ್ ಅಸ್ಲಂ ಎಂಬ ವ್ಯಕ್ತಿ ಎರಡು ವರ್ಷದ ಹಿಂದೆ ನಗರದಲ್ಲಿ ಈ ಕಂಪನಿ ಪ್ರಾರಂಭಿಸಿ ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣವನ್ನು ಹೂಡಿಸಿ ಹಣದೊಂದಿಗೆ ಪರಾರಿಯಾಗಿದ್ದಾನೆ ಎಂದು ಮುಸ್ಲಿಂ ಸಮುದಾಯದ ಮುಖಂಡ ನಿಸಾರ್ ಅಹಮ್ಮದ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಆರೋಪಿಯು ನಗರದ ಪೂರ್ ಹೌಸ್ ಕಾಲೋನಿ ಮತ್ತು ಸದಾಶಿವನಗರದಲ್ಲಿ ವಾಸಿಸುತ್ತಿದ್ದ. ನಗರದ ಶಾದಿಮಹಲ್ ಆವರಣದಲ್ಲಿರುವ ಎಚ್.ಎಂ.ಎಸ್ ಕಾಂಪ್ಲೆಕ್ಸ್‌ನಲ್ಲಿ ತನ್ನ ಕಂಪನಿಯ ಕಚೇರಿ ತೆರೆದಿದ್ದ. ಸಾಮಾನ್ಯ ಹೂಡಿಕೆ, ಶಿಕ್ಷಣ, ಮದುವೆ ಎಂಬ ಮೂರು ಹೆಸರಿನಲ್ಲಿ ಯೋಜನೆಗಳನ್ನು ಜಾರಿಗೆ ತಂದು ಸಾರ್ವಜನಿಕರು ಹಣ ಹೂಡಿಕೆ ಮಾಡುವಂತೆ ಮಾಡಿದ್ದ. ತುಮಕೂರು, ಶಿವಮೊಗ್ಗ, ಮಧುರೈ, ಕೇರಳ ಸೇರಿದಂತೆ ವಿವಿಧ ಕಡೆಯ ಒಂದು ಸಾವಿರಕ್ಕೂ ಹೆಚ್ಚು ಮಂದಿ ಹಣ ಹೂಡಿಕೆ ಮಾಡಿದ್ದಾರೆ ಎಂದು ಹೇಳಿದರು.

ADVERTISEMENT

ಸಾಮಾನ್ಯ ಯೋಜನೆಯಡಿ ₹ 50 ಸಾವಿರ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ₹ 3000 ಬಡ್ಡಿ, ₹ 1 ಲಕ್ಷ ಹೂಡಿಕೆ ಮಾಡಿದರೆ ತಿಂಗಳಿಗೆ ₹ 6000 ಬಡ್ಡಿ, ಎರಡು ಲಕ್ಷಕ್ಕೆ ₹ 12 ಸಾವಿರ ಬಡ್ಡಿ, ₹ 5 ಲಕ್ಷಕ್ಕೆ ₹ 30 ಸಾವಿರ ಬಡ್ಡಿ ನೀಡುವುದಾಗಿ ಭರವಸೆ ನೀಡಿ ಗ್ರಾಹಕರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದ ಎಂದು ವಿವರಿಸಿದರು.

ಅಲ್ಲದೇ 2018ರ ಜುಲೈ ತಿಂಗಳಿಂದ ಮತ್ತೊಂದು ಯೋಜನೆ ಪರಿಚಯಿಸಿ ₹ 1 ಲಕ್ಷ ಹೂಡಿಕೆ ಮಾಡಿದರೆ ಕೇವಲ ನಾಲ್ಕು ತಿಂಗಳ ಹತ್ತು ದಿನಗಳಲ್ಲಿಯೇ ₹ 10 ಲಕ್ಷ ಕೊಡುವುದಾಗಿ ಹೇಳಿದಾಗ ಹೂಡಿಕೆದಾರರು ಹೆಚ್ಚಿನ ಬಡ್ಡಿ ಆಸೆಗೆ ನೂರಾರು ಜನರು ಹೂಡಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.