ADVERTISEMENT

ದೇಶದ ಉನ್ನತಿಗೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿ

ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಆಶಯ

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 9:40 IST
Last Updated 12 ಜುಲೈ 2019, 9:40 IST
ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಗುರುವಾರ ಬಿಜಿಎಸ್ ವೃತ್ತದಲ್ಲಿ ಜನಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಪ್ರೇಮಕುಮಾರ ಹಸಿರು ನಿಶಾನೆ ತೋರಿಸಿದರು. ಡಾ.ಚಂದ್ರಿಕಾ ಇದ್ದರು
ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಗುರುವಾರ ಬಿಜಿಎಸ್ ವೃತ್ತದಲ್ಲಿ ಜನಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಪ್ರೇಮಕುಮಾರ ಹಸಿರು ನಿಶಾನೆ ತೋರಿಸಿದರು. ಡಾ.ಚಂದ್ರಿಕಾ ಇದ್ದರು   

ತುಮಕೂರು: ಜನಸಂಖ್ಯೆ ಹೆಚ್ಚಳ ದೇಶದ ಅಭಿವೃದ್ಧಿಗೆ ಮಾರಕವಾಗಿದೆ.ಮೂಢನಂಬಿಕೆಗಳನ್ನು ಜನರು ಬಿಡಬೇಕು. ಗಂಡು ಮಗುವಿನ ವ್ಯಾಮೋಹ ಬಿಟ್ಟು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ದೇಶದ ಉನ್ನತಿ ಸಾಧ್ಯವಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಲತಾ ರವಿಕುಮಾರ್ ಹೇಳಿದರು.

ಬಾಲಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ಧ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚೀನಾ ದೇಶದಂತೆ ನಮ್ಮ ದೇಶದಲ್ಲಿಯೂ ಸಹ ಒಂದು ಕುಟುಂಬಕ್ಕೆ ಒಂದು ಮಗು ಎಂಬ ಪದ್ಧತಿಯನ್ನು ಪಾಲಿಸಿಕೊಂಡರೆ ಜನಸಂಖ್ಯಾ ನಿಯಂತ್ರಣ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ.ಪ್ರೇಮ್‌ಕುಮಾರ್ ಮಾತನಾಡಿ, ‘ಜನಸಂಖ್ಯೆ ಹೆಚ್ಚಾದಂತೆ ಆಹಾರದ ಕೊರತೆ, ನಿರುದ್ಯೋಗ ಹಾಗೂ ಅಪೌಷ್ಟಿಕತೆ ಸಮಸ್ಯೆ ಹೆಚ್ಚುತ್ತದೆ. ಜನಸಂಖ್ಯಾ ನಿಯಂತ್ರಣದಲ್ಲಿ ಯುವಜನರ ಸಹಕಾರ ಮುಖ್ಯವಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಿಕಾ ಮಾತನಾಡಿ, ‘ಈ ವರ್ಷ ಜನಸಂಖ್ಯಾ ದಿನಾಚರಣೆಯನ್ನು ’ಕುಟುಂಬ ಕಲ್ಯಾಣ ನಿಭಾಯಿಸುವ ಜವಾಬ್ದಾರಿ, ತಾಯಿ ಮತ್ತು ಮಗುವಿನ ಆರೋಗ್ಯದ ಪೂರ್ಣ ತಯಾರಿ’ ಎಂಬ ಘೋಷಣೆಯೊಂದಿಗೆ ಆಚರಿಸಲಾಗುತ್ತಿದೆ’ ಎಂದರು.

ಪ್ರತಿಯೊಬ್ಬರೂ ಕುಟುಂಬ ಕಲ್ಯಾಣ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ಮಾತನಾಡಿ, ‘ದೇಶದ ಜನಸಂಖ್ಯೆ ಪ್ರಸ್ತುತ 134 ಕೋಟಿ ಇದ್ದು, ಪ್ರತಿ ವರ್ಷ 1.55 ಕೋಟಿಯಷ್ಟು ಹೆಚ್ಚಳವಾಗುತ್ತಿದೆ. ದೇಶದ ಅಭಿವೃದ್ಧಿಗೆ ಮಿತ ಜನಸಂಖ್ಯೆ ಅಗತ್ಯ ಎಂದರು.

ಕುಟುಂಬ ಕಲ್ಯಾಣ ಯೋಜನೆಯ ನೂತನ ಸುರಕ್ಷಿತ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಣಕ್ಕೆ ತರಬಹುದು’ ಎಂದು ತಿಳಿಸಿದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹಿಮಾ, ಜಿಲ್ಲಾ ಆ್ರಿತ ರೋಗ ವಾಹನ ನಿಯಂತ್ರಣಾಧಿಕಾರಿ ಡಾ.ಪುರುಷೋತ್ತಮ್, ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (ಆರ್‌ಸಿಎಚ್) ಅಧಿಕಾರಿ ಡಾ.ಕೇಶವರಾಜ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶರತ್‌ಚಂದ್ರ, ರೋಟರಿ ಸಂಸ್ಥೆಯ ಮುಷ್ತಾಕ್ ಅಹಮ್ಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.