ADVERTISEMENT

ಒಳ ಪಂಗಡದ ಹೆಸರಿನಲ್ಲಿ ವಿಘಟನೆ ಬೇಡ: ವಿಖ್ಯಾತನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 7:04 IST
Last Updated 27 ಅಕ್ಟೋಬರ್ 2025, 7:04 IST
<div class="paragraphs"><p>ತುಮಕೂರಿನಲ್ಲಿ ಜಿಲ್ಲಾ ಆರ್ಯ ಈಡಿಗರ ಸಂಘದಿಂದ ಹಮ್ಮಿಕೊಂಡಿದ್ದ ನಾರಾಯಣ ಗುರುಜಯಂತಿಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ವಿಖ್ಯಾತನಂದ ಸ್ವಾಮೀಜಿ,ರೇಣುಕಾನಂದ </p></div>

ತುಮಕೂರಿನಲ್ಲಿ ಜಿಲ್ಲಾ ಆರ್ಯ ಈಡಿಗರ ಸಂಘದಿಂದ ಹಮ್ಮಿಕೊಂಡಿದ್ದ ನಾರಾಯಣ ಗುರುಜಯಂತಿಯಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ವಿಖ್ಯಾತನಂದ ಸ್ವಾಮೀಜಿ,ರೇಣುಕಾನಂದ

   

ತುಮಕೂರು: ಈಡಿಗರಲ್ಲಿ ನಾವೆಲ್ಲ ಒಂದು ಎಂಬ ಏಕತಾ ಮನೋಭಾವ ಮೂಡಬೇಕು. ಒಳ ಪಂಗಡದ ಹೆಸರಿನಲ್ಲಿ ವಿಘಟನೆಯಾಗಬಾರದು ಎಂದು ಸೋಲೂರಿನ ಆರ್ಯ ಈಡಿಗರ ಮಹಾಸಂಸ್ಥಾನ ಮಠದ ವಿಖ್ಯಾತನಂದ ಸ್ವಾಮೀಜಿ ಸಲಹೆ ಮಾಡಿದರು.

ನಗರದಲ್ಲಿ ಭಾನುವಾರ ಜಿಲ್ಲಾ ಆರ್ಯ ಈಡಿಗರ ಸಂಘ, ಬ್ರಹ್ಮಶ್ರೀ ನಾರಾಯಣ ಗುರು ಜಯಂತ್ಯುತ್ಸವ ಸಮಿತಿ, ಜೆ.ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನ, ನಾರಾಯಣ ಗುರು ಸಮಾಜ ಟ್ರಸ್ಟ್, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಆಯೋಜಿಸಿದ್ದ ನಾರಾಯಣ ಗುರು ಜಯಂತಿ, ಪ್ರತಿಭಾ ಪುರಸ್ಕಾರ ವಿತರಣೆ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ADVERTISEMENT

ನಮ್ಮಲ್ಲಿ ಸಂಕುಚಿತ ಮನೋಭಾವ ಬಿಟ್ಟು ಹೋದರೆ ಮಾತ್ರ ಸದೃಢ ಸಮಾಜ ಕಟ್ಟಲು ಸಾಧ್ಯ. ಎಲ್ಲರು ಸ್ವಾವಲಂಬಿ, ಸುಸಂಸ್ಕೃತರಾಗಬೇಕು ಎಂಬುವುದು ನಾರಾಯಣ ಗುರು ಆಶಯವಾಗಿತ್ತು. ಅವರ ವಿಚಾರ ಎಷ್ಟು ಅಳವಡಿಸಿಕೊಂಡಿದ್ದೇವೆ ಎಂಬುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

ಮಾಜಿ ಸಚಿವ ಕುಮಾರ್ ಬಂಗಾರಪ್ಪ, ‘ನಾವೆಲ್ಲ ಒಳ ಪಂಗಡಗಳ ಜತೆಗೆ ಹೋರಾಟ ಮಾಡದೆ, ಒಗ್ಗಟ್ಟಾಗಿರಬೇಕು. ಎಲ್ಲರನ್ನು‌ ಜತೆಯಲ್ಲಿ ಕರೆದುಕೊಂಡು ಹೋದರೆ ಮುಂದುವರಿಯಲು ಸಾಧ್ಯ. ಈಗಾಗಲೇ ನಮ್ಮ ಕುಲ‌ಕಸಬು ಕಳೆದುಕೊಂಡಿದ್ದೇವೆ. ಇಂತಹ ಸಮಯದಲ್ಲಿ ಎಲ್ಲರು ಒಂದಾಗಿ, ಸಮಾಜ ಕಟ್ಟುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಶಾಸಕ ಕೆ.ಎನ್.ರಾಜಣ್ಣ, ‘ಶತಮಾನಗಳಿಂದ ತುಳಿತಕ್ಕೆ, ಶೋಷಣೆಗೆ ಒಳಗಾದ ಸಮುದಾಯಗಳು ಒಗ್ಗಟ್ಟಾಗಿರಬೇಕು. ರಾಜಕೀಯವಾಗಿ ಸಂಘಟಿತರಾಗಬೇಕು. ಉತ್ತಮ, ಸ್ವಾಭಿಮಾನದ ಬದುಕು ನಡೆಸಬೇಕು. ಜಾತಿಯ ನಾಯಕರಾಗದೆ, ಜನ ನಾಯಕರಾಗಬೇಕು. ವಿದ್ಯಾವಂತರಾಗಿ, ಆರ್ಥಿಕವಾಗಿ ಸದೃಢರಾಗಬೇಕು’ ಎಂದರು.

ನಿಟ್ಟೂರು ನಾರಾಯಣ ಗುರು ಮಹಾಸಂಸ್ಥಾನ ಮಠದ ರೇಣುಕಾನಂದ ಸ್ವಾಮೀಜಿ, ಶಾಸಕರಾದ ಬಿ.ಸುರೇಶ್‌ಗೌಡ, ಜಿ.ಬಿ.ಜ್ಯೋತಿಗಣೇಶ್‌, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ, ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ನಾಗರಾಜ್, ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಜೆ.ಪಿ.ಶಿವಣ್ಣ, ಮುಖಂಡರಾದ ಎಚ್.ಮಹದೇವ್, ಮಾದವನ್, ಭಾಗ್ಯವತಿ ವೆಂಕಟಸ್ವಾಮಿ, ಸದಾಶಿವ ಅಮೀನ್, ಕೆ.ಪಿ.ಮಂಜುನಾಥ್, ಎಚ್.ಎಂ.ಮಾಧು ಸಾಹುಕಾರ್‌ ಇದ್ದರು.

ಸಚಿವ ಸ್ಥಾನಕ್ಕೆ ಆಗ್ರಹ

ಮಧು ಬಂಗಾರಪ್ಪ ಈಗಾಗಲೇ ಸಚಿವರಾಗಿದ್ದು ಈಡಿಗ ಸಮುದಾಯಕ್ಕೆ ಮತ್ತೊಂದು ಸಚಿವ ಸ್ಥಾನ ನೀಡಬೇಕು. ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರನ್ನು ಸಚಿವ ಸಂಪುಟ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಮುಖಂಡರು ಒತ್ತಾಯಿಸಿದರು. ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಮತ್ತೆ ಮಂತ್ರಿ ಸ್ಥಾನ ನೀಡಬೇಕು ಎಂದೂ ಮನವಿ ಮಾಡಿದರು.

‘ಸಮಾಜ ಸೇವಾರತ್ನ’ ಪ್ರಶಸ್ತಿ

ಮುಖಂಡರಾದ ಶಾರದಾ ಕೃಷ್ಣಪ್ಪ ಕೆ.ಜಿ.ಮರಿಯಪ್ಪ ಮೀ‌ನಾಕ್ಷಿ ಸುರೇಶ್ ಡಾ.ನಾಗರಾಜು ಎನ್.ವೆಂಕಟಾಚಲಯ್ಯ ಟಿ.ಪಿ.ಮಂಜುನಾಥ್ ಕೆ.ಮುಕುಂದನ್ ಯು.ವಿ.ಅಶೋಗನ್ ಅವರಿಗೆ ‘ಸಮಾಜ ಸೇವಾರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಾಧ್ಯಾಪಕ ಯೋಗೀಶ್ ಕೈರೋಡಿ ವಿಶೇಷ ಉಪನ್ಯಾಸ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.