ADVERTISEMENT

ಈದ್‌ ಉಲ್‌ ಫಿತ್ರ್‌ ಸರಳ ಆಚರಣೆ

ಕೋವಿಡ್ ಸೋಂಕು ನಿರ್ಮೂಲನೆಗೆ ಪ್ರಾರ್ಥಿಸಿದ ಮುಸ್ಲಿಮರು

​ಪ್ರಜಾವಾಣಿ ವಾರ್ತೆ
Published 15 ಮೇ 2021, 4:00 IST
Last Updated 15 ಮೇ 2021, 4:00 IST
ತುಮಕೂರಿನಲ್ಲಿ ಮನೆಗಳಲ್ಲೇ ಮುಸ್ಲಿಮರು ಪ್ರಾರ್ಥಿಸಿದರು (ಎಡಚಿತ್ರ), ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದ ಕುಟುಂಬ ಸದಸ್ಯರು
ತುಮಕೂರಿನಲ್ಲಿ ಮನೆಗಳಲ್ಲೇ ಮುಸ್ಲಿಮರು ಪ್ರಾರ್ಥಿಸಿದರು (ಎಡಚಿತ್ರ), ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದ ಕುಟುಂಬ ಸದಸ್ಯರು   

ತುಮಕೂರು: ಕೋವಿಡ್–19 ಲಾಕ್‌ಡೌನ್‌ನಿಂದಾಗಿ ಮುಸ್ಲಿಮರು ಶುಕ್ರವಾರ ಈದ್‌ ಉಲ್‌ ಫಿತ್ರ್‌ಅನ್ನು ಸರಳವಾಗಿ ಆಚರಣೆ ಮಾಡಿದರು. ಎಲ್ಲರೂ ಮನೆಗಳಲ್ಲೇ ಪ್ರಾರ್ಥನೆ ಸಲ್ಲಿಸಿದರೆ, ಮಸೀದಿಗಳಲ್ಲಿ ಐದು ಜನ ಮೀರದಂತೆ ಕೋವಿಡ್ ನಿಯಮದ ವ್ಯಾಪ್ತಿಯಲ್ಲಿ ಪ್ರಾರ್ಥಿಸಿದರು.

ನಗರ ಹಾಗೂ ಜಿಲ್ಲೆಯ ಎಲ್ಲೆಡೆ ಇದೇ ರೀತಿಯ ಆಚರಣೆ ಕಂಡುಬಂತು. ‘ಕೋವಿಡ್ ಮಹಾಮಾರಿ ನಮ್ಮ ದೇಶದಿಂದ ತೊಲಗಬೇಕು’ ಎಂದು ಪ್ರಾರ್ಥಿಸಿದ್ದು ವಿಶೇಷವಾಗಿತ್ತು. ಜನರನ್ನು ಬಾಧಿಸುತ್ತಿರುವ ಕೊರೊನಾ ದೂರವಾಗಬೇಕು ಎಂದು ದೇವರಲ್ಲಿ ಕೇಳಿಕೊಂಡಿದ್ದಾಗಿ ಮುಸ್ಲಿಮ್ ಸಮುದಾಯದ ಮುಖಂಡರು, ಧರ್ಮಗುರುಗಳು ತಿಳಿಸಿದರು.

ಪರಸ್ಪರ ಅಪ್ಪಿಕೊಳ್ಳುವುದು, ಕೈ ಕುಲುಕದೇ ದೂರದಿಂದಲೇ ಶುಭಾಶಯ ಕೋರಿದರು. ದೂರವಾಣಿ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಸಂಬಂಧಿಕರು ಹಾಗೂ ಅಕ್ಕಪಕ್ಕದ ಮನೆಯವರನ್ನೂ ಆಹ್ವಾನಿಸದೆ ಅಂತರ ಕಾಯ್ದುಕೊಂಡರು. ಊಟಕ್ಕೂ ಆಹ್ವಾನ ಇರಲಿಲ್ಲ. ಮನೆಯವರಷ್ಟೇ ಹಬ್ಬದ ಭೋಜನ ಸವಿದರು.

ADVERTISEMENT

ಪ್ರತಿ ವರ್ಷವೂ ಸಾಕಷ್ಟು ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುತ್ತಿದ್ದರು. ಒಂದು ತಿಂಗಳು ಪಾಲನೆ ಮಾಡಿಕೊಂಡು ಬಂದ ಉಪವಾಸ ವ್ರತವನ್ನು ಇಂದು ಕೈಬಿಡುತ್ತಿದ್ದರು. ಹಬ್ಬ ಇನ್ನೂ ಒಂದು ವಾರ ಇರುವಾಗಲೇ ಖರೀದಿ ಭರಾಟೆ ಜೋರಾಗಿರುತಿತ್ತು. ಈ ಹಬ್ಬದಲ್ಲಿ ದಾನ ಕೊಡುವುದು ವಿಶೇಷ. ಅದಕ್ಕಾಗಿ ಬಟ್ಟೆ ಸೇರಿದಂತೆ ಇತರ ವಸ್ತುಗಳನ್ನು ಖರೀದಿಸುತ್ತಿದ್ದರು. ಹಬ್ಬದ ದಿನ ದಾನನೀಡಿ ರಂಜಾನ್ ಮಹತ್ವ ಸಾರುತ್ತಿದ್ದರು.

ಈ ಸಲ ಅಂತಹ ಚಟುವಟಿಕೆಗಳಿಗೆ ಅವಕಾಶ ಸಿಗಲಿಲ್ಲ. ಬಟ್ಟೆ ದಾನ ಕೊಡಲು ಸಾಧ್ಯವಾಗಲಿಲ್ಲ. ಆದರೆ ಬಹುತೇಕರು ಆಹಾರ ಧಾನ್ಯದ ಕಿಟ್‌ಗಳನ್ನು ವಿತರಿಸಿದರು. ಕೋವಿಡ್ ನಿಯಮ ಜಾರಿಯಲ್ಲಿ ಇರುವುದರಿಂದ ಗುಂಪು ಸೇರಿಸಿಕೊಳ್ಳದಂತೆ ನೋಡಿಕೊಂಡು ಕಿಟ್‌ಗಳನ್ನು ನೀಡಿದರು. ಮತ್ತೆ ಕೆಲವರು ವಸ್ತುಗಳ ಬದಲಿಗೆ ಹಣ ನೀಡುತ್ತಿದ್ದು ಕಂಡುಬಂತು.

ಮಾಂಸ ನಿಷೇಧ: ಹಬ್ಬದ ದಿನ ಬಿರಿಯಾನಿ, ವಿಶೇಷ ಭೋಜನ ಸಿದ್ಧಪಡಿಸಿ ಉಣಬಡಿಸುತ್ತಾರೆ. ಅಕ್ಕಪಕ್ಕದವರು, ಬಂಧು–ಬಳಗ, ಸ್ನೇಹಿತರನ್ನು ಊಟಕ್ಕೆ ಆಹ್ವಾನಿಸುವುದು ರೂಢಿ. ಈ ಸಲ ಶುಕ್ರವಾರವೇ ಬಸವ ಜಯಂತಿ ಬಂದಿದ್ದು, ನಗರದಲ್ಲಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿತ್ತು. ಹಾಗಾಗಿ ಬಹುತೇಕರ ಮನೆಗಳಲ್ಲಿ ಸಿಹಿ ಊಟ ಸಿದ್ಧಪಡಿಸಲಾಗಿತ್ತು. ಮತ್ತೆ ಕೆಲವರು ಹಿಂದಿನ ದಿನವೇ ಮಾಂಸ ಖರೀದಿಸಿ ಇಟ್ಟುಕೊಂಡಿದ್ದರು. ಅಂತಹವರ ಮನೆಗಳಲ್ಲಿ ಮಾತ್ರ ಮಾಂಸದ ಅಡುಗೆ ಮಾಡಲಾಗಿತ್ತು.

‘ಈ ಸಲ ಪ್ರತಿ ವರ್ಷದಂತೆ ಹಬ್ಬ ಆಚರಿಸಿಲ್ಲ. ಅತ್ಯಂತ ಸರಳವಾಗಿ ಪ್ರಾರ್ಥನೆಗೆ ಸೀಮಿತಗೊಳಿಸಿದ್ದೇವೆ. ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿಲ್ಲ. ಮನೆಗಳಲ್ಲಿ ಆಚರಣೆ ಮಾಡಿದ್ದೇವೆ. ಕೋವಿಡ್ ತೊಲಗಿಸುವಂತೆ ದೇವರಲ್ಲಿ ಕೇಳಿಕೊಂಡಿದ್ದೇವೆ’ ಎಂದು ನಗರದ ಬಾರ್‌ಲೈನ್ ರಸ್ತೆಯ ಮಸೀದಿ ಉಪಾಧ್ಯಕ್ಷ ಸೈಯದ್ ಶಬ್ಬೀರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.