ADVERTISEMENT

ತುಮುಲ್ ಅಧ್ಯಕ್ಷ ಸ್ಥಾನ ಚುನಾವಣೆಗೆ ಹೈಕೋರ್ಟ್ ತಡೆ

ಇಂದು ನಡೆಯಬೇಕಿದ್ದ ಚುನಾವಣೆ, ಸದಸ್ಯರಿಗೆ ಮಾಹಿತಿ ನೀಡದೇ ಮುಂದೂಡಿದ್ದಕ್ಕೆ ಕೋರ್ಟ್ ಮೊರೆ ಹೋಗಿದ್ದ ನಿರ್ದೇಶಕ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 19:46 IST
Last Updated 16 ನವೆಂಬರ್ 2018, 19:46 IST
   

ತುಮಕೂರು: ಶನಿವಾರ (ನ.17ರಂದು) ನಡೆಯಬೇಕಿದ್ದ ಸಮೀಪದ ಮಲ್ಲಸಂದ್ರದಲ್ಲಿರುವ ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ತುಮುಲ್) ಅಧ್ಯಕ್ಷರ ಚುನಾವಣೆಗೆ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.

ನವೆಂಬರ್ 13ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿತ್ತು. ನಂತರ ನ.17ಕ್ಕೆ ಚುನಾವಣೆಯನ್ನು ಸಹಕಾರ ಚುನಾವಣಾ ಪ್ರಾಧಿಕಾರ ಆಯುಕ್ತರು ಮುಂದೂಡಿದ್ದರು.

ಕೋರ್ಟ್‌ಗೆ ಮೊರೆ: ‘ನಿಯಮಾವಳಿ ಪ್ರಕಾರ ಚುನಾವಣೆಗೆ 7 ದಿನ ಮುಂಗಡವಾಗಿ ಸಂಬಂಧಪಟ್ಡ ಸದಸ್ಯರಿಗೆ ಮಾಹಿತಿ ನೀಡಬೇಕು. ಆದರೆ, ಮನಸೋ ಇಚ್ಛೆ ಚುನಾವಣೆಗೆ ದಿನಾಂಕ ನಿಗದಿಪಡಿಸಿ ಮುಂದೂಡಲಾಗಿದೆ. ಹೀಗಾಗಿ, ನ.17ರಂದು ನಡೆಯಲಿರುವ ಚುನಾವಣೆಗೆ ತಡೆ ನೀಡಲು ಕೋರಿ ತುಮುಲ್ ನಿರ್ದೇಶಕರಾದ ಬಿಜೆಪಿ ಬೆಂಬಲಿತ ಅಭ್ಯರ್ಥಿ ರೇಣುಕಾಪ್ರಸಾದ್ ನ.14ರಂದು ಹೈಕೋರ್ಟ್ ಮೊರೆ ಹೋಗಿದ್ದರು. ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ.17ರಂದು ನಡೆಯಬೇಕಿದ್ದ ಚುನಾವಣೆಗೆ ತಡೆಯಾಜ್ಞೆ ನೀಡಿದೆ.

ADVERTISEMENT

‘ಚುನಾವಣೆ ಮುಂದೂಡಿಕೆ ಬಗ್ಗೆ ಚುನಾವಣಾಧಿಕಾರಿಗಳು ಸದಸ್ಯರಿಗೆ ಮುಂಗಡವಾಗಿ ಮಾಹಿತಿ ನೀಡಿಲ್ಲ. ಅಲ್ಲದೇ, ಯಾವ ಕಾರಣಕ್ಕೂ ಚುನಾವಣೆ ಮುಂದೂಡಲಾಗಿದೆ ಎಂಬುದನ್ನು ಉಲ್ಲೇಖಿಸಿರಲಿಲ್ಲ. ನಿಯಮಬಾಹಿರವಾಗಿದ್ದರಿಂದ ನಮ್ಮ ಕಕ್ಷಿದಾರರು ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಚುನಾವಣೆಗೆ ತಡೆಯಾಜ್ಞೆ ನೀಡಿದೆ ಎಂದು ಅರ್ಜಿದಾರರ ಪರ ವಕೀಲರಾದ ದೇವಿಪ್ರಸಾದ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಚುನಾವಣಾ ಲೆಕ್ಕಾಚಾರ: ಈಗಾಗಲೇ 10 ನಿರ್ದೇಶಕರು ಚುನಾವಣೆಯಲ್ಲಿ ಆಯ್ಕೆಯಾಗಿದ್ದು, ಸರ್ಕಾರದಿಂದ ಒಬ್ಬರು ನಾಮನಿರ್ದೇಶನ, ಕೆಎಂಎಫ್, ಪಶುಸಂಗೋಪನಾ ಇಲಾಖೆ, ಸಹಕಾರ ಇಲಾಖೆ ಮತದಾನ ಹಕ್ಕು ಹೊಂದಿದ್ದು, 14 ಮಂದಿ ಮತ ಚಲಾಯಿಸಲು ಅವಕಾಶವಿದೆ.

ಅಧ್ಯಕ್ಷರಾಗಲು 8 ಮತಗಳು ಅಗತ್ಯವಾಗಿದ್ದು, ಬಿಜೆಪಿ 6, ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 2 ಸ್ಥಾನಗಳನ್ನು ಹೊಂದಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿ ಸರ್ಕಾರದ ನಾಮನಿರ್ದೇಶಕ ಹಾಗೂ ಪದ ನಿಮಿತ್ತ ಸದಸ್ಯರ ಮತ ಬಲದಿಂದ ಅಧಿಕಾರ ಹಿಡಿಯುವ ತಂತ್ರ ರೂಪಿಸಿವೆ ಎಂದು ಹೇಳಲಾಗಿದೆ.

ಬಿಜೆಪಿಗೆ ಅಧ್ಯಕ್ಷ ಸ್ಥಾನ ಸುಲಭ ಸಾಧ್ಯವಾದರೂ ಗುಬ್ಬಿ ಕ್ಷೇತ್ರದ ಚಂದ್ರಶೇಖರ್ ಜೆಡಿಎಸ್ ಮತ್ತು ಕಾಂಗ್ರೆಸ್‌ನವರೊಂದಿಗೆ ಗುರುತಿಸಿಕೊಂಡಿದ್ದಾರೆನ್ನಲಾಗಿದೆ. ಹೀಗಾಗಿ, ಕೊನೆ ಗಳಿಗೆಯ ವರೆಗೂ ಬಿಜೆಪಿ ಕಸರತ್ತು ನಡೆಸಲೇಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.