ADVERTISEMENT

ಪಾಲಿಕೆ ಚುನಾವಣೆ; ಸೆ.3ರ ಬೆಳಿಗ್ಗೆ 8.30ಕ್ಕೆ ಫಲಿತಾಂಶ ಘೋಷಣೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 13:06 IST
Last Updated 1 ಸೆಪ್ಟೆಂಬರ್ 2018, 13:06 IST
ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿನ ಮತ ಯಂತ್ರ ಕಾವಲಿಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಿರುವುದು
ತುಮಕೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿನ ಮತ ಯಂತ್ರ ಕಾವಲಿಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಿರುವುದು   

ತುಮಕೂರು: ತುಮಕೂರು ಮಹಾನಗರ ಪಾಲಿಕೆ, ಮಧುಗಿರಿ, ಚಿಕ್ಕನಾಯಕನಹಳ್ಳಿ ಪುರಸಭೆ, ಗುಬ್ಬಿ ಮತ್ತು ಕೊರಟಗೆರೆ ಪಟ್ಟಣ ಪಂಚಾಯಿತಿ ಚುನಾವಣೆ ಮತ ಎಣಿಕೆ ಸೋಮವಾರ (ಸೆ.3ರಂದು) ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದ್ದು, ಇದಕ್ಕಾಗಿ ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿದೆ.

ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿದ 484 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಶುಕ್ರವಾರ ನಿರ್ಧರಿಸಿದ್ದಾರೆ. ಮತ ಎಣಿಕೆ ಕೇಂದ್ರದ ಭದ್ರತಾ ಕೊಠಡಿಯಲ್ಲಿ ಮತಯಂತ್ರಗಳನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಇರಿಸಲಾಗಿದೆ.

ಮತ ಎಣಿಕೆ ಎಲ್ಲಿ: ತುಮಕೂರು ಮಹಾನಗರ ಪಾಲಿಕೆ, ಮಧುಗಿರಿ ಮತ್ತು ಚಿಕ್ಕನಾಯಕನಹಳ್ಳಿ ಪುರಸಭೆ ಹಾಗೂ ಕೊರಟಗೆರೆ ಮತ್ತು ಗುಬ್ಬಿ ಪಟ್ಟಣ ಪಂಚಾಯಿತಿ ಮತ ಎಣಿಕೆ ಸೆ. 3ರಂದು ನಡೆಯಲಿದೆ.

ADVERTISEMENT

ಪಾಲಿಕೆ ಮತ ಎಣಿಕೆ– ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಚಿ.ನಾ.ಹಳ್ಳಿ ಪುರಸಭೆ– ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಮಧುಗಿರಿ ಪುರಸಭೆ– ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಬ್ಬಿ ಪಟ್ಟಣ ಪಂಚಾಯಿತಿ– ತಾಲ್ಲೂಕು ಕಚೇರಿ, ಕೊರಟಗೆರೆ ಪಟ್ಟಣ ಪಂಚಾಯಿತಿ– ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.

ಫಲಿತಾಂಶ ಬೇಗ ನಿರೀಕ್ಷೆ

ಪಾಲಿಕೆ ಮತ ಎಣಿಕೆ ಸಿಬ್ಬಂದಿಗೆ ತರಬೇತಿ ನೀಡಲಾಗಿದ್ದು, ಮತ ಎಣಿಕೆ ದಿನ ಮೊದಲು ‘ಅಂಚೆ’ ಮತ ಎಣಿಕೆ ನಡೆಯಲಿದೆ. ನಂತರ ಇತರ ಮತಗಳ ಎಣಿಕೆ 35 ಟೇಬಲ್‌ನಲ್ಲಿ ನಡೆಯಲಿದೆ. 35 ವಾರ್ಡಗಳಿಗೆ 35 ಟೇಬಲ್ ಅಳವಡಿಸಲಾಗಿದೆ. ವಾರ್ಡ್‌ಗಳಲ್ಲಿ ಗರಿಷ್ಠ 11, ಕನಿಷ್ಠ 5 ಮತಗಟ್ಟೆಗಳನ್ನು ರೂಪಿಸಲಾಗಿತ್ತು.. ಎಣಿಕೆ ವೇಳೆ ಎಷ್ಟೇ ಮತಗಟ್ಟೆಗಳಿದ್ದರೂ ಆ ವಾರ್ಡಿನ ಒಂದೇ ಟೇಬಲ್‌ನಲ್ಲಿ ನಡೆಯಲಿದೆ.

ಬೆಳಿಗ್ಗೆ 8.30ರ ಹೊತ್ತಿಗೆ ಮತ ಎಣಿಕೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ತಾಂತ್ರಿಕ ಅಡಚಣೆ ಅಥವಾ ಬೇರೆ ಕಾರಣದಿಂದ ಒಂದಿಷ್ಟು ವಿಳಂಬವಾದರು 9 ಗಂಟೆ ಹೊತ್ತಿಗೆ ನಿಚ್ಚಳ ಫಲಿತಾಂಶ ಲಭಿಸಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.