ADVERTISEMENT

ಕುಣಿಗಲ್ ಪುರಸಭೆ ಚುನಾವಣೆ; ಕಾಂಗ್ರೆಸ್ ಟಿಕೆಟ್‌ಗೆ ಗಲಾಟೆ: ಲಘು ಲಾಠಿ ಪ್ರಹಾರ

​ಪ್ರಜಾವಾಣಿ ವಾರ್ತೆ
Published 16 ಮೇ 2019, 13:21 IST
Last Updated 16 ಮೇ 2019, 13:21 IST
ಕುಣಿಗಲ್ ಪುರಸಭೆ ಆವರಣದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಎರಡು ಗುಂಪುಗಳು ಘರ್ಷಣೆಗಿಳಿದಾಗ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು
ಕುಣಿಗಲ್ ಪುರಸಭೆ ಆವರಣದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಎರಡು ಗುಂಪುಗಳು ಘರ್ಷಣೆಗಿಳಿದಾಗ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು   

ಕುಣಿಗಲ್: ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಗುರುವಾರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಬಿಫಾರಂಗೆ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದ್ದಾರೆ.

17ನೇ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಈ ವಾರ್ಡ್‌ಗೆ ಕಾಂಗ್ರೆಸ್ ಪಕ್ಷದ ಟಿಕೆಟ್‌ಗೆ ಆ ಪಕ್ಷದ ಮುಖಂಡರಾದ ರೆಹಮಾನ್ ಪಾಷ, ಅಬ್ದುಲ್ ಹಮೀದ್ ಮತ್ತು ಜಬೀ ಎಂಬುವರು ತಮ್ಮ ಕುಟುಂಬದವರನ್ನು ಕಣಕ್ಕಿಳಿಸಲು ಮುಂದಾಗಿದ್ದರು.

ಇದರಲ್ಲಿ ಹಮೀದ್ ಗುಂಪಿನ ಆಸ್ಮಾ ಅವರಿಗೆ ಬಿಫಾರಂನ್ನು ಶಾಸಕರು ನೀಡಿದ್ದರು. ನಾಮಪತ್ರ ಸಲ್ಲಿಸಲು ಬಂದಾಗ ಟಿಕೆಟ್ ಸಿಗದೇ ಅಸಮಾಧಾನಗೊಂಡಿದ್ದ ಜಬೀ ಮತ್ತು ಅವರ ಬೆಂಬಲಿಗರು ಅಡ್ಡಗಟ್ಟಿ ಹಲ್ಲೆ ನಡೆಸಿ ದಾಖಲೆಗಳನ್ನು ಕಿತ್ತುಕೊಂಡು ಪರಾರಿಯಾದರು.

ADVERTISEMENT

ಬಳಿಕ ಜಬೀ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲು ಬಂದಾಗ ಜಬೀ ಮತ್ತು ಹಮೀದ್ ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಬಡಿದಾಡಿಕೊಂಡರು.

ಜಬೀ ಮತ್ತು ಆತನ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದರು. ಈ ಮೊದಲು ಕಿತ್ತುಕೊಂಡು ಹೋಗಿದ್ದ ದಾಖಲೆಗಳನ್ನು ವಶಕ್ಕೆ ಪಡೆದು ಹಮೀದ್ ಅವರಿಗೆ ನೀಡಿ ನಾಮಪತ್ರ ಸಲ್ಲಿಕೆಗೆ ಅನುವು ಮಾಡಿಕೊಟ್ಟರು.

ಕಣ್ಣೀರಿಟ್ಟ ಮುಖಂಡ: ಮತ್ತೊಂದೆಡೆ ತಮ್ಮ ಗುಂಪಿನವರಿಗೆ ಕಾಂಗ್ರೆಸ್ ಟಿಕೆಟ್ ಸಿಗದೇ ಇದ್ದುದಕ್ಕೆ ರೆಹಮಾನ್ ಷರೀಫ್ ಎಂಬುವರು ಅಸಮಾಧಾನ ವ್ಯಕ್ತಪಡಿಸಿದರು. ಜೆಡಿಎಸ್ ನಿಂದ ಬಂದವರಿಗೆ ಶಾಸಕ ಡಾ.ರಂಗನಾಥ್ ನೀಡಿದ್ದಾರೆ ಎಂದು ದೂರಿ ಕಣ್ಣೀರಿಟ್ಟರು. ಇವರ ಬೆಂಬಲಿಗರು ಪ್ರತಿಭಟಿಸಿದರು. ಬಳಿಕ ಷರೀಫ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.