ADVERTISEMENT

ವಿದ್ಯುತ್ ಕಣ್ಣಾಮುಚ್ಚಾಲೆ: ರೋಸಿ ಹೋದ ಜನ

ಕತ್ತಲೆ ಕವಿದ ಬಡಾವಣೆಗಳು, ಹೊಟೇಲ್‌ನಲ್ಲಿ ಗ್ರೈಂಡರ್ ಬಂದ್, ಎಲೆಕ್ಟ್ರಾನಿಕ್ಸ್ ಅಂಗಡಿಗಳು ಬಣ ಬಣ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 20:06 IST
Last Updated 13 ಜೂನ್ 2019, 20:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ನಗರದಲ್ಲಿ ವಿದ್ಯುತ್ ಕಣ್ಣಾ ಮುಚ್ಚಾಲೆಗೆ ಜನ ರೋಸಿ ಹೋಗುವಂತಾಗಿದೆ. ಹೊತ್ತಿಲ್ಲ ಗೊತ್ತಿಲ್ಲ. ಹಗಲಿರಲಿ, ರಾತ್ರಿ ಇರಲಿ ಹೀಗೆ ಬಂದು ಹಾಗೆ ಹೋಗುತ್ತಲೆ ಇರುತ್ತದೆ.

ಈಚೆಗೆ, ಮಳೆ ಗಾಳಿಗೆ ಮರ, ವಿದ್ಯುತ್ ಕಂಬ್‌ಗಳು ಕೆಲ ಕಡೆ ಬಿದ್ದಿದ್ದವು. ವಿಶೇಷವಾಗಿ ಶಿವಕುಮಾರ ಸ್ವಾಮೀಜಿ ವೃತ್ತ, ಕೃಷ್ಣನಗರ, ಸಿದ್ಧಗಂಗಾ ಬಡಾವಣೆ, ಗಂಗೋತ್ರಿನಗರ, ಕುವೆಂಪುನಗರ, ಸುತ್ತಮುತ್ತಲಿನ ಬಡಾವಣೆಗಳಿಗೆ ವಿದ್ಯುತ್ ಸಮಸ್ಯೆ ಆಗಿತ್ತು.

ಆ ಬಳಿಕ ಅದೇ ಸಮಸ್ಯೆ ನಿರಂತರ ಮುಂದುವರಿದಿದೆ. ಮಳೆ, ಗಾಳಿ ಇಲ್ಲದೇ ಇದ್ದರೂ ವಿದ್ಯುತ್ ಕಡಿತವಾಗುತ್ತಲೇ ಇರುತ್ತವೆ. ಒಮ್ಮೆ ಸಿಂಗಲ್ ಲೈನ್, ಮತ್ತೊಮ್ಮೆ ಹೈ ವೊಲ್ಟೇಜ್ ಇದ್ದೆ ಇರುತ್ತದೆ.

ADVERTISEMENT

ಫ್ಯಾನ್, ಕೂಲರ್, ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಜೀವನ ನಡೆಸುವ ವಾಸಿಗಳಿಗೆ ಈ ಬೇಸಿಗೆಯಲ್ಲಿ ವಿದ್ಯುತ್ ಕೈಕೊಟ್ಟು ಹೈರಾಣಾಗಿಸಿದೆ. ವಿದ್ಯುತ್ ಇಲ್ಲದೇ ದೈನಂದಿನ ಜೀವನಕ್ಕೆ ಬ್ರೇಕ್ ಹಾಕಿದಂತಾಗಿದೆ.

ಎಲೆಕ್ಟ್ರಾನಿಕ್ಸ್ ಉಪಕರಣಗಳ ಮಾರಾಟ ಮಳಿಗೆಗಳು, ಹೊಟೇಲ್, ದರ್ಶಿನಿ, ಸಣ್ಣ ಪುಟ್ಟ ವ್ಯಾಪಾರಸ್ಥರು ಗೋಳಾಡುತ್ತಿದ್ದಾರೆ.
ಹೊಟೇಲ್‌ಗಳಲ್ಲಿ ಇಡ್ಲಿ, ಚಟ್ನಿ, ವಡೆ, ದೋಸೆಗೆ ಹಿಟ್ಟು ರುಬ್ಬಲು ಕರೆಂಟ್ ಸಿಕ್ಕಾಪಟ್ಟೆ ಕೈಕೊಟ್ಟು ವ್ಯಾಪಾರಕ್ಕೆ ಹೊಡೆತ ಬಿದ್ದಿದೆ.

ಎಲೆಕ್ಟ್ರಾನಿಕ್ಸ್ ಉಪಕರಣ ಮಾರಾಟ ಮಳಿಗೆ, ಷೋರೂಂಗಳು ಕರೆಂಟ್ ಇಲ್ಲದೇ ಪ್ರಾಣ ಹೋದ ದೇಹಗಳಂತೆ ಗೋಚರಿಸುತ್ತಿವೆ.
ಬಣಗುಡುವ ಅಂಗಡಿಯೊಳಗೆ ಗ್ರಾಹಕರಾದರೂ ಬಂದು ಹೇಗೆ ವಿಚಾರಿಸ್ತಾರೆ? ಚಟ್ನಿನೇ ಇಲ್ಲದೇ ದೋಸೆ, ಇಡ್ಲಿ ಹೇಗೆ ತಿಂತಾರೆ ಎಂದು ವ್ಯಾಪಾರಸ್ಥರು ಗೋಳು ಹೇಳಿಕೊಳ್ಳುತ್ತಿದ್ದಾರೆ.

ಇವರೆಲ್ಲರ ನಡುವೆ ಜನಸಾಮಾನ್ಯರ ಗೋಳು ಕೇಳುವವರಿಲ್ಲದಂತಾಗಿದೆ. ದಿನಪೂರ್ತಿ ರಿಪೇರಿ, ದಿನಪೂರ್ತಿ ದುರಸ್ತಿ ಎಂದರೆ ಹೇಗೆ? ನಗರದಲ್ಲಿ ಅದರಲ್ಲೂ ಎಸ್‌ಐಟಿ, ಗಂಗೋತ್ರಿನಗರ, ಶಿವಕುಮಾರಸ್ವಾಮಿ ವೃತ್ತಿ, ಸಿದ್ಧಗಂಗಾ ಬಡಾವಣೆ, ಎಸ್.ಎಸ್.ಪುರಂ, ಕುವೆಂಪುನಗರ ಸುತ್ತಮುತ್ತಲಿನ ಬಡಾವಣೆಗಳಲ್ಲಿ ಅಷ್ಟೊಂದು ವಿದ್ಯುತ್ ತಾಂತ್ರಿಕ ಸಮಸ್ಯೆ ಇದೆಯಾ? ಇದ್ದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಬೆಸ್ಕಾಂ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಿಂದೆಂದೂ ಕಂಡಿರದ ರೀತಿಯಲ್ಲಿ ಈ ಬಾರಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಬರೀ ವಿದ್ಯುತ್ ಕಂಬಗಳು ಬಿದ್ದವು, ಲೈನ್ ಕಟ್ಟಾಗಿದೆ ಎಂದು ಹೇಳುತ್ತಾರೆ. ವಿದ್ಯುತ್ತಿನ ಜೊತೆ ಚೆಲ್ಲಾಟವಲ್ಲ ಎಂಬುದು ಎಲ್ಲರಿಗೂ ಗೊತ್ತು. ಹಾಗಂತ ಸಾರ್ವಜನಿಕರ ಸಹನೆಯನ್ನು ಬೆಸ್ಕಾಂ ಪರಿಕ್ಷೀಸಿದರೆ ಹೇಗೆ?

ಶಿಥಿಲಗೊಂಡ ವಿದ್ಯುತ್ ಕಂಬಗಳ ಪಟ್ಟಿ ಮಾಡುವುದು, ಅವುಗಳನ್ನು ಬದಲಾಯಿಸುವುದು, ವಿದ್ಯುತ್ ಮಾರ್ಗದಲ್ಲಿ ಮಳೆಗಾಲ ಸಂದರ್ಭದಲ್ಲಿ ಅಡಚಣೆ ತಂದೊಡ್ಡುವ ಮರ, ಮರದ ಟೊಂಗೆಗಳನ್ನು ಕಟಾವು ಮಾಡಿ ಕ್ರಮ ಕೈಗೊಳ್ಳುವುದು, ಬೀಳುವ ಮರಗಳನ್ನು ಗುರುತಿಸುವುದು ಇದ್ಯಾವುದನ್ನೂ ಮಾಡಿಲ್ಲವೆ. ಮಾಡಿದ್ದರೆ ಅಲ್ಪಸ್ವಲ್ಪ ಗಾಳಿಗೆ, ಯಾಕೆ ಕಂಬಗಳು ಉರುಳುತ್ತಿವೆ? ಎಂಬ ಸಾರ್ವಜನಿಕರ ಆಕ್ರೋಶ ಬೆಸ್ಕಾಂ ಅಧಿಕಾರಿಗಳು ಉತ್ತರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.