ADVERTISEMENT

ವೃತ್ತಿಪರ ಎಂಜಿನಿಯರ್ ಕಾಯ್ದೆ ಶೀಘ್ರ ಜಾರಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 4:13 IST
Last Updated 26 ಸೆಪ್ಟೆಂಬರ್ 2024, 4:13 IST
ತುಮಕೂರಿನಲ್ಲಿ ಮಂಗಳವಾರ ಎಂಜಿನಿಯರುಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಎಂಜಿನಿಯರುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರನ್ನು ಅಭಿನಂದಿಸಲಾಯಿತು. ಐಸಿಐ ಅಧ್ಯಕ್ಷ ಎಚ್.ಆರ್.ಗಿರೀಶ್, ಜನಸಂಪನ್ಮೂಲ ಇಲಾಖೆ ಮುಖ್ಯ ಎಂಜಿನಿಯರ್ ಬಿ.ಎನ್.ಫಣಿರಾಜು, ಸಂಘದ ಅಧ್ಯಕ್ಷ ಎನ್.ವಿ.ರಾಮಮೂರ್ತಿ, ಕಾರ್ಯದರ್ಶಿ ಎಂ.ಡಿ.ರಾಜು ಇತರರು ಭಾಗವಹಿಸಿದ್ದರು
ತುಮಕೂರಿನಲ್ಲಿ ಮಂಗಳವಾರ ಎಂಜಿನಿಯರುಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಎಂಜಿನಿಯರುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಧಕರನ್ನು ಅಭಿನಂದಿಸಲಾಯಿತು. ಐಸಿಐ ಅಧ್ಯಕ್ಷ ಎಚ್.ಆರ್.ಗಿರೀಶ್, ಜನಸಂಪನ್ಮೂಲ ಇಲಾಖೆ ಮುಖ್ಯ ಎಂಜಿನಿಯರ್ ಬಿ.ಎನ್.ಫಣಿರಾಜು, ಸಂಘದ ಅಧ್ಯಕ್ಷ ಎನ್.ವಿ.ರಾಮಮೂರ್ತಿ, ಕಾರ್ಯದರ್ಶಿ ಎಂ.ಡಿ.ರಾಜು ಇತರರು ಭಾಗವಹಿಸಿದ್ದರು   

ತುಮಕೂರು: ನಿರ್ಮಾಣ ಸೇರಿದಂತೆ ಎಲ್ಲಾ ಕ್ಷೇತ್ರಗಳ ಎಂಜಿನಿಯರುಗಳ ಜವಾಬ್ದಾರಿ, ರಕ್ಷಣೆಯ ದೃಷ್ಟಿಯಿಂದ ರಾಜ್ಯದಲ್ಲಿ ‘ಕರ್ನಾಟಕ ವೃತ್ತಿಪರ ಸಿವಿಲ್ ಎಂಜಿನಿಯರ್ ಕಾಯ್ದೆ’ (ಕೆಪಿಸಿಇಎ) ಶೀಘ್ರವೇ ಜಾರಿಗೆ ಬರಲಿದೆ ಎಂದು ಇಂಡಿಯನ್ ಕಾಂಕ್ರಿಟ್ ಇನ್‌ಸ್ಟಿಟೂಟ್ (ಐಸಿಐ) ಅಧ್ಯಕ್ಷ ಎಚ್.ಆರ್.ಗಿರೀಶ್ ಹೇಳಿದರು.

ನಗರದಲ್ಲಿ ಮಂಗಳವಾರ ರಾತ್ರಿ ಎಂಜಿನಿಯರುಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಎಂಜಿನಿಯರುಗಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಕೀಲರಿಗೆ ಬಾರ್ ಕೌನ್ಸಿಲ್, ವೈದ್ಯರಿಗೆ ಐಎಂಎ ಇರುವ ರೀತಿಯಲ್ಲಿ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಕೆಪಿಸಿಇಎ ಕೆಲಸ ಮಾಡಲಿದೆ. ಇದು ಎಂಜಿನಿಯರುಗಳ ಜವಾಬ್ದಾರಿ ಹೆಚ್ಚಿಸುವುದರ ಜತೆಗೆ, ಅವರ ರಕ್ಷಣೆಯನ್ನು ಗಮನದಲ್ಲಿ ಇಟ್ಟುಕೊಂಡು ಕಾಯ್ದೆ ರೂಪುಗೊಂಡಿದೆ. ಈ ರೀತಿಯ ಕಾಯ್ದೆ ಜಾರಿಗೆ ತಂದ ಎರಡನೇ ರಾಜ್ಯವಾಗಲಿದೆ ಎಂದರು.

ADVERTISEMENT

ನಿರ್ಮಾಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಪ್ರಸ್ತುತ ಸಿಮೆಂಟ್ ಉತ್ಪಾದನೆ 550 ಮೆಟ್ರಿಕ್ ಟನ್‍ಗೆ ಏರಿಕೆಯಾಗಿದೆ. ಸ್ವಾತಂತ್ರ್ಯದ ಶತಮಾನೋತ್ಸವ 2047ರ ವೇಳೆಗೆ ಇದು 1,300 ಮೆಟ್ರಿಕ್ ಟನ್‌ಗೆ ತಲುಪಲಿದೆ. ಇಂದಿಗೂ ದೇಶದಲ್ಲಿ ದೊಡ್ಡ ಮಟ್ಟದ ನಿರ್ಮಾಣದ ಪಾಲು ಶೇ 10ರಷ್ಟಿದೆ. ಶೇ 90ರಷ್ಟು ಮನೆ, ರಸ್ತೆ, ಸೇತುವೆ ಸೇರಿದಂತೆ ಸಣ್ಣಪುಟ್ಟ ನಿರ್ಮಾಣಕ್ಕೆ ಸೀಮಿತವಾಗಿದೆ ಎಂದು ತಿಳಿಸಿದರು.

ಜನಸಂಪನ್ಮೂಲ ಇಲಾಖೆ ಮುಖ್ಯ ಎಂಜಿನಿಯರ್ ಬಿ.ಎನ್.ಫಣಿರಾಜು, ‘ಪ್ರಾಕೃತಿಕ ಸಂಪತ್ತು ಹೆಚ್ಚಾಗುವುದಿಲ್ಲ. ಇರುವ ಸಂಪತ್ತಿನಲ್ಲೇ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಸೌಲಭ್ಯಗಳನ್ನು ಒದಗಿಸುವುದು ಎಂಜಿನಿಯರುಗಳ ಮೇಲಿರುವ ದೊಡ್ಡ ಜವಾಬ್ದಾರಿ’ ಎಂದು ನೆನಪಿಸಿದರು.

ತುಮಕೂರು ನಗರ ಶರವೇಗದಲ್ಲಿ ಬೆಳೆಯುತ್ತಿದ್ದು, ಜನಸಂಖ್ಯೆ 4 ಲಕ್ಷ ದಾಟಿದೆ. ಮುಂದಿನ ದಿನಗಳಲ್ಲಿ ನಗರ ಹಾಗೂ ಇಲ್ಲಿನ ಕೈಗಾರಿಕೆಗಳಿಗೆ ನೀರು ಒದಗಿಸಲು ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಎಂಜಿನಿಯರುಗಳ ಸಂಘದ ಅಧ್ಯಕ್ಷ ಎನ್.ವಿ.ರಾಮಮೂರ್ತಿ, ಕಾರ್ಯದರ್ಶಿ ಎಂ.ಡಿ.ರಾಜು, ಜಂಟಿ ಕಾರ್ಯದರ್ಶಿ ಎಚ್.ಎನ್.ಮಂಗಳಕುಮಾರ್, ನಿರ್ದೇಶಕರಾದ ಟಿ.ಎನ್.ಶ್ರೀಕಂಠಸ್ವಾಮಿ, ಎ.ಸತೀಶ್, ಎಂ.ಎಸ್.ರವಿಕುಮಾರ್, ರಾಮ್ಕೋ ಸಿಮೆಂಟ್ ಲಿಮಿಟೆಡ್‍ ಕಂಪನಿ ತಾಂತ್ರಿಕ ವಿಭಾಗದ ಹಿರಿಯ ಪ್ರಧಾನ ವ್ಯವಸ್ಥಾಪಕ ಅನಿಲ್ ಕೆ.ಪಿಳ್ಳೈ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.