ಕುಣಿಗಲ್: ಹೈ–ಟೆಕ್ ಬಸ್ ನಿಲ್ದಾಣ ನಿರ್ಮಾಣ ಉದ್ದೇಶದಿಂದ 2005ರಲ್ಲಿ ಪುರಸಭೆ ಬಸ್ ನಿಲ್ದಾಣವನ್ನು ತೆರವುಗೊಳಿಸಲಾಗಿದ್ದು, 20 ವರ್ಷ ಕಳೆದರೂ ಇನ್ನೂ ನಿರ್ಮಾಣವಾಗದ ಕಾರಣ ಅವ್ಯವಸ್ಥೆಯ ಆಗರವಾಗಿ ಪ್ರಯಾಣಿಕರು ಪರದಾಡುವ ಸ್ಥಿತಿ ಮುಂದುವರೆದಿದೆ.
2005ರಲ್ಲಿ ತುಮಕೂರು ಮತ್ತು ಕುಣಿಗಲ್‌ನಲ್ಲಿ ಹೈ-ಟೆಕ್ ಬಸ್ ನಿಲ್ದಾಣ ನಿರ್ಮಾಣ ಉದ್ದೇಶದಿಂದ ಬಸ್ ನಿಲ್ದಾಣದಲ್ಲಿದ್ದ ಮಳಿಗೆಗಳನ್ನು ತೆರವುಗೊಳಿಸಲಾಗಿತ್ತು. ಆದರೆ ತುಮಕೂರಿನಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಿ ಬಳಕೆಯಾಗುತ್ತಿದ್ದರೆ, ಕುಣಿಗಲ್‌ನಲ್ಲಿ ಮಾತ್ರ ಇನ್ನೂ ಪ್ರಾರಂಭವಾಗಿಲ್ಲ.
ಸ್ವಾತಂತ್ರ್ಯಪೂರ್ವದಲ್ಲಿ ನಿರ್ಮಾಣವಾಗಿದ್ದ ಪುರಸಭೆ ಬಸ್ ನಿಲ್ದಾಣದಲ್ಲಿ ಒಂದೆಡೆ ಸಾರಿಗೆ ಸಂಸ್ಥೆ ಬಸ್ ಮತ್ತೊಂದೆಡೆ ಖಾಸಗಿ ಬಸ್‌ಗಳಿಗೆ ವ್ಯವಸ್ಥೆ ಮಾಡಲಾಗಿತ್ತು. 25ಕ್ಕೂ ಹೆಚ್ಚು ವಾಣಿಜ್ಯ ಮಳಿಗೆ ಮತ್ತು ಬಸ್ ನಿಲ್ದಾಣ, ಹೋಟೆಲ್ ಜತೆಗೆ ನೆಲಬಾಡಿಗೆ ಆಧಾರದಲ್ಲಿ ಮಳಿಗೆಗಳು ನಿರ್ಮಾಣಗೊಂಡು ಪುರಸಭೆಗೆ ಹೆಚ್ಚು ಆದಾಯ ಬರುತ್ತಿತ್ತು.
ತುಮಕೂರು- ಮದ್ದೂರು- ಮೈಸೂರು ಮತ್ತು ಮಾಗಡಿ- ಬೆಂಗಳೂರು- ಹಾಸನ – ಮಂಗಳೂರು ಕಡೆಯ ನೂರಾರು ಬಸ್‌ಗಳು ನಿಲ್ದಾಣಕ್ಕೆ ಬಂದು ಹೋಗುತ್ತಿದ್ದು, ನಿತ್ಯ ಸಾವಿರಾರು ಪ್ರಯಾಣಿಕರ ಸಂಪರ್ಕ ಕೇಂದ್ರವಾಗಿದ್ದ ಬಸ್ ನಿಲ್ದಾಣಕ್ಕೆ ಹೈ-ಟೆಕ್ ಸ್ಪರ್ಶ ನೀಡುವ ಉದ್ದೇಶದಿಂದ ಒತ್ತುವರಿ ತೆರವಿನ ನೆಪದಲ್ಲಿ ತೆರವುಗೊಳಿಸಲಾಗಿದೆ. ಬಸ್ ನಿಲ್ದಾಣವನ್ನೇ ನಂಬಿ ಜೀವನ ನಡೆಸುತ್ತಿದ್ದ ಹಲವು ಕುಟುಂಬಗಳು ಬೀದಿಪಾಲಾಗಿವೆ.
2005ರಲ್ಲಿ ಡಿ.ನಾಗರಾಜಯ್ಯ- ಎಚ್.ನಿಂಗಪ್ಪ ಶಾಸಕರಾಗಿದ್ದು, ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಬಸ್ ನಿಲ್ದಾಣಕ್ಕೆ ಭೂಮಿಪೂಜೆ ಮಾಡುವುದಾಗಿ ತಿಳಿಸಿದ್ದರೂ, ಇದುವರೆಗೂ ಭೂಮಿ ಪೂಜೆಯಾಗಿಲ್ಲ. ನಂತರ ಬಿ.ಬಿ.ರಾಮಸ್ವಾಮಿ ಗೌಡ, ಡಿ.ನಾಗರಾಜಯ್ಯ ಮತ್ತು ಎಚ್.ಡಿ.ರಂಗನಾಥ್ ಎರಡನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರೂ, ಬಸ್ ನಿಲ್ದಾಣ ನಿರ್ಮಾಣ ಪ್ರಯತ್ನಗಳು ನಡೆಯುತ್ತಿದ್ದರೂ, ಕಾಮಗಾರಿ ಮಾತ್ರ ಪ್ರಾರಂಭವಾಗುವ ಲಕ್ಷಣಗಳು ಕಂಡುಬಂದಿಲ್ಲ.
ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಡಿ.ಕೆ.ಸುರೇಶ್ ನಾಲ್ಕನೇ ಬಾರಿ ಚುನಾವಣೆಗೆ ಸ್ಪರ್ಧಿಸುವ ಮುನ್ನ ನಡೆದ ಕಾರ್ಯಕ್ರಮದಲ್ಲಿ ಟೆಂಡರ್ ಪ್ರಕ್ರಿಯೆಗಳು ಪ್ರಾರಂಭವಾಗದಿದ್ದರೂ ಬಸ್ ನಿಲ್ದಾಣದ ಭೂಮಿಪೂಜೆ ನೆರವೇರಿಸಿದ್ದರು. ನಂತರ ಅದು ಕಾರ್ಯಕ್ರಮದ ಪಟ್ಟಿಯಲ್ಲೇ ಉಳಿಯಿತು.
ಪುರಸಭೆಯಲ್ಲಿ 2005ರಿಂದ ಜೆಡಿಎಸ್ ಮತ್ತು ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿದಿದ್ದರೂ, ಬಸ್ ನಿಲ್ದಾಣ ನಿರ್ಮಾಣಕ್ಕೆ ಯೋಜನೆ, ನೀಲಿ ನಕ್ಷೆ, ಅನುದಾನದ ಬಗ್ಗೆ ಚರ್ಚೆಗೆ ಸೀಮಿತವಾಗಿದೆ. ಈಗಲೂ ಖಾಸಗಿ ಬಸ್ ಸಂಚಾರದ ವ್ಯವಸ್ಥೆ ಇದ್ದು, ಬಸ್ ನಿಲ್ದಾಣದಲ್ಲಿ ಗೂಡಂಗಡಿಗಳು ಮತ್ತು ಸಂಚಾರ ಹೋಟೆಲ್, ಟೀಸ್ಟಾಲ್, ಸರಕು ಸಾಗಣೆ ವಾಹನಗಳ ಕಾರಬಾರು ಹೆಚ್ಚಾಗಿದೆ.
ರೋಟರಿ ಮತ್ತು ವರ್ತಕರ ಸಂಘದವರು ನಿರ್ಮಿಸಿದ್ದ ಪ್ರಯಾಣಿಕರ ತಂಗುದಾಣ ಶಿಥಿಲವಾಗಿವೆ. ಅನಧಿಕೃತ ಮೀನು ಮಾರುಕಟ್ಟೆ ಅಸ್ಥಿತ್ವಕ್ಕೆ ಬಂದಿದ್ದು, ಈ ಭಾಗದಲ್ಲಿಯೇ ಸಾರ್ವಜನಿಕ ಶೌಚಾಲಯವಿದ್ದು, ನಿರ್ವಹಣೆ ಕೊರತೆಯಿಂದಾಗಿ ದುರ್ನಾತ ಬೀರುತ್ತಿದ್ದು, ಮೂಗು ಮುಚ್ಚಿಕೊಂಡು ಹೋಗಬೇಕಾದ ಅನಿವಾರ್ಯವಿದೆ.
ಬಹುವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ₹9.50 ಕೋಟಿ ವೆಚ್ಚದಲ್ಲಿ ಬಸ್ ನಿಲ್ದಾಣ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆಗಳು ನಡೆದಿದ್ದು ಐದು ಮಂದಿ ಭಾಗಿಯಾಗಿದ್ದಾರೆ ಅಂತಿಮವಾಗಬೇಕಿದೆ.–ಮಂಜುಳಾ, ಪುರಸಭೆ ಮುಖ್ಯಾಧಿಕಾರಿ
ಪರ್ಯಾಯ ವ್ಯವಸ್ಥೆ ಅಗತ್ಯ
ಚುನಾವಣೆಗಳು ಬಂದಾಗ ಮಾತ್ರ ಅಭಿವೃದ್ಧಿ ಕಾರ್ಯಗಳು ನೆನಪಿಗೆ ಬಂದು ಭರವಸೆ ನೀಡುವ ಶಾಸಕ ಡಾ.ರಂಗನಾಥ್ ಚುನಾವಣೆಯಲ್ಲಿ ಗೆದ್ದ ನಂತರ ಅಭಿವೃದ್ಧಿ ಕಾರ್ಯ ಮರೆಯುತ್ತಾರೆ ಎಂಬುದಕ್ಕೆ ಬಸ್ ನಿಲ್ದಾಣ ಕಾಮಗಾರಿ ಸಾಕ್ಷಿಯಾಗಿದೆ. ಬಸ್ ನಿಲ್ದಾಣ ನೂರಾರು ಮಂದಿಗೆ ಬದುಕು ಕಟ್ಟಿಕೊಟ್ಟಿದೆ. ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣದ ಜತೆಗೆ ಅದನ್ನೇ ನಂಬಿ ಜೀವನ ನಡೆಸುತ್ತಿರುವವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕಿದೆ.–ರವಿಚಂದ್ರ ವೈ.ಎಚ್. ಕುಣಿಗಲ್ ಅಭಿವೃದ್ಧಿ ಫೋರಂ ಅಧ್ಯಕ್ಷ
ಯಾರೂ ಗಮನಹರಿಸುತ್ತಿಲ್ಲ
ಬಸ್ ನಿಲ್ದಾಣ ಸಾವಿರಾರು ಪ್ರಯಾಣಿಕರ ಸಂಪರ್ಕ ಕೇಂದ್ರವಾಗಿದ್ದು 20 ವರ್ಷವಾದರೂ ಮರುನಿರ್ಮಾಣಕ್ಕೆ ಕ್ರಮ ತೆಗೆದುಕೊಳ್ಳದಿರುವುದು ಅಭಿವೃದ್ಧಿ ಬಗ್ಗೆ ಮಾತನಾಡುವ ಜನಪ್ರತಿನಿಧಿಗಳು ಆತ್ಮಾಲೋಕನ ಮಾಡಿಕೊಳ್ಳಬೇಕಿದೆ. ಸಂಜೆಯಾದರೆ ಅನೈತಿಕ ಚಟುವಟಿಕೆಗಳ ತಾಣವಾಗುವ ಬಸ್ ನಿಲ್ದಾಣದ ಬಗ್ಗೆ ಯಾರು ಗಮನಹರಿಸುತ್ತಿಲ್ಲ.–ನಿಖಿಲ್ ಕುಮಾರ್, ನಿಖಿಲ್ ಕುಮಾರಸ್ವಾಮಿ ಸೇವಾ ಸಮಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.