ADVERTISEMENT

ಅನಿವಾರ್ಯತೆ ಎದುರು ಎಲ್ಲವೂ ಸುಲಭ: ಕೋವಿಡ್‌ ಆಸ್ಪತ್ರೆ ನರ್ಸ್ ಅಭಿಪ್ರಾಯ

ಕೋವಿಡ್ ಐಸಿಯುನಲ್ಲಿ ಕಾರ್ಯನಿರ್ವಹಿಸುತ್ತಿರುವ ಟಿ.ಎಸ್‌.ಸೌಮ್ಯಶ್ರೀ ಅವರ ನುಡಿ

ಅಭಿಲಾಷ ಬಿ.ಸಿ.
Published 10 ಆಗಸ್ಟ್ 2020, 4:42 IST
Last Updated 10 ಆಗಸ್ಟ್ 2020, 4:42 IST
ಸೌಮ್ಯಶ್ರೀ
ಸೌಮ್ಯಶ್ರೀ   

ತುಮಕೂರು: ಮೊದಮೊದಲು ಮಾಸ್ಕ್‌ ಹಾಕಿಕೊಳ್ಳಲು ಕಷ್ಟಪಡುತ್ತಿದ್ದೆ. ಆದರೆ ಈಗ ಪಿಪಿಇ ಕಿಟ್‌ ಇಲ್ಲದೆ ಕೆಲಸ ಮಾಡಲು ಕಷ್ಟ ಎನ್ನುವಷ್ಟರ ಮಟ್ಟಿಗೆ ಅದಕ್ಕೆ ಒಗ್ಗಿಹೋಗಿದ್ದೇನೆ.

–ಜಿಲ್ಲಾ ಆಸ್ಪತ್ರೆಯ ಕೋವಿಡ್ ಐಸಿಯುನಲ್ಲಿ ಸ್ಟಾಫ್‌ ನರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಟಿ.ಎಸ್‌.ಸೌಮ್ಯಶ್ರೀ ಅವರ ಮಾತಿದು.

ಯಾವುದೂ ಕಷ್ಟವಲ್ಲ, ಹೊಂದಿಕೊಳ್ಳಲು ಒಂದಷ್ಟು ಸಮಯಬೇಕು. ಮುಖ್ಯವಾಗಿ ಪರಿಸ್ಥಿತಿಯ ಅನಿವಾರ್ಯತೆ ಹಾಗೂ ಮಾಡಲೇಬೇಕೆಂಬ ಮನಸ್ಸು ಇದ್ದರೆಎಲ್ಲದಕ್ಕೂ ಒಗ್ಗಿಕೊಳ್ಳಬಹುದು ಎನ್ನುವುದು ಅವರ ಅನುಭವದ ನುಡಿ.

ADVERTISEMENT

ಒಮ್ಮೆ ಪಿಪಿಇ ಕಿಟ್‌ ಧರಿಸಿ ಕೆಲಸ ಆರಂಭಿಸಿದರೆ ಪಾಳಿ ಮುಗಿಸಿ ಬಂದು ಪಿಪಿಇ ಕಿಟ್ ತೆಗೆದಾಗ ಬೆವರಿ ನಿರಿಳಿಯುತ್ತಿರುತ್ತದೆ. ನಿರ್ಜಲೀಕರಣ ಆಗುವುದರಿಂದ ಪಿಪಿಇ ಕಿಟ್ ಧರಿಸಿ ಕೆಲಸ ಮಾಡುವ ಬಹುತೇಕ ಸಿಬ್ಬಂದಿ ಮೂರರಿಂದ ನಾಲ್ಕು ಕೆ.ಜಿ ತೂಕ ಕಡಿಮೆಯಾಗಿರುತ್ತಾರೆ ಎಂದರು.

ಪ್ರಾರಂಭದಲ್ಲಿ ಕೇವಲ ಆರು ಬೆಡ್‌ಗಳ ಐಸಿಯು ಇತ್ತು. ಕೊರೊನಾ ಸೋಂಕಿತರು ಹೆಚ್ಚಾದಂತೆ 20 ಬೆಡ್‌ಗಳ ಐಸಿಯು ಸಿದ್ಧಪಡಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಆಗ 15 ಮಂದಿ ಸಿಬ್ಬಂದಿ ಸೇರಿ ಸಿದ್ಧಪಡಿಸಿದೆವು. ಈವರೆಗೆ ಐಸಿಯುನಲ್ಲಿ ಕೇವಲ ಮಾನಿಟರ್‌ ಹಾಗೂ ವೆಂಟಿಲೇಟರ್ ಮಾತ್ರ ಇರುತ್ತಿತ್ತು. ಕೊರೊನಾದಿಂದಾಗಿ ಆಧುನಿಕ ಉಪಕರಣಗಳು ಪರಿಚಯವಾದವು. ಕೋವಿಡ್‌ ವೃತ್ತಿ ಜೀವನದಲ್ಲಿ ಸಾಕಷ್ಟು ಹೊಸತನ್ನು ಕಲಿಸಿತು ಎನ್ನುತ್ತಾರೆ ಸೌಮ್ಯಶ್ರೀ.

ಸಾಮಾನ್ಯ ರೋಗಿಗಳಿಗೆ ಅವರನ್ನು ಉಪಚರಿಸಲು ರೋಗಿಗಳ ಕಡೆಯವರು ಆಸ್ಪತ್ರೆಯಲ್ಲೇ ಇರುವುದರಿಂದ ಹೆಚ್ಚು ಆರಾಮವಾಗಿ ಇರುತ್ತಾರೆ. ಆದರೆ ಕೋವಿಡ್‌ ರೋಗಿಗಳಿಗೆ ಸಿಬ್ಬಂದಿಯೇ ಎಲ್ಲವೂ ಆಗಿರುತ್ತಾರೆ. ಹಾಗಾಗಿ ಅವರಿಗೆ ಚಿಕಿತ್ಸೆಗಿಂತ ಹೆಚ್ಚಾಗಿ ಮಾನಸಿಕವಾಗಿ ಹತ್ತಿರವಾಗಬೇಕು. ಪಕ್ಕದ ಬೆಡ್‌ನಲ್ಲಿರುವವರು ಮೃತಪಟ್ಟಾಗ ಅದರಿಂದ ತೀವ್ರ ಘಾಸಿಗೊಳ್ಳುತ್ತಾರೆ. ಆಗೆಲ್ಲಾ ಅವರಿಗೆ ನಮ್ಮ ಅಗತ್ಯ ಹೆಚ್ಚಿರುತ್ತದೆ. ಹಾಗಾಗಿ ಕೋವಿಡ್‌ ರೋಗಿ ಹಾಗೂ ಸಿಬ್ಬಂದಿ ನಡುವಿನ ಸಂಬಂಧ, ಸಂವಹನ ಬಹಳ ಮುಖ್ಯ. ಇದರಿಂದಲೇ ಅವರು ಶೇ 50ರಷ್ಟು ಗುಣವಾಗುತ್ತಾರೆ ಎನ್ನುತ್ತಾರೆ.

ಕೆಲ ರೋಗಿಗಳು ತುಂಬಾ ಚೆನ್ನಾಗಿಯೇ ಮಾತನಾಡುತ್ತಿರುತ್ತಾರೆ. ತಕ್ಷಣ ಅವರ ಸ್ಥಿತಿ ಗಂಭೀರವಾಗುತ್ತದೆ. ಸಾಧ್ಯವಾದಷ್ಟು ಆಮ್ಲಜನಕ ಪೂರೈಕೆ ಮಾಡುತ್ತೇವೆ. ಆದರೆ ಅವರ ಶ್ವಾಸಕೋಶಕ್ಕೆ ಅದನ್ನು ಸ್ವೀಕರಿಸುವ ಶಕ್ತಿ ಇರುವುದಿಲ್ಲ. ಕೆಲವರು ತಕ್ಷಣ ಕುಸಿಯುತ್ತಾರೆ. ಅದನ್ನು ನೋಡಿದಾಗ ಬೇಸರವಾಗುತ್ತದೆ ಎಂದರು.

‘ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಸಂದರ್ಭ ಬಂದಾಗ ಆರಂಭದಲ್ಲಿ ನನಗೆ ಸ್ವಲ್ಪ ಭಯವಾಗಿತ್ತು. ನನ್ನ ಗಂಡ ಧೈರ್ಯ ತುಂಬಿದರು. ನಾನು ಪ್ರತ್ಯೇಕವಾಗಿ ಹಾಸ್ಟೆಲ್‌ನಲ್ಲಿ ಇರುತ್ತೇನೆ ಎಂದೆ. ಆದರೆ ಅವರು ಬೇಡ ಮನೆಗೆ ಬಾ. ಏನು ಆಗಲ್ಲಾ, ಯಾರು ಮಾಡದ ಕೆಲಸವೇನಲ್ಲ ಎಂದು ಪ್ರೋತ್ಸಾಹಿಸಿದರು. ಸ್ನೇಹಿತರು, ಕುಟುಂಬ ಸದಸ್ಯರು,ಸಹೋದ್ಯೋಗಿಗಳ ಪ್ರೋತ್ಸಾಹದಿಂದಾಗಿಯೇ ಕೋವಿಡ್‌ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಯಿತು’ ಎಂದು ಸೌಮ್ಯಶ್ರೀ ಸ್ಮರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.