ADVERTISEMENT

ತುಮಕೂರು: ₹7 ಲಕ್ಷ ವಂಚಿಸಿದ ಫೇಸ್‌ಬುಕ್‌ ಸ್ನೇಹಿತ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 15:41 IST
Last Updated 8 ಅಕ್ಟೋಬರ್ 2024, 15:41 IST
ಸೈಬರ್‌
ಸೈಬರ್‌   

ತುಮಕೂರು: ಫೇಸ್‌ಬುಕ್‌ನಲ್ಲಿ ಪರಿಚಯವಾದ ಸ್ನೇಹಿತ ‘ನನ್ನ ಬಳಿ ಇರುವ ಡಾಲರ್‌ ಕರೆನ್ಸಿಯನ್ನು ಭಾರತದ ರೂಪಾಯಿಗೆ ಬದಲಾವಣೆ ಮಾಡುತ್ತಿದ್ದು, ತೆರಿಗೆ ಪಾವತಿಸಲು ಹಣ ಬೇಕು’ ಎಂದು ನಂಬಿಸಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೌಡಗೆರೆಯ ಶಿಕ್ಷಕ ಜಿ.ಪಿ.ದಿಲೀಪ್‌ ಎಂಬುವರಿಗೆ ₹6.95 ವಂಚಿಸಿದ್ದಾನೆ.

ಆ. 25ರಂದು ದಿಲೀಪ್‌ಗೆ ಫೇಸ್‌ಬುಕ್‌ ಮುಖಾಂತರ ಡಾ.ರೆಡ್ಡಿ ಎಂಬಾತ ಪರಿಚಯವಾಗಿದ್ದಾನೆ. ‘ನಾನು ಅಮೆರಿಕಾದಲ್ಲಿ ವಾಸವಿದ್ದು, ಅಲ್ಲಿಯೇ ಕೆಲಸ ಮಾಡಿಕೊಂಡಿದ್ದೇನೆ’ ಎಂದು ಹೇಳಿಕೊಂಡಿದ್ದಾನೆ. ಸೆ. 23ರಂದು ಅಪರಿಚಿತರೊಬ್ಬರು ಕರೆ ಮಾಡಿ, ನವದೆಹಲಿಯ ವಿಮಾನ ನಿಲ್ದಾಣದಿಂದ ಮಾತನಾಡುತ್ತಿದ್ದು, ನಿಮ್ಮ ಸ್ನೇಹಿತ ರೆಡ್ಡಿ ವಿಮಾನ ನಿಲ್ದಾಣದಲ್ಲಿ ಡಾಲರ್ಸ್‌ ಕರೆನ್ಸಿಯನ್ನು ರೂಪಾಯಿಗೆ ಬದಲಾಯಿಸಲು ಕಾಯುತ್ತಿದ್ದಾರೆ. ಅವರಿಗೆ ನಿಮ್ಮ ಸಹಾಯದ ಅವಶ್ಯಕತೆ ಇದೆ’ ಎಂದು ತಿಳಿಸಿದ್ದಾರೆ. ದಿಲೀಪ್‌ ಇದನ್ನು ನಂಬದೆ ಕರೆ ಕಟ್‌ ಮಾಡಿದ್ದಾರೆ.

ನಂತರ ರೆಡ್ಡಿ ಎಂಬುವರು ವಾಟ್ಸ್‌ ಆ್ಯಪ್‌ನಲ್ಲಿ ಕಾಲ್‌ ಮಾಡಿ, ‘ನನ್ನ ಬಳಿ ಡಾಲರ್‌ ಇದ್ದು, ಅದನ್ನು ರೂಪಾಯಿಗೆ ಬದಲಾವಣೆ ಮಾಡಲು ಜಿಎಸ್‌ಟಿ, ತೆರಿಗೆಯನ್ನು ರೂಪಾಯಿಯಲ್ಲಿ ಪಾವತಿಸಬೇಕು. ನೀವು ಈಗ ಹಣ ವರ್ಗಾಯಿಸಿದರೆ ಡಾಲರ್ಸ್‌ ಬದಲಾಯಿಸಿದ ನಂತರ ವಾಪಸ್‌ ನೀಡುತ್ತೇನೆ’ ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ದಿಲೀಪ್‌ ವಿವಿಧ ಖಾತೆಗಳಿಗೆ ₹6.95 ಲಕ್ಷ ವರ್ಗಾವಣೆ ಮಾಡಿದ್ದಾರೆ.

ADVERTISEMENT

ಇನ್ನೂ ಹೆಚ್ಚಿನ ಹಣ ವರ್ಗಾಯಿಸುವಂತೆ ಕೇಳಿದ್ದಾರೆ. ಇದರಿಂದ ಅನುಮಾನಗೊಂಡು ಗೂಗಲ್‌ನಲ್ಲಿ ವಿಮಾನ ನಿಲ್ದಾಣದ ಸಹಾಯವಾಣಿ ಸಂಖ್ಯೆ ಪಡೆದು ವಿಚಾರಿಸಿದಾಗ ಅಲ್ಲಿಂದ ಯಾರೂ ಕರೆ ಮಾಡಿಲ್ಲ ಎಂಬುವುದು ಗೊತ್ತಾಗಿದೆ. ದಿಲೀಪ್‌ ಸೈಬರ್‌ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.