ADVERTISEMENT

ಸುಳ್ಳು ಜಾತಿ ಪ್ರಮಾಣ ಪತ್ರ: ಗ್ರಾ.ಪಂ. ಮಾಜಿ ಸದಸ್ಯೆ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 5:10 IST
Last Updated 1 ಅಕ್ಟೋಬರ್ 2021, 5:10 IST

ಕುಣಿಗಲ್: ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರ ಅನುಭವಿಸಿದ್ದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ವಿರುದ್ಧ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2015ರಲ್ಲಿ ನಡೆದ ಚುನಾವಣೆ ಸಮಯದಲ್ಲಿ ತಾಲ್ಲೂಕಿನ ಅಮೃತೂರು ಹೋಬಳಿಯ ಮಾರ್ಕೋನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮಂಗಳ ಕ್ಷೇತ್ರ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿತ್ತು. ಪರಿಶಿಷ್ಟ ಜಾತಿ ಶಿಳ್ಳೇಕ್ಯಾತ ಜನಾಂಗದ ಭಾಗ್ಯಮ್ಮ ಅವರು ಕೊಡಗು ಮರಾಠ ಪರಿಶಿಷ್ಟ ಪಂಗಡ ಎಂದು ಜಾತಿ ಪ್ರಮಾಣ ಪತ್ರ ಪಡೆದು ನಾಮಪತ್ರ ಸಲ್ಲಿಸಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಮತ್ತು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಿದ್ದರು.

ADVERTISEMENT

ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯು ವಿಚಾರಣೆ ನಡೆಸಿತು. ಭಾಗ್ಯಮ್ಮ ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂಬುದು ಸಾಬೀತಾದ ಕಾರಣ ನಾಗರಿಕ ಹಕ್ಕು ಜಾರಿ ನಿರ್ದೆಶನಾಲಯದ ತುಮಕೂರು ವಿಭಾಗದ ಪಿ.ಐ ನಾಗರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.