ADVERTISEMENT

ತುಮಕೂರು: ಅವಮಾನಿಸಿದ ಷೋ ರೂಂನಲ್ಲೇ ವಾಹನ ಖರೀದಿಸಿದ ರೈತ

​ಪ್ರಜಾವಾಣಿ ವಾರ್ತೆ
Published 30 ಜನವರಿ 2022, 20:00 IST
Last Updated 30 ಜನವರಿ 2022, 20:00 IST
ರೈತ ಕೆಂಪೇಗೌಡ ಖರೀದಿಸಿದ ಬೊಲೆರೋ ಗೂಡ್ಸ್‌ ವಾಹನ
ರೈತ ಕೆಂಪೇಗೌಡ ಖರೀದಿಸಿದ ಬೊಲೆರೋ ಗೂಡ್ಸ್‌ ವಾಹನ   

ತುಮಕೂರು: ಇತ್ತೀಚೆಗೆ ವಾಹನ ಖರೀದಿಸಲು ನಗರದ ಷೋ ರೂಂ ಒಂದಕ್ಕೆ ಭೇಟಿ ನೀಡಿದ್ದ ತಾಲ್ಲೂಕಿನ ರಾಮನಪಾಳ್ಯದ ರೈತ ಕೆಂಪೇಗೌಡ ಅವರನ್ನು ಷೋ ರೂಂ ಸಿಬ್ಬಂದಿ ಅವಮಾನಿಸಿದ ಪ್ರಕರಣ ಸದ್ಯ ಸುಖಾಂತ್ಯ ಕಂಡಿದ್ದು, ಯುವ ರೈತ ಅದೇ ಷೋ ರೂಂನಲ್ಲಿ ವಾಹನ ಖರೀದಿಸಿದ್ದಾರೆ.

ಈ ಕುರಿತು ಮಹೀಂದ್ರ ಚೇರ್ಮನ್‌ ಆನಂದ್‌ ಮಹೀಂದ್ರ ‘ಲೆಟ್‌ ಮಿ ಆ್ಯಡ್‌ ಮೈ ವೆಲ್‌ಕಮ್‌ ಟು ಕೆಂಪೇಗೌಡ’ ಎಂದು ಟ್ವೀಟ್‌ ಮಾಡುವ ಮೂಲಕ ಮಹೀಂದ್ರ ಕುಟುಂಬಕ್ಕೆ ಕೆಂಪೇಗೌಡ ಅವರನ್ನು
ಸ್ವಾಗತಿಸಿದ್ದಾರೆ.

ಜ.21ರಂದು ನಗರದ ಷೊ ರೂಂ ಗೆ ವಾಹನ ಖರೀದಿಸಲು ಬಂದಿದ್ದ ರೈತ ಕೆಂಪೇಗೌಡ ಮತ್ತು ಅವರ ಸ್ನೇಹಿತರನ್ನು ಅವರ ವೇಷಭೂಷಣ ನೋಡಿ, ಷೋ ರೂಂ ಸಿಬ್ಬಂದಿ ನಿನಗೆ ₹10 ಕೊಡೋಕೆ ಆಗಲ್ಲ, ಕಾರ್‌ ಕೊಳ್ಳುವ ಯೋಗ್ಯತೆ ನಿನಗಿಲ್ಲ ಎಂದು ಅವಮಾನಿಸಿ ವಾಪಸ್‌ ಕಳುಹಿಸಿದ್ದರು. ಘಟನೆ ನಡೆದ ಅರ್ಧ ಗಂಟೆಯೊಳಗೆ ಕೆಂಪೇಗೌಡ ₹10 ಲಕ್ಷ ಹಣವನ್ನು ತಂದು ವಾಹನ ನೀಡುವಂತೆ ಪಟ್ಟು ಹಿಡಿದಿದ್ದ. ಆದರೆ ಷೋ ರೂಂ ಸಿಬ್ಬಂದಿ ದೊಡ್ಡ ಮೊತ್ತವನ್ನು ಒಮ್ಮೆಲೆ ಸ್ವೀಕರಿಸಲು ಸಾಧ್ಯವಿಲ್ಲ. ಹಾಗಾಗಿ ಕಾರ್‌ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ADVERTISEMENT

ಇದರಿಂದ ಸಮಾಧಾನಗೊಳ್ಳದ ರೈತಕ್ಷಮೆಯಾಚಿಸುವಂತೆ ಪೊಲೀಸ್ ಠಾಣೆಯಮೆಟ್ಟಿಲು ಹತ್ತಿದ್ದರು. ಕೊನೆಗೆ ಷೋ ರೂಂ ಸಿಬ್ಬಂದಿ ಕ್ಷಮೆಯಾಚಿಸಿದ್ದರು. ಈ ಘಟನೆ ಎಲ್ಲೆಡೆ ವೈರಲ್‌ ಆಗಿತ್ತು. ಸದ್ಯ ಕೆಂಪೇಗೌಡ ಅದೇ ಷೊ ರೂಂ ನಲ್ಲಿ ಮಹೀಂದ್ರ ಬೊಲೆರೋ ಗೂಡ್ಸ್‌ ವಾಹನ ಖರೀದಿಸಿ ನಗೆ ಬೀರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.