ADVERTISEMENT

ಸರ್ವೆ ಕಾರ್ಯಕ್ಕೆ ರೈತರು ವಿರೋಧ

ಜಿಲ್ಲಾ ಆಡಳಿತದ ವಿರುದ್ಧ ಆಕ್ರೋಶ; ನಂದಿಹಳ್ಳಿ–ಮಲ್ಲಸಂದ್ರ ಬೈಪಾಸ್‌ ರಸ್ತೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 6:21 IST
Last Updated 13 ನವೆಂಬರ್ 2025, 6:21 IST
ತುಮಕೂರು ತಾಲ್ಲೂಕಿನ ಕೌತಮಾರನಹಳ್ಳಿ ಬಳಿ ಬುಧವಾರ ನಂದಿಹಳ್ಳಿ–ಮಲ್ಲಸಂದ್ರ ಬೈಪಾಸ್‌ ರಸ್ತೆ ನಿರ್ಮಾಣದ ಸರ್ವೆ ಕಾರ್ಯಕ್ಕೆ ರೈತರು ಅಡ್ಡಿ ಪಡಿಸಿದರು
ತುಮಕೂರು ತಾಲ್ಲೂಕಿನ ಕೌತಮಾರನಹಳ್ಳಿ ಬಳಿ ಬುಧವಾರ ನಂದಿಹಳ್ಳಿ–ಮಲ್ಲಸಂದ್ರ ಬೈಪಾಸ್‌ ರಸ್ತೆ ನಿರ್ಮಾಣದ ಸರ್ವೆ ಕಾರ್ಯಕ್ಕೆ ರೈತರು ಅಡ್ಡಿ ಪಡಿಸಿದರು   

ತುಮಕೂರು: ನಗರದ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಂದಿಹಳ್ಳಿ–ಮಲ್ಲಸಂದ್ರ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದು, ಬುಧವಾರ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳನ್ನು ವಾಪಸ್‌ ಕಳುಹಿಸಿದರು.

ವಿಶೇಷ ಭೂಸ್ವಾಧೀನಾಧಿಕಾರಿ ಧರ್ಮಪಾಲ್‌, ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌, ಸಿಬ್ಬಂದಿ ಕೌತಮಾರನಹಳ್ಳಿ ಗ್ರಾಮದ ಬಳಿ ಸಮೀಕ್ಷೆಗೆ ಹೋಗಿದ್ದರು. ಈ ವೇಳೆ ರೈತ ಮುಖಂಡರು, ಗ್ರಾಮಸ್ಥರು ಸಮೀಕ್ಷೆ ಕಾರ್ಯಕ್ಕೆ ಅಡ್ಡಿ ಪಡಿಸಿದರು. ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಯಾವುದೇ ಕಾರಣಕ್ಕೂ ಸಮೀಕ್ಷೆಗೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು.

‘ಜಮೀನು ಸರ್ವೆ ಮಾಡುವ ಮುನ್ನ ಗ್ರಾಮ ಸಭೆ ನಡೆಸಬೇಕು. ಏಕಾಏಕಿ ಸಮೀಕ್ಷೆ ಮಾಡುವುದು ಸರಿಯಲ್ಲ. ಜಿಲ್ಲಾಧಿಕಾರಿ ರೈತರ ಜತೆಗೆ ಸಭೆ ನಡೆಸಬೇಕು’ ಎಂದು ರೈತರು ಒತ್ತಾಯಿಸಿದರು. ‘ರೈತರ ಸಮಸ್ಯೆ ಕೇಳದ ಜಿಲ್ಲಾಧಿಕಾರಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ADVERTISEMENT

ಸರ್ಕಾರದ ಬಳಿಗೂ ಒಂದು ನಿಯೋಗ ಹೋಗುತ್ತೇವೆ. ಬಹಳಷ್ಟು ರೈತರು ಈ ಯೋಜನೆ ವಿರೋಧಿಸಿದ್ದಾರೆ. ರೈತರ ಜತೆಗೆ ಸಭೆ ನಡೆಸುವಂತೆ ಒತ್ತಾಯಿಸುತ್ತೇವೆ. ಸಭೆ ನಡೆಸಿದರೆ ರೈತರಿಗೆ ಅಗತ್ಯ ಪರಿಹಾರವಾದರೂ ಸಿಗುತ್ತದೆ. ಆದರೆ, ಅಧಿಕಾರಿ ವರ್ಗ ಇದಕ್ಕೆ ಸಿದ್ಧವಿಲ್ಲ ಎಂದ ಅಸಮಾಧಾನ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಂಕರಪ್ಪ, ಮುಖಂಡರಾದ ಉಮೇಶ್, ಕಂಬೇಗೌಡ, ರಮೇಶ್, ಸಿ.ಯತಿರಾಜ್, ಉದಯ್‌ ಕುಮಾರ್, ಪಾಲನೇತ್ರಯ್ಯ ಇತರರು ಭಾಗವಹಿಸಿದ್ದರು.

ರೈತರಿಗೆ ಬೆದರಿಕೆ: ಆರೋಪ

ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ರೈತ ಮುಖಂಡರು ರೈತರಿಗೆ ಬೆದರಿಕೆ ಹಾಕಿ ಸಹಿ ಪಡೆದುಕೊಂಡು ಹೋಗಿದ್ದಾರೆ ಎಂದು ರೈತರು ಆರೋಪಿಸಿದರು. ‘ಜಿಲ್ಲಾಧಿಕಾರಿ ರೈತರ ಜತೆಗೆ ಕುಳಿತು ಮಾತನಾಡಿದರೆ ಇದಕ್ಕೊಂದು ಪರಿಹಾರ ಸಿಗುತ್ತದೆ. ಆದರೆ ಅವರು ಸಭೆ ನಡೆಸಲು ಸಿದ್ಧರಿಲ್ಲ. ಸರ್ಕಾರದ ಯೋಜನೆ ಒಪ್ಪಲು ನಾವು ತಯಾರಿಲ್ಲ. ಈ ರಸ್ತೆಗೆ ಪರ್ಯಾಯವಾಗಿ ಇನ್ನೂ 3 ರಸ್ತೆಗಳು ಇವೆ. ಇರುವ ರಸ್ತೆ ಅಭಿವೃದ್ಧಿ ಪಡಿಸಿದರೆ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು ಹೇಳಿದರು. ಜಿಲ್ಲಾ ಆಡಳಿತ ಭೂಸ್ವಾಧೀನ ನಿಯಮ ಪಾಲಿಸಬೇಕು. ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.