ADVERTISEMENT

ತುರುವೇಕೆರೆ: ರಾಗಿ ಬೆಳೆಯತ್ತ ರೈತರ ಚಿತ್ತ

ಮಳೆ ಕೊರತೆಯ ನಡುವೆ ತುರುವೇಕೆರೆ ತಾಲ್ಲೂಕಿನಲ್ಲಿ ಶೇ 54ರಷ್ಟು ಬಿತ್ತನೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 4:30 IST
Last Updated 11 ಆಗಸ್ಟ್ 2021, 4:30 IST
ಪೂಜಾ.ಬಿ
ಪೂಜಾ.ಬಿ   

ತುರುವೇಕೆರೆ: ತಾಲ್ಲೂಕಿನಾದ್ಯಂತ ಮಳೆ ಕೊರತೆಯ ನಡುವೆಯೂ ಶೇ 54ರಷ್ಟು ಬಿತ್ತನೆಯಾಗಿದೆ.

ರಾಗಿ ಮತ್ತು ತೆಂಗು ತಾಲ್ಲೂಕಿನ ಪ್ರಮುಖ ಬೆಳೆಗಳು. ಅದರಲ್ಲೂ ರಾಗಿ ಈ ಭಾಗದ ಜನರ ಆಹಾರ ಬೆಳೆ. ಜೊತೆಗೆ ರಾಗಿಯನ್ನು ಬೆಂಬಲ ಬೆಲೆಯಡಿ ಖರೀದಿಸುತ್ತಿರುವುದರಿಂದ ರೈತರು ರಾಗಿ ಬೆಳೆ ಬೆಳೆಯಲು ಒಲವು ತೋರುತ್ತಿದ್ದಾರೆ.

ಆಗಸ್ಟ್ ಮೊದಲ ವಾರದಲ್ಲಿ ಮುಂಗಾರು ಬಿತ್ತನೆ ವೇಳೆಗೆ ಸಮರ್ಪಕ ಮಳೆಯಿಲ್ಲದೆ ರಾಗಿ ಬಿತ್ತನೆ ಅವಧಿ ಮುಗಿದು ಬಿಡುತ್ತದೆ ಎಂಬ ಆತಂಕ ತಾಲ್ಲೂಕಿನ ರೈತರಲ್ಲಿ ಮನೆ ಮಾಡಿತ್ತು. ಜುಲೈ ತಿಂಗಳಲ್ಲಿ ತಾಲ್ಲೂಕಿನ ಕೆಲವೆಡೆ ಸೋನೆ ಮಳೆಯಾಗಿದ್ದು, ಬಿಟ್ಟರೆ
ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಲಿಲ್ಲ. ಹಾಗಾಗಿ ರೈತರು ಕಡಿಮೆ ಅವಧಿಗೆ ಕಟಾವಿಗೆ ಬರುವ ಎಂ.ಎಲ್ 356 ರಾಗಿ ಬಿತ್ತನೆಗೆ ಮುಂದಾಗಿದ್ದಾರೆ.

ADVERTISEMENT

ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದ್ದು, ಅಲ್ಲಿ ಮುಂಗಾರು ಬೆಳೆಗಳಾದ ರಾಗಿ, ಜೋಳ, ಸಾಸಿವೆ, ಅವರೆ, ಹರಳು, ತೊಗರಿ, ಹುಚ್ಚೆಳ್ಳು, ಸಜ್ಜೆ ಬಿತ್ತನೆ ಮಾಡಿದ್ದಾರೆ. ರಾಗಿ ಪೈರು ಚೆನ್ನಾಗಿ ಮೊಳಕೆಯೊಡೆದಿದೆ. ಈ ವೇಳೆ ಮಳೆ ಕೈಕೊಟ್ಟಿದ್ದಕ್ಕೆ ರೈತರು ಕುಂಟೆ ಒಡೆಯುವ ಮೂಲಕ ರಾಗಿ ಪೈರು ಒಣಗದಂತೆ ನೋಡಿಕೊಂಡಿದ್ದಾರೆ.

ತಾಲ್ಲೂಕಿನ ಹಲವು ಭಾಗದಲ್ಲಿ ಸೋಮವಾರದಿಂದ ಉತ್ತಮ ಮಳೆಯಾಗುತ್ತಿದ್ದು, ರೈತರು ಹದ ಮಾಡಿಕೊಂಡಿರುವ ಭೂಮಿ ತೇವಾಂಶದಿಂದ ಕೂಡಿದ್ದು, ಬಿತ್ತನೆಗೆ ಹಿನ್ನಡೆಯಾಗಿದೆ.

ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ರಾಗಿ ಬಿತ್ತನೆ ಗುರಿ 5,960 ಹೆಕ್ಟೇರ್. ಸದ್ಯಕ್ಕೆ 395 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ದಂಡಿನಶಿವರ ಹೋಬಳಿಯಲ್ಲಿ 950 ಹೆಕ್ಟೇರ್‌, ಮಾಯಸಂದ್ರ ಹೋಬಳಿಯಲ್ಲಿ 3,289, ದಬ್ಬೇಘಟ್ಟ ಹೋಬಳಿಯಲ್ಲಿ 2,950 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆಯಾಗಿದೆ.

ಜುಲೈನಿಂದ ಆಗಸ್ಟ್‌ 2ನೇ ವಾರದವರೆಗೆ ಕಸಬಾ ಹೋಬಳಿ 371 ಮಿ.ಮೀ, ದಬ್ಬೇಘಟ್ಟ 323.6 ಮಿ.ಮೀ, ದಂಡಿನಶಿವರ 410 ಮಿ.ಮೀ, ಮಾಯಸಂದ್ರ ಹೋಬಳಿಯಲ್ಲಿ 429.3 ಮಿ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.