ADVERTISEMENT

ರೈತ, ಕಾರ್ಮಿಕ ವಿರೋಧಿ ನೀತಿಗೆ ಖಂಡನೆ: ವೆಂಕಟೇಗೌಡ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2021, 3:26 IST
Last Updated 28 ಸೆಪ್ಟೆಂಬರ್ 2021, 3:26 IST
ಗುಬ್ಬಿ ಪಟ್ಟಣದ ಬಸ್‌ ನಿಲ್ದಾಣದ ಬಳಿ ರಸ್ತೆ ತಡೆ ನಡೆಸಿದ ಮುಖಂಡರು
ಗುಬ್ಬಿ ಪಟ್ಟಣದ ಬಸ್‌ ನಿಲ್ದಾಣದ ಬಳಿ ರಸ್ತೆ ತಡೆ ನಡೆಸಿದ ಮುಖಂಡರು   

ಗುಬ್ಬಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹಲವು ಕಾಯ್ದೆಗಳು ರೈತ ವಿರೋಧಿಯಾಗಿವೆ. ಸರ್ಕಾರ ಕೃಷಿ ಮಾಡಿ ಬದುಕುತ್ತಿರುವ ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಾ ಅವರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ ಟೀಕಿಸಿದರು.

ಸೋಮವಾರ ಸಂಯುಕ್ತ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಅಂಗವಾಗಿ ಪಟ್ಟಣದಲ್ಲಿ ಏರ್ಪಡಿಸಿದ್ದ ಬಂದ್ ಉದ್ದೇಶಿಸಿ ಅವರು ಮಾತನಾಡಿದರು.

ವಿದ್ಯುತ್ ಮಸೂದೆ, ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆ ಸೇರಿದಂತೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ADVERTISEMENT

ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಕಂದಾಯ ಅಧಿಕಾರಿಗಳು ರೈತರನ್ನು ವಿನಾಕಾರಣ ಅಲೆದಾಡಿಸುತ್ತಿದ್ದಾರೆ. ತಾಲ್ಲೂಕಿನಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ತಕ್ಷಣವೇ ಪೂರ್ಣಗೊಳಿಸುವ ನಿಟ್ಟಿನಲ್ಲಿ ಶಾಸಕರು, ಜಿಲ್ಲಾ ಸಚಿವರು ಗಮನಹರಿಸಬೇಕಿದೆ ಎಂದು ಒತ್ತಾಯಿಸಿದರು.

ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಗುರುರೇಣುಕಾರಾಧ್ಯ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾಯ್ದೆಗಳು ಸಂಪೂರ್ಣವಾಗಿ ರೈತರ ವಿರೋಧಿಯಾಗಿವೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಆಡಳಿತ ನಡೆಸುತ್ತಿದ್ದರೂ ತೈಲ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಸುವುದರ ಮೂಲಕ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ದೂಡಿವೆ ಎಂದು
ದೂರಿದರು.

ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಅನುಸೂಯಮ್ಮ,ದಲಿತ ಮುಖಂಡ ನಿಟ್ಟೂರು ನಾಗರಾಜು ಮಾತನಾಡಿದರು.

ಪಟ್ಟಣದಲ್ಲಿ ಸರ್ಕಾರಿ ಕಚೇರಿಗಳು ಎಂದಿನಂತೆಯೇ ಕಾರ್ಯ ನಿರ್ವಹಿಸಿದವು. ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳು ಮುಚ್ಚಿ ಬಂದ್‌ಗೆ ಸಹಕಾರ ವ್ಯಕ್ತಪಡಿಸಿದರು.

ಪ್ರಾಂತೀಯ ರೈತ ಸಂಘದ ಸಂಚಾಲಕ ಅಜ್ಜಪ್ಪ, ಅಂಗನವಾಡಿ ನೌಕರರ ಸಂಘದ ಕಾರ್ಯದರ್ಶಿ ಸರೋಜಾ, ರೈತ ಮುಖಂಡರಾದ ಜಗದೀಶ್, ಲೋಕೇಶ್, ಪ್ರಕಾಶ್, ಕಿಟ್ಟಪ್ಪ, ನಿಂಗೇಗೌಡ, ಕೃಷ್ಣಶೆಟ್ಟಿ, ನಿಂಗರಾಜು, ಮಹಾದೇವಮ್ಮ, ದಲಿತ ಸಂಘಟನೆಯ ನಾಗಭೂಷಣ, ಗಂಗಾರಾಮ್, ಯುವ ಜೆಡಿಎಸ್ ಅಧ್ಯಕ್ಷ ವೆಂಕಟೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಲೋಕೇಶ್ ಸೇರಿದಂತೆ ವಿವಿಧ ಸಂಘಟನೆಯ ಅಧ್ಯಕ್ಷರು, ಕಾರ್ಯಕರ್ತರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.