ADVERTISEMENT

ಬೆಂಬಲ ಬೆಲೆ ಹೆಚ್ಚಳಕ್ಕೆ ರೈತರ ಆಗ್ರಹ

ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2022, 5:58 IST
Last Updated 27 ಡಿಸೆಂಬರ್ 2022, 5:58 IST
ಗುಬ್ಬಿಯ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಬಿ. ಆರತಿ ಅವರಿಗೆ ಮನವಿ ಪತ್ರ ಸಲ್ಲಿಸಿದ ರೈತ ಸಂಘದ ಪದಾಧಿಕಾರಿಗಳು
ಗುಬ್ಬಿಯ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಬಿ. ಆರತಿ ಅವರಿಗೆ ಮನವಿ ಪತ್ರ ಸಲ್ಲಿಸಿದ ರೈತ ಸಂಘದ ಪದಾಧಿಕಾರಿಗಳು   

ಗುಬ್ಬಿ: ಬೆಲೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಸರ್ಕಾರದಿಂದ ಮಂಜೂರಾಗಿರುವ ಜಮೀನುಗಳಿಗೆ ತಕ್ಷಣ ಖಾತೆ ಮಾಡಿಕೊಟ್ಟು ಪಹಣಿ ನೀಡಬೇಕು ಎಂದು ಒತ್ತಾಯಿಸಿ ಸೋಮವಾರ ಪಟ್ಟಣದಲ್ಲಿ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಚನ್ನಬಸವೇಶ್ವರ ದೇವಾಲಯ ದಿಂದ ಮೆರವಣಿಗೆಯಲ್ಲಿ ಹೊರಟ ರೈತರು ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಬಿ. ಆರತಿ ಅವರಿಗೆ ಮನವಿ ಪತ್ರ |ಸಲ್ಲಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಂಕರಪ್ಪ ಮಾತನಾಡಿ, ತಾಲ್ಲೂಕಿನಲ್ಲಿ ಅಡಿಕೆ ಮತ್ತು ತೆಂಗನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ. ಅದರಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಈ ವರ್ಷ ಸುರಿದ ಬಾರಿ ಮಳೆಯಿಂದ ಅಡಿಕೆ ಇಳುವರಿ ಕಡಿಮೆಯಾಗಿದೆ. ಜೊತೆಗೆ ಬೆಲೆ ಕುಸಿಯುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಸರ್ಕಾರ ತಕ್ಷಣ ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ
ನೀಡಿದರು.

ADVERTISEMENT

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಗೌಡ ಮಾತನಾಡಿ, ಬೆಲೆ ಕುಸಿತದಿಂದ ರೈತರು ಈಗಾಗಲೇ ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದಾರೆ. ಸರ್ಕಾರ ವಿದೇಶಗಳಿಂದ ಅಡಿಕೆಯನ್ನು ಸುಂಕವಿಲ್ಲದೆ ಆಮದು ಮಾಡಿಕೊಳ್ಳುತ್ತಿದೆ. ಜೊತೆಗೆ, ಕಳ್ಳ ಸಾಗಾಣಿಕೆ ಮೂಲಕ ದೇಶದೊಳಗೆ ಅಡಿಕೆ ತರುತ್ತಿರುವುದು ಬೆಲೆ ಕುಸಿತಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ತಕ್ಷಣ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ಕಾರ್ಯದರ್ಶಿ ಲೋಕೇಶ್ ಮಾತನಾಡಿ, ದೇಶದ ಒಟ್ಟಾರೆ ತೆಂಗು ಉತ್ಪಾದನೆಯ ಶೇ 50ರಷ್ಟನ್ನು ತುಮಕೂರು ಜಿಲ್ಲೆಯಲ್ಲಿಯೇ ಬೆಳೆಯಲಾಗುತ್ತಿದೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕಿದೆ. ವಿದ್ಯುತ್ ಖಾಸಗೀಕರಣವನ್ನು ಕೈಬಿಟ್ಟು ರೈತ ಪರವಾದ ನಿಲುವು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲ್ಲೂಕು ಯುವ ಘಟಕದ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಬಸವರಾಜು, ಕಾರ್ಯಾಧ್ಯಕ್ಷ ನರಸಿಂಹಮೂರ್ತಿ, ಕಾರ್ಯದರ್ಶಿ ಜಗದೀಶ್,ಪ್ರಾಂತ ರೈತ ಸಂಘದ ಅಜ್ಜಪ್ಪ, ಹೋಬಳಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.