ADVERTISEMENT

ಗುಬ್ಬಿ | ಬಹು ಬೆಳೆಯತ್ತ ರೈತರ ಚಿತ್ತ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2023, 4:22 IST
Last Updated 20 ನವೆಂಬರ್ 2023, 4:22 IST
ಗುಬ್ಬಿ ತಾಲ್ಲೂಕಿನಲ್ಲಿ ಬೆಳೆದಿರುವ ಸೇವಂತಿಗೆ
ಗುಬ್ಬಿ ತಾಲ್ಲೂಕಿನಲ್ಲಿ ಬೆಳೆದಿರುವ ಸೇವಂತಿಗೆ   

ಗುಬ್ಬಿ: ತಾಲ್ಲೂಕಿನಲ್ಲಿ ಈ ಬಾರಿ ವಾಡಿಕೆಯಷ್ಟು ಮಳೆಯಾಗದೆ ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾಗಿದ್ದು, ಅನೇಕ ರೈತರು ಹೂವು, ತರಕಾರಿ ಬೆಳೆದು ಆದಾಯದ ಮೂಲ ಹೆಚ್ಚಿಸಿಕೊಳ್ಳುವತ್ತ ಚಿತ್ತ ಹರಿಸಿದ್ದಾರೆ.

ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ತೆಂಗು ರೋಗ ಭಾದಿತವಾಗಿ ಇಳುವರಿ ಇಲ್ಲವಾಗಿದ್ದರೆ, ಅಡಿಕೆ ಧಾರಣೆ ಕುಸಿಯುತ್ತಿರುವುದು ರೈತರಲ್ಲಿ ಆತಂಕ ತಂದಿತ್ತು. ಹೈನುಗಾರಿಕೆ ನಂಬಿ ಬದುಕು ಕಟ್ಟಿಕೊಂಡಿದ್ದ ಕುಟುಂಬಗಳು ಮಳೆಯ ಕೊರತೆಯಿಂದಾಗಿ ರಾಸುಗಳ ಮೇವು ಕೊರತೆಯಾಗುವ ಆತಂಕ ಎದುರಾಗಿದೆ.

ತಾಲ್ಲೂಕಿನ ನಿಟ್ಟೂರು ಹೋಬಳಿ ಅಂಕಾಪುರದ ರೈತ ಶಿವಲಿಂಗಯ್ಯ ಜಮೀನಿನಲ್ಲಿ ಖಾಲಿ ಇದ್ದ ಸ್ವಲ್ಪ ಜಾಗದಲ್ಲಿಯೇ ಸೇವಂತಿಗೆ ಬೆಳೆಯುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ದೊರೆತಿರುವುದರಿಂದ ಲಾಭ ಪಡೆಯಲು ಸಾಧ್ಯವಾಗಿದೆ.

ADVERTISEMENT

‘ಮಳೆ ಕಡಿಮೆಯಾಗಿದ್ದರಿಂದ ಏನು ಮಾಡುವುದು ಎನ್ನುವುದೇ ತೋಚುತ್ತಿರಲಿಲ್ಲ. ಗಟ್ಟಿ ಮನಸ್ಸು ಮಾಡಿ ಸೇವಂತಿಗೆ ಸಸಿ ನಾಟಿ ಮಾಡಿ ಬೆಳೆದವು. ದುಬಾರಿ ವೆಚ್ಚದ ನಡುವೆಯೂ ಉತ್ತಮ ಲಾಭವಾಗಿರುವುದು ಸಂತಸ ತಂದಿದೆ’ ಎನ್ನುತ್ತಾರೆ ಹೂವು ಬೆಳೆಗಾರ ಶಿವಲಿಂಗಯ್ಯ.

ರೈತರು ಕೇವಲ ಒಂದು ಬೆಳೆಯನ್ನೇ ನಂಬಿಕೊಳ್ಳದೆ ಪರ್ಯಾಯ ಬೆಳೆ‌ಗಳತ್ತ ಗಮನಹರಿಸಿದಲ್ಲಿ ಆದಾಯ ಪಡೆಯಲು ಸಾಧ್ಯ. ರೈತರು ತೆಂಗು, ಅಡಿಕೆಯನ್ನೇ ನಂಬಿಕೊಳ್ಳದೆ ಬೇರೆ ಬೆಳೆಗಳನ್ನು ಬೆಳೆಯುವತ್ತಲೂ ಗಮನಹರಿಬೇಕಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ತೆಂಗು ಮತ್ತು ಅಡಿಕೆ ಬೆಳೆಗೆ ಜೋತು ಬೀಳದೆ ಬಹುಬೆಳೆ ಕೃಷಿ ಪದ್ಧತಿ ಅನುಸರಿಸಿದಲ್ಲಿ ರೈತರು ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿರುವುದಿಲ್ಲ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಇದರ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕು ಎನ್ನುತ್ತಾರೆ ಕೃಷಿಕ ಮಹೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.