ಗುಬ್ಬಿ: ತಾಲ್ಲೂಕಿನಲ್ಲಿ ಕಳೆದ ವರ್ಷ ಮಳೆ ಇಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಆದರೆ ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ರೈತರು ನಿರೀಕ್ಷೆಗಿಂತ ಹೆಚ್ಚಾಗಿ ಬಿತ್ತನೆ ಮಾಡಿದ್ದರು. ರಾಗಿ ಹಾಗೂ ಇತರೆ ಆಹಾರ ಧಾನ್ಯಗಳ ಇಳುವರಿಯು ಉತ್ತಮವಾಗಿದೆ.
ರೈತರು ಬೆಳೆಗಳ ಒಕ್ಕಣೆಗೆ ಗ್ರಾಮಗಳ ಸಮೀಪದ ಹೆದ್ದಾರಿ ಹಾಗೂ ಗ್ರಾಮೀಣ ಭಾಗದ ಸಿಮೆಂಟ್ ಹಾಗೂ ಟಾರ್ ರಸ್ತೆಗಳನ್ನೇ ಕಣಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಹಲವರು ಟ್ರ್ಯಾಕ್ಟರ್‌ಗಳನ್ನು ಬಳಸಿ ಒಕ್ಕಣೆ ಮಾಡಿದರೆ, ಮತ್ತೆ ಕೆಲವರು ರಸ್ತೆಗಳಲ್ಲಿ ಓಡಾಡುವ ವಾಹನಗಳನ್ನೇ ಅವಲಂಬಿಸಿ ಒಕ್ಕಣೆ ಮಾಡುತ್ತಿದ್ದಾರೆ.
ರಸ್ತೆಯಲ್ಲಿಯೇ ಬೆಳೆ ಹರಡಿರುವುದರಿಂದ ವಾಹನಗಳು ಅವುಗಳ ಮೇಲೆ ಓಡಾಡುವುದು ಅನಿವಾರ್ಯವಾಗುತ್ತಿದೆ. ವಾಹನಗಳು ರಭಸವಾಗಿ ಹೋಗುವುದರಿಂದ ಧಾನ್ಯಗಳು ಗಟ್ಟಿತನವನ್ನು ಕಳೆದುಕೊಳ್ಳುವ ಜೊತೆಗೆ ವಾಹನಗಳ ಚಕ್ರಗಳಲ್ಲಿರುವ ಕಲ್ಲು, ಮಣ್ಣುಗಳು ಧಾನ್ಯದೊಂದಿಗೆ ಸೇರಿಕೊಳ್ಳುತ್ತದೆ. ಅವುಗಳನ್ನು ಬೇರ್ಪಡಿಸಲು ಸಾಧ್ಯವಾಗುತ್ತಿಲ್ಲ.
ರಸ್ತೆಗಳಲ್ಲಿ ಒಕ್ಕಣೆ ಮಾಡುವುದರಿಂದ ರಾಗಿ ಹುಲ್ಲು, ಹುರುಳಿ, ಅವರೆ ಹಾಗೂ ತೊಗರಿ ಹೊಟ್ಟು ಪುಡಿಯಾಗುವ ಜೊತೆಗೆ ಕಲ್ಲು, ಮಣ್ಣು ಹೆಚ್ಚಾಗಿ ಸೇರಿಕೊಳ್ಳುವುದರಿಂದ ರಾಸುಗಳು ತಿನ್ನಲು ಯೋಗ್ಯವಾಗುವುದಿಲ್ಲ.
ಈ ಹಿಂದೆ ರಾಗಿ ಬೆಳೆಯನ್ನು ಕಟಾವು ಮಾಡಿದ ನಂತರ ಮನೆ ಮಂದಿಯೇ ಸೇರಿಕೊಂಡು ಇಲ್ಲವೇ ಮುಯ್ಯಾಳುಗಳ ಮೂಲಕ ಕಂತೆಗಳನ್ನು ಕಟ್ಟಿ ಗ್ರಾಮದ ಕಟ್ಟೆ ಅಥವಾ ಕೆರೆಗಳ ಆಸುಪಾಸು ನೀರಿನ ಅನುಕೂಲ ಹಾಗೂ ಉತ್ತಮವಾಗಿ ಗಾಳಿ ಬೀಸುವ ಜಾಗಗಳಲ್ಲಿ ಕಣಗಳನ್ನು ಮಾಡಿಕೊಳ್ಳುತ್ತಿದ್ದರು. ಕಣ ಮಾಡಲಿಕ್ಕಾಗಿಯೇ ರೈತರು ಖಾಲಿ ಹೊಲಗಳಲ್ಲಿ ಜಾಗ ಬಿಟ್ಟುಕೊಳ್ಳುತ್ತಿದ್ದರು. ಈಗ ಇದೆಲ್ಲಾ ಕಣ್ಮರೆಯಾಗಿದೆ.
ತಾಲ್ಲೂಕಿನಲ್ಲಿ ನೀರಾವರಿ ಪ್ರದೇಶ ಹೆಚ್ಚಾದಂತೆ ಆಹಾರ ಧಾನ್ಯಗಳನ್ನು ಬೆಳೆಯುವ ಪ್ರಮಾಣವೂ ಕಡಿಮೆ ಆಗುತ್ತಿದೆ. ಆದರೂ ರಾಸುಗಳ ಮೇವಿನ ದೃಷ್ಟಿಯಿಂದಲಾದರೂ ರಾಗಿ ಬೆಳೆವ ಪರಿಸ್ಥಿತಿ ಇದೆ. ಇತ್ತೀಚಿನ ದಿನಗಳಲ್ಲಿ ಕೂಲಿ ಆಳುಗಳು ದೊರೆಕದ ಕಾರಣ ಯಂತ್ರಗಳನ್ನೇ ಹೆಚ್ಚಾಗಿ ಅವಲಂಬಿಸಿ ಕೃಷಿ ಮಾಡುವಂತಾಗಿದೆ. ಆದರೆ ಯಂತ್ರದಲ್ಲಿ ಒಕ್ಕಣೆ ಮಾಡುವುದರಿಂದ ರಾಗಿ ಉದುರುವಣೆ ಕಡಿಮೆಯಾಗಿ ರೈತರಿಗೆ ನಷ್ಟವಾಗಿದೆ. ಆದರೂ ಕೆಲಸ ಹಗುರವಾಗುವುದು ಎಂಬ ಕಾರಣಕ್ಕಾಗಿ ಅನಿವಾರ್ಯವಾಗಿ ಯಂತ್ರಗಳನ್ನೇ ಅವಲಂಬಿಸುವಂತಾಗಿದೆ ಎನ್ನುತ್ತಾರೆ ರೈತ ರವೀಂದ್ರ.
ರಸ್ತೆಗಳನ್ನೇ ಕಣಗಳನ್ನಾಗಿ ಮಾಡಿಕೊಂಡು ರೋಣುಕಲ್ಲಿಗೆ ಬದಲಾಗಿ ಟ್ರ್ಯಾಕ್ಟರ್ ಹಾಗೂ ರಸ್ತೆಗಳಲ್ಲಿ ಓಡಾಡುವ ವಾಹನಗಳನ್ನೇ ಬಳಸಿ ಒಕ್ಕಣೆ ಮಾಡುವುದರಿಂದ ವಾಹನ ಸವಾರರರು ಹಾಗೂ ದಾರಿಹೋಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಆಹಾರ ಧಾನ್ಯಗಳನ್ನು ಒಕ್ಕಣೆ ಮಾಡಿ ನಂತರ ರಸ್ತೆಯಲ್ಲಿಯೇ ತೂರುವುದರಿಂದ ಆದರಿಂದ ಬರುವ ದೂಳು ದಾರಿಹೋಕರ ಹಾಗೂ ವಾಹನ ಸವಾರರ ಕಣ್ಣಿಗೆ ಬಿದ್ದು, ಅಪಘಾತಗಳು ನಡೆಯುತ್ತಿವೆ.
ಹಳ್ಳಿಗಳಲ್ಲಿ ಈ ಹಿಂದೆ ಕಣ ಮಾಡುತ್ತಿದ್ದ ಜಾಗಗಳಲ್ಲಿ ಇಂದು ಅಡಿಕೆ, ತೆಂಗಿನ ಮರಗಳನ್ನು ಬೆಳೆಸಿಕೊಂಡು ಕಣ ಮಾಡಲು ಜಾಗವಿಲ್ಲದಂತಾಗಿದೆ. ಖಾಲಿ ಇರುವ ಹೊಲಗಳಲ್ಲಿ, ಅಡಿಕೆ ಅಥವಾ ತೆಂಗಿನ ತೋಟದಲ್ಲಿಯೇ ಅಲ್ಪ–ಸ್ವಲ್ಪ ಆಹಾರಧಾನ್ಯ ಬೆಳೆದುಕೊಳ್ಳುವ ರೈತರು ಕಣ ಮಾಡುವ ಬದಲಾಗಿ ರಸ್ತೆಗಳಲ್ಲೇ ತಂದು ಒಕ್ಕಣೆ ಮಾಡುತ್ತಿದ್ದಾರೆ.
ಗ್ರಾಮೀಣ ಭಾಗದ ರಸ್ತೆಗಳು ಕಿರಿದಾಗಿದ್ದರೂ, ಅಂತಹ ರಸ್ತೆಗಳಲ್ಲಿಯೂ ಒಕ್ಕಣೆ ಮಾಡುವುದರಿಂದ ವಾಹನ ಸವಾರರು ಜಾರಿಬಿದ್ದು ಆಸ್ಪತ್ರೆ ಸೇರಿರುವ ನಿದರ್ಶನಗಳಿವೆ ಎನ್ನುತ್ತಾರೆ ರೈತ ತಿಮ್ಮಜ್ಜ.
ಹಲವು ವರ್ಷಗಳ ಹಿಂದೆ ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕ ಕಣಗಳನ್ನು ನಿರ್ಮಿಸಲಾಗಿತ್ತು. ಆದರೆ ಕಳಪೆ ಕಾಮಗಾರಿಯಿಂದಾಗಿ ಕೆಲವೇ ವರ್ಷಗಳಲ್ಲಿ ಅವು ಹಾಳಾಗಿವೆ. ಆದ್ದರಿಂದ ರೈತರು ಅನಿವಾರ್ಯವಾಗಿ ರಸ್ತೆಗಳನ್ನೇ ಕಣಗಳನ್ನಾಗಿಸಿಕೊಂಡು ಒಕ್ಕಣೆ ಮಾಡುತ್ತಿದ್ದಾರೆ.
ಕೆಲಸವನ್ನು ಹಗುರ ಮಾಡಿಕೊಳ್ಳುವ ನಿಟ್ಟಿನಲ್ಲಿ ರೈತರು ಅಪಾಯವನ್ನು ಮೈ ಮೇಲೆ ತಂದುಕೊಳ್ಳುತ್ತಿದ್ದಾರೆ. ಟಾರ್ ರಸ್ತೆಗಳಲ್ಲಿ ಒಕ್ಕಣೆ ಮಾಡುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತದೆಮಂಜುನಾಥ್ ಉಪನ್ಯಾಸಕ
ಈ ಹಿಂದೆ ಗ್ರಾಮಗಳಲ್ಲಿ ನಿರ್ಮಿಸಿದ್ದ ಸಿಮೆಂಟ್ ಕಣಗಳು ಸಂಪೂರ್ಣವಾಗಿ ಹಾಳಾಗಿ ಹೋಗಿರುವುದರಿಂದ ಸರ್ಕಾರ ರೈತರಿಗೆ ಅನುಕೂಲವಾಗುವಂತೆ ಗುಣಮಟ್ಟದ ಕಾಂಕ್ರಿಟ್ ಕಣಗಳನ್ನು ಮತ್ತೆ ನಿರ್ಮಿಸಿಕೊಟ್ಟಲ್ಲಿ ರೈತರು ರಸ್ತೆಗಳಲ್ಲಿ ಒಕ್ಕಣೆ ಮಾಡುವುದು ತಪ್ಪುತ್ತದೆರಂಗಸ್ವಾಮಿ ವಕೀಲ
ಇತ್ತೀಚೆಗೆ ಆಹಾರ ಬೆಳೆಗಳನ್ನು ಬೆಳೆಯುವ ಪ್ರಮಾಣ ಕಡಿಮೆಯಾಗಿದೆ. ಕೂಲಿ ಆಳುಗಳ ಕೊರತೆಯಿಂದಾಗಿ ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿದ್ದೆವು. ಆದರೆ ಇತ್ತೀಚೆಗೆ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಇನ್ನು ಮುಂದೆ ಕಣ ಮಾಡಿಕೊಂಡು ಒಕ್ಕಣೆ ಮಾಡುತ್ತೇವೆಶಿವಕುಮಾರ್ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.