ADVERTISEMENT

ಭರಣಿ ಮಳೆ ಸಿಂಚನಕ್ಕೆ ಕಾದಿರುವ ರೈತರು

ಹುಳಿಯಾರು: ಹೆಸರು ಬಿತ್ತನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 6:07 IST
Last Updated 29 ಏಪ್ರಿಲ್ 2021, 6:07 IST
ಹೆಸರುಕಾಳು ಬಿತ್ತನೆಗೆಯಲ್ಲಿ ತೊಡಗಿರುವುದು...
ಹೆಸರುಕಾಳು ಬಿತ್ತನೆಗೆಯಲ್ಲಿ ತೊಡಗಿರುವುದು...   

ಹುಳಿಯಾರು: ಹೋಬಳಿ ವ್ಯಾಪ್ತಿಯಲ್ಲಿ ಒಂದೆರಡು ಬಾರಿ ಹದ ಮಳೆಯಾಗಿರುವುದರಿಂದ ಕೆಲ ರೈತರು ಹೆಸರುಕಾಳು ಬಿತ್ತನೆಗೆ ಮುಂದಾಗಿದ್ದಾರೆ. ಏಪ್ರಿಲ್ 27ರಿಂದ ಭರಣಿ ಮಳೆ ಆರಂಭವಾಗಿದ್ದು, ಸದ್ಯ ಮಳೆ ಬಂದರೆ ಮತ್ತಷ್ಟು ರೈತರು ಪೂರ್ವ ಮುಂಗಾರಿನ ಬಿತ್ತನೆಗೆ ಕಾಯುತ್ತಿದ್ದಾರೆ.

ಯುಗಾದಿ ಹಬ್ಬದಂದು ಹೊಸ ಅಶ್ವಿನಿ ಮಳೆ ಆರಂಭವಾಗಿದೆ. ಆರಂಭದಲ್ಲಿಯೇ ಮಳೆ ಬಂದು ರೈತರು ಹಿಂಗಾರು ಬೆಳೆಯನ್ನು ಕೊಯ್ಲು ಮಾಡಿದ್ದ ಹೊಲಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಅನುವು ಮಾಡಿಕೊಟ್ಟಿತ್ತು. ಭರಣಿ ಮಳೆ ಹೆಸರು ಬಿತ್ತನೆಗೆ ಸಕಾಲವಾಗಿದ್ದು, ಈಗ ಮಳೆಯ ಪ್ರವೇಶವಾಗಿದೆ. ಸಾಮಾನ್ಯವಾಗಿ ಭರಣಿ ಮಳೆ ಎಲ್ಲ ಬೆಳೆಗಳಿಗೂ ಪೂರವಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಪೂರ್ವ ಮುಂಗಾರಿನ ವೇಳೆ ಮಳೆ ಬಾರದೆ ಬೀಜ ಬಿತ್ತನೆಗೆ ಹಿನ್ನಡೆಯಾಗಿತ್ತು. ಈ ಬಾರಿ ಆರಂಭದಲ್ಲಿಯೇ ಮಳೆ ಅಲ್ಲಲ್ಲಿ ಆಗುತ್ತಿದ್ದು ಕೆಲ ಕಡೆ ಹೆಸರು ಬಿತ್ತನೆಯನ್ನು ಮಾಡುತ್ತಿದ್ದಾರೆ.

ಕೆಲ ರೈತರು ಭರಣಿ ಮಳೆ ಆಗಮನವನ್ನು ಎದುರು ನೋಡುತ್ತಿದ್ದು, ಮಳೆ ಬಂದ ತಕ್ಷಣವೇ ಬಿತ್ತನೆಗೆ ಚಾಲನೆ ನೀಡಲಿದ್ದಾರೆ. ಕಳೆದ ನಾಲ್ಕೈದು ತಿಂಗಳಿನಿಂದ ಬಿಸಿಲಿಗೆ ಬೆಂದಿರುವ ಭೂಮಿಗೆ ಒಂದೆರಡು ಬಾರಿಯ ಹದ ಮಳೆಯಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಸದ್ಯ ಈ ವಾರದಲ್ಲಿ ಮಳೆ ಬಂದರೆ ಬಿತ್ತನೆಗೆ ಸಹಕಾರಿಯಾಗುತ್ತದೆ ಎಂದು ರೈತರು ಅಭಿಪ್ರಾಯ ಪಡುತ್ತಾರೆ.

ADVERTISEMENT

ಈ ಭಾಗದಲ್ಲಿ ಹದ ಮಳೆ ಬಂದಿರುವುದರಿಂದ ಉತ್ತಮ ಹದವಿದ್ದ ಕಾರಣ ಹೆಸರು ಬಿತ್ತನೆ ಮಾಡಿದ್ದೇನೆ. ಒಂದೆರಡು ದಿನಗಳಲಿ ಮಳೆ ಬಂದರೆ ಮೊಳಕೆ ಒಡೆಯುತ್ತವೆ ಎಂದು ಲಕ್ಕೇನಹಳ್ಳಿ ಗ್ರಾಮದ ರೈತ ಎಲ್.ಎನ್.ವಿಜಯಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.