ADVERTISEMENT

ಎನ್‌ಡಿಎ ಸರ್ಕಾರದಲ್ಲಿ ಅಲ್ಪಸಂಖ್ಯಾತರ ಮೇಲೆ ಹೆಚ್ಚು ದೌರ್ಜನ್ಯ

ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಪತ್ರಿಕಾಗೋಷ್ಠಿಯಲ್ಲಿ ಆರೋಪ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 17:50 IST
Last Updated 11 ಏಪ್ರಿಲ್ 2019, 17:50 IST
ಬಿ.ಎಂ.ಫಾರೂಕ್
ಬಿ.ಎಂ.ಫಾರೂಕ್   

ತುಮಕೂರು: ‘ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ದೇಶದಲ್ಲಿ ಅಲ್ಪಸಂಖ್ಯಾತರು, ದಲಿತರ ಮೇಲೆ ವ್ಯಾಪಕ ದೌರ್ಜನ್ಯ ನಡೆದಿವೆ. ಮತ್ತೊಮ್ಮೆ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತಷ್ಟು ದೌರ್ಜನ್ಯ ಹೆಚ್ಚಲಿವೆ. ಈ ಚುನಾವಣೆಯಲ್ಲಿ ನಾಗರಿಕರು ಯಾವುದೇ ಕಾರಣಕ್ಕೂ ಬಿಜೆಪಿ ಬೆಂಬಲಿಸಬಾರದು’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ಮನವಿ ಮಾಡಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಅಲ್ಪಸಂಖ್ಯಾತರು, ದಲಿತರ ಮೇಲೆ ದೌರ್ಜನ್ಯ, ದಲಿತರ ಮೇಲೆ ಅತ್ಯಾಚಾರ ಪ್ರಕರಣ ಹೆಚ್ಚಾಗಿವೆ. ವಿಶೇಷವಾಗಿ ಉತ್ತರ ಪ್ರದೇಶದಲ್ಲಿಯೇ ಅತ್ಯಂತ ಗರಿಷ್ಠ ದೌರ್ಜನ್ಯ ಪ್ರಕರಣಗಳು ಅಲ್ಪಸಂಖ್ಯಾತರ ಮೇಲೆ ನಡೆದಿವೆ. ದೇಶಕ್ಕೆ ಚೌಕೀದಾರ್ ಎಂದು ಹೇಳುವ ಪ್ರಧಾನಿ ನರೇಂದ್ರ ಅವರ ಕಣ್ಣಿಗೆ ಇದಾವುದು ಕಂಡಿಲ್ಲ' ಎಂದು ಟೀಕಿಸಿದರು.

‘ರಫೇಲ್ ಯುದ್ಧ ವಿಮಾನ ಖರೀದಿ ಪ್ರಕರಣಕ್ಕೆ ಸಂಬಂಧದ ಫೈಲ್ ಕಳೆದು ಹೋಗಿದೆಯಂತೆ. ಹಾಗಾದರೆ ಚೌಕೀದಾರ್ ಏನು ಮಾಡುತ್ತಿದ್ದರು? ಪುಲ್ವಾಮಾದಲ್ಲಿ ಉಗ್ರಗಾಮಿಗಳು ಸೈನಿಕರ ವಾಹನ ಸಾಗುವ ಮಾರ್ಗದಲ್ಲಿ ಬಾಂಬ್ ಇಟ್ಟು ಸ್ಫೋಟಗೊಳಿಸಿದರು. ಚೌಕೀದಾರ್ ಅವರು ಏನು ಮಾಡುತ್ತಿದ್ದರು? ಇದು ಅವರ ಭದ್ರತಾ ಲೋಪವಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

‘ಬರೀ ಸುಳ್ಳುಗಳನ್ನೇ ದೇಶದ ಜನರಿಗೆ ಹೇಳಿಕೊಂಡು ಬಂದಿರುವ ಮೋದಿ ಅವರ ಕೊಡುಗೆ ಶೂನ್ಯ. ಸಿಬಿಐ, ಆದಾಯ ತೆರಿಗೆ ಇಲಾಖೆಯಂತಹ ಕೇಂದ್ರ ಸರ್ಕಾರದ ಹಿಡಿತದಲ್ಲಿರುವ ಇಲಾಖೆಗಳನ್ನ ರಾಜಕೀಯ ದ್ವೇಷಕ್ಕೆ ಬಳಸಿಕೊಳ್ಳುತ್ತಿದ್ದಾರೆ. ನಾಲ್ಕೂವರೆ ವರ್ಷದ ಆಡಳಿತದಲ್ಲಿ ಏನೂ ದೇಶದ ಜನರಿಗೆ ಅನುಕೂಲ ಆಗಿಲ್ಲ. ಬದಲಾಗಿ ಸಂಕಷ್ಟಗಳು ಎದುರಿಸುತ್ತಿದ್ದಾರೆ ’ಎಂದು ಟೀಕಿಸಿದರು.

ದೇವೇಗೌಡರಿಗೆ ಅಲ್ಪಸಂಖ್ಯಾತರ ಬೆಂಬಲ
‘ಜೆಡಿಎಸ್ ವರಿಷ್ಠರಾದ ಎಚ್.ಡಿ.ದೇವೇಗೌಡ ಅವರಂತಹ ರಾಜಕೀಯ ಮುತ್ಸದ್ದಿ ದೇಶದಲ್ಲಿಯೇ ಇಲ್ಲ. ಅವರ ಅಪಾರ ರಾಜಕೀಯ ಅನುಭವ ದೇಶದಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ. ಹೀಗಾಗಿ, ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿರುವ ಅವರನ್ನು ಅಲ್ಪಸಂಖ್ಯಾತರು ಬೆಂಬಲಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ’ ಎಂದು ಫಾರೂಕ್ ಹೇಳಿದರು.

‘ಶೇ 95ರಷ್ಟು ಅಲ್ಪಸಂಖ್ಯಾತರ ಮತಗಳು ಮೈತ್ರಿ ಪಕ್ಷದ ಅಭ್ಯರ್ಥಿಗೆ ಹಾಕಿಸಲು ಶತಪ್ರಯತ್ನ ಮಾಡುತ್ತಿದ್ದೇವೆ. ದೇವೇಗೌಡರಂತಹ ನಾಯಕರು ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು, ತುಮಕೂರು ಕ್ಷೇತ್ರದ ಜನರು ಸೌಭಾಗ್ಯ ಎನ್ನಬಹುದು. ಅವರ ಆಯ್ಕೆಯಿಂದ ಕ್ಷೇತ್ರದ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ದೇವೇಗೌಡರು ಅಪಾರ ರಾಜಕೀಯ ಅನುಭವಿಗಳು. ಅವರು ತುಮಕೂರು ಕ್ಷೇತ್ರದಿಂದ ಆಯ್ಕೆಗೊಂಡು ಮತ್ತೊಮ್ಮೆ ಪ್ರಧಾನಿಯಾಗುವ ಅವಕಾಶ ಸಿಕ್ಕರೆ ದೇಶದ ಜ್ವಲಂತ ಸಮಸ್ಯೆ ಪರಿಹರಿಸಲಿದ್ದಾರೆ ಎಂಬ ವಿಶ್ವಾಸವಿದೆ' ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡ ಷಫಿ ಅಹಮ್ಮದ್, ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಇಕ್ಬಾಲ್ ಜೆಡಿಎಸ್ ಮುಖಂಡರಾದ ತನ್ವೀರ್,ನವೀದ್, ಇಕ್ಬಾಲ್, ಸುಲ್ತಾನ್,ಮುಷ್ತಾಕ್ ಅಹಮ್ಮದ್, ಬಾಬು ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.